ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ.ಆ.6
ಗ್ರಾಮೀಣ ರಸ್ತೆ ಮೂಲಕ ಸಂಚರಿಸಬೇಕಾದ ಖಾಸಗಿ ಬಸ್ ಪರವಾನಗಿ ಇಲ್ಲದೆ ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದೆ ಎಂದು ಆರೋಪಿಸಿ ಸಾಸಲು ಗ್ರಾಮದಲ್ಲಿ ಗ್ರಾಮಸ್ಥರು ಖಾಸಗಿ ಬಸ್ಸೊಂದನ್ನು ತಡೆದು ಪ್ರತಿಭಟನೆ ನಡೆಸಿರುವ ಘಟನೆ ತಾಲೂಕಿನ ಸಾಸಲು ಹೋಬಳಿ ಕೇಂದ್ರದಲ್ಲಿ ನಡೆದಿದೆ.
ಪ್ರತಿಭಟನೆ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಈ ಬಸ್ ಬೆಂಗಳೂರಿನಿಂದ ಹೆಸರಘಟ್ಟ, ಮಧುರೆ(ಕನಸವಾಡಿ), ದೊಡ್ಡಬೆಳವಂಗಲ, ಸಾಸಲು, ಆರೂಡಿ, ಬೈರೇನಹಳ್ಳಿ ಮಾರ್ಗವಾಗಿ ಮಧುಗಿರಿ ಮತ್ತು ವೈಎನ್ ಹೊಸಕೋಟೆಗೆ ತೆರಳಬೇಕು.
ಈ ಮಾರ್ಗಕ್ಕೆ ಪರವಾನಗಿ ಹೊಂದಿರುವ ಬಸ್ಸು, ಅದನ್ನು ಮೀರಿ ಪರವಾನಗಿ ಇಲ್ಲದ ಮಾರ್ಗವಾದ ವೈಎನ್ ಹೊಸಕೋಟೆ, ಮಧುಗಿರಿ, ಬೈರೇನಹಳ್ಳಿ, ಅಲ್ಲೀಪುರ, ತೊಂಡೇಬಾವಿ, ದೊಡ್ಡಬಳ್ಳಾಪುರ, ಹೆಬ್ಬಾಳ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿದೆ.
ಆರೂಢಿಯಿಂದ ಪ್ರಾರಂಭವಾಗಿ ಮಧುರೆ ವರೆಗಿನ ಅನೇಕ ಗ್ರಾಮಗಳ ನೂರಾರು ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗಿದೆ.
ಸುಮಾರು 60ಕ್ಕೂ ಹೆಚ್ಚು ಗ್ರಾಮಗಳ ಮೂಲಕ ಈ ಬಸ್ ಮುಖ್ಯರಸ್ತೆ ಬರಬೇಕು. ಅದನ್ನು ಬಿಟ್ಟು ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿರುವುದು ಅಕ್ಷೇಪಾರ್ಹ ಎಂದರು.
ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಸಾರಿಗೆ ನಿಮಯ ಪಾಲಿಸದ ದ್ವಿಚಕ್ರವಾಹನಗಳಿಗೇ ದಂಡ ವಿಧಿಸುವ ಆರ್ಟಿಓ ಅಧಿಕಾರಿಗಳು ಈ ಬಗೆಯ ಅಕ್ರಮ ಬಸ್ ಸಂಚಾರದ ಕುರಿತು ಚಕಾರ ಎತ್ತುವುದಿಲ್ಲ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಇದೇ ರೀತಿ ಪರವಾನಗಿ ಇಲ್ಲದ ಮಾರ್ಗದಲ್ಲಿ ಅನೇಕ ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ.
ಅಪಘಾತಗಳು ನಡೆದರೂ ಎಚ್ಚೆತ್ತುಕೊಂಡಿಲ್ಲ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ ಎಂದು ಗ್ರಾಮಸ್ಥ ನರಸಿಂಹಮೂರ್ತಿ ಆರೋಪಿಸಿದರು.
ಸಾಸಲು ಗ್ರಾಮದ ಮೂಲಕ ಬೆಳಗಿನ ವೇಳೆ ಸಂಚರಿಸುವ ಈ ಬಸ್ಸು ನಿರ್ದಿಷ್ಟ ಮಾರ್ಗ ಬದಲಿಸಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ವಿದ್ಯಾರ್ಥಿಗಳು, ನೌಕರರು ಪ್ರಯಾಣಿಕರು ಪರಿತಪಿಸುವಂತಾಗಿದೆ. ಖಾಸಗಿ ಬಸ್ ಪರವಾನಗಿ ಈ ಮಾರ್ಗದಲ್ಲಿರುವುದರಿಂದ ಸರ್ಕಾರಿ ಬಸ್ ಅನ್ನು ಇದೇ ಸಮಯದಲ್ಲಿ ಸಂಚಾರಕ್ಕೆ ಬಿಡುವ ಅವಕಾಶ ಇಲ್ಲ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಹೇಳುತ್ತಾರೆ.
ಒಟ್ಟಾರೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.ಆರ್ಟಿಓ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಬಸ್ ಅನ್ನು ಸಂಚರಿಸಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ಬಸ್ ಮೂಲಕ ಕಳುಹಿಸಲಾಯಿತು.