ಕನಕಪುರ: ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ ಬೇಲಿಗೆ ತಗುಲಿ ಕಾಡಾನೆಯೊಂದು ಮೃತಪಟ್ಟ ಘಟನೆ ಕನಕಪುರ ತಾಲೂಕಿನ ತಮಿಳುನಾಡು ಗಡಿಗ್ರಾಮ ಚಿಕ್ಕೊಂಡನಹಳ್ಳಿ ಸಮೀಪದ ಬಂಡೆದೊಡ್ಡಿ ಹಳ್ಳದಲ್ಲಿ ನಡೆದಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಚಿಕ್ಕೊಂಡನಹಳ್ಳಿ ಕೆರೆಗೆ ನೀರು ಕುಡಿಯಲು ಬಂದ ಕಾಡಾನೆಗಳ ಹಿಂಡಿನಲ್ಲಿ ಸುಮಾರು 25 ವರ್ಷ ವಯಸ್ಸಿನ ಹೆಣ್ಣಾನೆಯೊಂದು ಬಂಡೆಹಳ್ಳದ ಮೂಲಕ ನಡೆಯುತ್ತಾ ಬಂದು ನೀರುಹರಿಯುವ ಹಳ್ಳದ ಸಮೀಪದ ಶಿವನಾಯ್ಕ ಎಂಬುವವರ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದೆ.
ಅರಣ್ಯದಂಚಿನಲ್ಲಿ ಜಮೀನು ಹೊಂದಿರುವ ಶಿವನಾಯ್ಕ ಟೊಮೊಟೋ ಹಣ್ಣು ಬೆಳೆಯುತ್ತಿದ್ದು ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಹಾಗೂ ಕಳ್ಳಕಾರರಿಂದ ರಕ್ಷಣೆ ಹೊಂದಲು ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿದ್ದ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸಿಎಫ್ ಪುಟ್ಟಸ್ವಾಮಿ, ವಲಯ ಅರಣ್ಯಾಧಿಕಾರಿ ರವಿಕುಮಾರ್, ಆರಕ್ಷಕ ಉಪನಿರೀಕ್ಷಕ ಪ್ರಹ್ಲಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಶಿವನಾಯ್ಕನ ಮೇಲೆ ಅರಣ್ಯ ಕಾಯಿದೆ ಹಾಗೂ ವನ್ಯಜೀವಿ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.