ಹೊಸಕೋಟೆ: ಗ್ರಾಮಸ್ಥರು ಸಮಸ್ಯೆಗಳನ್ನು ಶೀಘ್ರವಾಗಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಪರಿಹರಿಸಿಕೊಳ್ಳಲು ಗ್ರಾಮಸಭೆಗಳು ಸಹಕಾರಿಯಾಗಿವೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಡಿ.ಟಿ. ವೆಂಕಟೇಶ್ ಹೇಳಿದರು.
ಅವರು ತಾಲೂಕಿನ ದೊಡ್ಡಗಟ್ಟಿಗನಬ್ಬೆಯಲ್ಲಿ ನಡೆದ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಮಾತನಾಡಿದರು. ತಾಲೂಕಿನ ಎಲ್ಲಾ ಗ್ರಾಮಗಳ ಮನೆ ಗಳಲ್ಲೂ ಶೌಚಾಲಯ ಕಡ್ಡಾಯವಾಗಿದ್ದು, ಗ್ರಾಮಸ್ಥರು ಸರಕಾರದ ಸಹಾಯಧನವನ್ನು ಪಡೆದುಕೊಂಡು ಮನೆ ನಿರ್ಮಾಣ ಮಾಡುವ ಹಂತದಲ್ಲಿಯೇ ಶೌಚಾಲಯವನ್ನು ನಿರ್ಮಿಸಿ ಕೊಳ್ಳಬೇಕು. ಇದರಿಂದ ನೈರ್ಮಲ್ಯ ಕಾಪಾಡಲು, ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗಲಿದೆ ಎಂದರು.
ಅಧಿಕಾರಿಗಳು ಸರಕಾರದ ಸೌಲಭ್ಯಗಳ ಬಗ್ಗೆ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟು ಪಡೆಯಲು ಅಗತ್ಯ ಮಾರ್ಗದರ್ಶನ ನೀಡಬೇಕು ಎಂದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಮೂರ್ತಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ವಿಫಲವಾಗಿರುವ ಕೊಳವೆ ಬಾವಿಗಳನ್ನು ಮುಚ್ಚುವಂತೆ ಸರಕಾರ ಆದೇಶ ಹೊರಡಿಸಿದ್ದು, ಗ್ರಾಮಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು. ವಿಫಲವಾಗಿರುವ ಕೊಳವೆ ಬಾವಿಗಳನ್ನು ಮುಚ್ಚುವ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಂತಹವರ ವಿರುದ್ಧ ಮೊಕದ್ದಮೆ ಹೂಡುವುದು ಅನಿವಾರ್ಯವಾಗಲಿದೆ ಎಂದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹಗೊಂಡ ಸಂಪನ್ಮೂಲದಲ್ಲಿ ಹಿಂದುಳಿದ ವರ್ಗಗಳಿಗೆ ಶೇ.25, ರಸ್ತೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಶೇ. 20, ಅಂಗವಿಕಲರಿಗೆ ಶೇ.3ರಷ್ಟು ಅನುದಾನವನ್ನು ಬಳಸಲಾಗಿದೆ ಎಂದು ವಿವರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಾಮಿನಿ ಗೌಡ, ಉಪಾಧ್ಯಕ್ಷ ರವಿ, ಉಮಾವತಿ, ನಂಜುಂಡಾಚಾರಿ, ವಿವಿಧ ಸರಕಾರಿ ಉಲಾಖೆಗಳ ಅಧಿಕಾರಿಗಳು, ಪ್ರತಿನಿಧಿಗಳು ಭಾಗವಹಿಸಿದ್ದರು.