ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇದು ಗ್ರಾಮಾಂತರ ರಾಜಕೀಯ ಲೆಕ್ಕಾಚಾರ

Srinivasa Murthy VN
Updated On : 9 Feb 2014, 11:49 am

- ಮತ್ತೀಕೆರೆ ಜಯರಾಮ್
ರಾಮನಗರ: ಜಿದ್ದಾಜಿದ್ದಿನ ಅಖಾಡವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಹಾಲಿ ಸಂಸದ ಡಿ.ಕೆ.ಸುರೇಶ್ ಅವರಿಗೇ ಟಿಕೆಟ್ ಅಖೈರುಗೊಳಿಸಿದೆ. ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.  
ಕಳೆದ ಉಪ ಚುನಾವಣೆ ಸಮರದಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದ ಸಾಧನೆ ಸುರೇಶ್ ಬೆನ್ನಿಗಿದೆ. ಇಷ್ಟಲ್ಲದೆ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಸುರೇಶ್ ಅವರಿಗೆ ಟಿಕೆಟ್ ತಪ್ಪಿಸಿ, ಸಡ್ಡು ಹೊಡೆಯುವ ಪ್ರತಿಸ್ಪರ್ಧಿಗಳಿಲ್ಲ. ಹೀಗಾಗಿ ಅವರ ಬಿ ಫಾರಂ ದಾರಿ ಸುಗಮ.
ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ ಇಲ್ಲವಾದರೂ ಇರುವ ಏಕೈಕ ಆಕಾಂಕ್ಷಿ ಹೆಸರನ್ನೇ ಅಂತಿಮಪಡಿಸಲು ಮೀನಮೇಷ ಎಣಿಸಲಾಗುತ್ತಿದೆ. ಶತಾಯ ಗತಾಯ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಹೋರಾಟ ನಡೆಸುತ್ತಿರುವ ಜೆಡಿಎಸ್ ತನ್ನ ಅಭ್ಯರ್ಥಿ ಯಾರೆನ್ನುವ ವಿಷಯದಲ್ಲಿ ಗುಟ್ಟು ಬಿಡದೆ, ಇನ್ನೂ ಅಳೆದು ಸುರಿವ ಲೆಕ್ಕಾಚಾರ ಹಾಕುತ್ತಿದೆ.
ದಳದಲ್ಲಿ ತಳಮಳ: ತೃತೀಯ ರಂಗದಲ್ಲಿ ಪ್ರಮುಖ ಪಾತ್ರ ವಹಿಸಲು ಕನಿಷ್ಠ ಆರೇಳು ಸ್ಥಾನಗಳಲ್ಲಾದರೂ ಗೆಲ್ಲಬೇಕೆಂದು ಪಣ ತೊಟ್ಟಿರುವ ಜೆಡಿಎಸ್ ಈ ಕ್ಷೇತ್ರದಲ್ಲಿ ಮರಳಿ ಪಾರಮ್ಯ ಸ್ಥಾಪನೆಗೆ ಹವಣಿಸುತ್ತಿದೆ. ಈ ಪಕ್ಷಕ್ಕೆ ಸಮರ್ಥ ಹುರಿಯಾಳು ಆಯ್ಕೆಯದ್ದೇ ತಲೆನೋವಾಗಿ ಪರಿಣಮಿಸಿದೆ. ಸತತ ಎರಡು ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೆಸರು ಚಿಕ್ಕಬಳ್ಳಾಪುರದಲ್ಲೂ ಚಾಲ್ತಿಯಲ್ಲಿದೆ. ಒಂದೊಮ್ಮೆ ಅಲ್ಲಿಂದಲೇ ಅವರು ಕಣಕ್ಕೆ ಇಳಿದರೆ, ಬೆಂಗಳೂರು ಗ್ರಾಮಾಂತರಕ್ಕೆ ಯಾರು ಎನ್ನುವ ಪ್ರಶ್ನೆ ದಳಪತಿಗಳನ್ನು ಕಾಡುತ್ತಿದೆ.
ಅಪ್ಪ-ಮಗ ಭಿನ್ನ ರಾಗ: ದೇವೇಗೌಡರ ಸ್ಪರ್ಧೆ ಹಾಸನದಲ್ಲೇ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಗೆ ತಮ್ಮ ಸ್ಪರ್ಧೆ ಇಲ್ಲ ಎನ್ನುವುದನ್ನೂ ಖಚಿತಪಡಿಸಿದ್ದಾರೆ. ಇಷ್ಟಾಗಿಯೂ ಸ್ಪರ್ಧೆಗೆ ಬನ್ನಿ ಎಂದು ಇತ್ತ ಬೆಂಗಳೂರು ಗ್ರಾಮಾಂತರ ಮತ್ತು ಅತ್ತ ಮಂಡ್ಯದಿಂದಲೂ ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರು, ಮುಖಂಡರು ಒತ್ತಡ ಹೇರುತ್ತಿದ್ದಾರೆ. ಕೇಂದ್ರದಲ್ಲಿ ಈ ಬಾರಿ ಸರ್ಕಾರ ರಚನೆಯಲ್ಲಿ ಪ್ರಾದೇಶಿಕ ಪಕ್ಷಗಳೇ ಪ್ರಮುಖ ಪಾತ್ರ ವಹಿಸುವ ಸಂಭವವಿದೆ ಎನ್ನುವ ಸಮೀಕ್ಷೆಗಳು ಸಹಜವಾಗಿಯೇ ಕುಮಾರಸ್ವಾಮಿ ಅವರಲ್ಲಿ ಸ್ಪರ್ಧೆಗೆ ಒಲವು ಮೂಡುವ ಸಾಧ್ಯತೆ ತಳ್ಳಿ ಹಾಕಲಾಗದು.  ಒಂದೊಮ್ಮೆ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದರೆ ರಾಜ್ಯದಲ್ಲಿ ಜೆಡಿಎಸ್ ಒಡೆದ ಮನೆ ಆಗಬಹುದೆನ್ನುವ ಆತಂಕವೂ ಅವರನ್ನು ಕಾಡದೆ ಇರಲಾರದು. ಜಮೀರ್ ಅಹಮದ್ ಕಣಕ್ಕೆ ಇಳಿಸಿ ಅಲ್ಪ ಸಂಖ್ಯಾತರ ಮತಗಳನ್ನು ಸೆಳೆಯಲು ಕುಮಾರಸ್ವಾಮಿ ತಂತ್ರ ರೂಪಿಸಿದ್ದರು. ಆದರೆ ಸ್ವತಃ ಜಮೀರ್ ಸ್ಪರ್ಧೆಗೆ ನಿರಾಸಕ್ತಿ ತೋರಿದ್ದಾರೆ. ಪ್ರಭಾಕರ ರೆಡ್ಡಿ ಅಭ್ಯರ್ಥಿ ಆಗುವ ಸಂಭವವಿದೆ.
ಅಲೆ ನಂಬಿದ ಬಿಜೆಪಿ: 1998ರ ಚುನಾವಣೆಯಲ್ಲಿ ಆಗಿನ ಕನಕಪುರ ಕ್ಷೇತದಲ್ಲಿ ಗೆಲ್ಲುವ ಮೂಲಕ ಪವಾಡ ಸೃಷ್ಟಿಸಿದ್ದ ಬಿಜೆಪಿ, ಈ ಬಾರಿ ಮೋದಿ ಅಲೆಯೊಂದಿಗೆ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಬೇಕೆಂದು ಹವಣಿಸಿದೆ. ಆದರೆ, ಘಟಾನುಘಟಿ ಅಭ್ಯರ್ಥಿಗೆ ಹುಡುಕಾಡುತ್ತಿದೆ.
ಬಿಜೆಪಿಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಮೇಲ್ಮನೆ ಸದಸ್ಯ ಅಶ್ವಥ್ ನಾರಾಯಣ್ ಈಗಾಗಲೇ ಹಿಂದೆ ಸರಿದಿದ್ದಾರೆ. ಸದ್ಯಕ್ಕೆ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಮುನಿರಾಜು ಹೆಸರು ಮುಂಚೂಣಿಯಲ್ಲಿದ್ದು, ಅವರಿಗೆ ಬಿ ಟಿಕೆಟ್ ಖಾತ್ರಿಪಡಿಸಲು ಹೈಕಮಾಂಡ್ ಅಧಿಕೃತ ಮುದ್ರೆ ಬಿದ್ದಿಲ್ಲ.  ಕ್ಷೇತ್ರದಲ್ಲಿ ಬಿಜೆಪಿಗೆ ತನ್ನದೇ ಆದ ಮತಬ್ಯಾಂಕ್ ಇದೆ. 2008ರ ಚುನಾವಣೆಯಲ್ಲಿ ಇಲ್ಲಿ ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಅವರಿಗೆ ಬಿಜೆಪಿಯೇ ನಿಟಕ ಸ್ಪರ್ಧಿಯಾಗಿತ್ತು. ಕಣಕ್ಕೆ ಇಳಿಯದೆ ಜೆಡಿಎಸ್‌ಗೆ ಬೆಂಬಲ ನೀಡಿ, ಆ ಪಕ್ಷದೊಟ್ಟಿಗೆ ಇದ್ದ ಅಲ್ಪಸಂಖ್ಯಾತ ಮತದಾರರನ್ನೂ ದೂರವಾಗಿಸಿತು.

ಸಿಪಿವೈ ನಡೆ ನಿಗೂಢ
2008ರಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಒಳಗಾಗಿ ಲೋಕಸಭೆ ಅಖಾಡಕ್ಕೆ ಇಳಿದು ಸೋತು, ಅದಾದ ನಂತರ ವಿಧಾನಸಭೆ ಉಪ ಚುನಾವಣೆಯಲ್ಲೂ ಸೋಲಿನ ಕಹಿ ಅನುಭವಿಸಿದ್ದ ಚನ್ನಪಟ್ಟಣ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ಸಿ.ಪಿ.ಯೋಗೇಶ್ವರ್ ನಡೆ ಈಗಲೂ ನಿಗೂಢವಾಗಿದೆ. ಈ ಬಾರಿಯೂ ಯೋಗೇಶ್ವರ್ ಮತ್ತು ಬಿಜೆಪಿ ನಡುವೆ ಗುಪ್ತ ಮಾತುಕತೆ ನಡೆಯುತ್ತಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಹಬ್ಬಿದೆ. ಅದನ್ನು ಅಲ್ಲಗಳೆದಿರುವ ಯೋಗೇಶ್ವರ್, ಸಮಾನ ಶತ್ರುಗಳ ಪೈಕಿ ಯಾರ ಮಿತ್ರ ಆಗುತ್ತಾರೆ ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement