ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗುರುವಾರ ದೊಡ್ಡಬಳ್ಳಾಪುರ ಬಂದ್

Srinivasa Murthy VN
Updated On : 9 Feb 2014, 11:49 am

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂಬ ನ್ಯಾಯಯುತ ಬೇಡಿಕೆಗೆ ಪೂರಕವಾಗಿ ಸ್ಪಂದಿಸದ ಸರ್ಕಾರದ ವಿರುದ್ಧ ಗಂಭೀರ ಸ್ವರೂಪದ ಹೋರಾಟಕ್ಕೆ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನಿರ್ಧರಿಸಿದೆ.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಭಾನುವಾರ ನಡೆದ ವಿವಿಧ ಸಂಘ-ಸಂಸ್ಥೆಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಜಿಲ್ಲಾ ಕೇಂದ್ರ ದೊಡ್ಡಬಳ್ಳಾಪುರಕ್ಕೆ ವರ್ಗಾವಣೆಯಾಗುವವರಿಗೆ ಪ್ರತಿದಿನ ವಿನೂತನ ರೀತಿಯ ಚಳವಳಿ, ಹೋರಾಟದ ಮೂಲಕ ನಮ್ಮ ನ್ಯಾಯಸಮ್ಮತ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಲಾಗುವುದು. ಅಂಕಿ-ಅಂಶಗಳು ಮತ್ತು ವಾಸ್ತವದ ವಿಚಾರಗಳನ್ನು ಮರೆಮಾಚಿ ಯಾವುದೇ ಬಗೆಯ ವ್ಯವಸ್ಥಿತ ಹುನ್ನಾರಗಳನ್ನು ನಡೆಸುವ ಯತ್ನವನ್ನು ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡಿದರೆ ಅದರ ವಿರುದ್ಧ ಜನಾಕ್ರೋಶ ಗಂಭೀರ ಸ್ವರೂಪದಲ್ಲಿ ವ್ಯಕ್ತಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಲಾಯಿತು.
ಗುರುವಾರ ಬಂದ್: ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ದೊಡ್ಡಬಳ್ಳಾಪುರ ತಾಲೂಕು ಬಂದ್ ನಡೆಸಲಾಗುವುದು. ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷಗಳು, ಶಾಲಾ-ಕಾಲೇಜು, ಆಡಳಿತ ಕಚೇರಿಗಳು, ಸಾರಿಗೆ ಸಂಚಾರ, ವ್ಯಾಪಾರ ವಹಿವಾಟು, ನೇಕಾರಿಕೆ ಸೇರಿದಂತೆ ಎಲ್ಲ ಉದ್ಯಮ-ವ್ಯವಹಾರಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಸರ್ಕಾರಕ್ಕೆ ಜನರ ಸಂದೇಶ ರವಾನಿಸಬೇಕು. ಈ ಬಂದ್ ದಿನದಂದು ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ ಪ್ರದೇಶದ ತೂಬಗೆರೆ, ಸಾಸಲು, ದೊಡ್ಡಬೆಳವಂಗಲ,ಕನಸವಾಡಿ ಹೋಬಳಿಗಳಲ್ಲೂ ಪ್ರತಿಭಟನೆ ನಡೆಸಿ ದೊಡ್ಡಬಳ್ಳಾಪುರ ನಗರದಲ್ಲಿ ಬೃಹತ್ ಚಳವಳಿ ರೂಪಿಸುವುದಾಗಿ ನಿರ್ಧಾರ ಕೈಗೊಳ್ಳಲಾಯಿತು.
ಇಂದು ಪ್ರತಿಭಟನಾ ಮೆರವಣಿಗೆ: ಸೋಮವಾರದಿಂದಲೇ ಚಳವಳಿ ಉಗ್ರಸ್ವರೂಪ ಪಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಇಲ್ಲಿನ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದ ಸಿದ್ಧಲಿಂಗಯ್ಯ ವೃತ್ತದಿಂದ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.  ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಎಲ್ಲ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ. ಇದರ ಮುಂದುವರೆದ ಭಾಗವಾಗಿ ಪ್ರತಿದಿನ ವಿವಿಧ ರೀತಿಯ ಪ್ರತಿಭಟನೆಗಳನ್ನು ಸಂಘಟನೆಗಳ ಸಹಕಾರದಲ್ಲಿ ಹಮ್ಮಿಕೊಳ್ಳಲಾಗುವುದು. ಮಂಗಳವಾರ ಕನ್ನಡಪಕ್ಷದ ನೇತೃತ್ವದಲ್ಲಿ ಡಿಕ್ರಾಸ್ ವೃತ್ತದಲ್ಲಿ ರಸ್ತೆತಡೆ ಕಾರ್ಯಕ್ರಮ, ಬುಧವಾರ ಆರ್‌ಟಿಐ ಕಾರ್ಯಕರ್ತರುಗಳಿಂದ ತಾಲೂಕು ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಮಿತಿ ಪುನಾರಚನೆ: ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಕಾರ್ಯಭಾರ ಹೆಚ್ಚಿದ್ದು, ಹಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷದ ಮುಖಂಡರುಗಳನ್ನು ಒಳಗೊಂಡ ಪೂರ್ಣಪ್ರಮಾಣದ ಹೋರಾಟ ಸಮಿತಿ ರಚನೆ ಮಾಡಲಾಯಿತು. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳನ್ನು ವಿವಿಧ ಹೊಣೆಗಾರಿಕೆಗಳಿಗೆ ನಿಯೋಜಿಸಲಾಯಿತು.
ಸಭೆಯಲ್ಲಿ ಹೋರಾಟ ಸಮಿತಿ ಮುಖಂಡರಾದ ರಾಜೇಂದ್ರಕುಮಾರ್, ಎಂ.ಕೃಷ್ಣಮೂರ್ತಿ, ತೂಬಗೆರೆ ಷರೀಫ್, ರವಿಕಿರಣ್, ಕೆ.ಎಂ.ಹನುಮಂತರಾಯಪ್ಪ, ಹ.ರಾಮಕೃಷ್ಣ, ಮಾ.ಮುನಿರಾಜು, ಸಿದ್ಧರಾಜು, ಸಂಜೀವನಾಯಕ್, ಆರ್. ಚಂದ್ರತೇಜಸ್ವಿ, ಎಚ್.ಎಸ್.ವೆಂಕಟೇಶ್, ಟಿ.ಜಿ.ಮಂಜುನಾಥ್, ವಿಮಲಮ್ಮ, ಪ್ರಮೀಳಾ ಮಹದೇವ್, ವತ್ಸಲ, ಡಿ.ಪಿ.ಆಂಜನೇಯ, ಡಿ.ಎನ್.ತಿಮ್ಮರಾಜು, ಗುರುರಾಜಪ್ಪ, ರಾಜುಸಣ್ಣಕ್ಕಿ, ಶಿವಕುಮಾರ್, ಜನಪರ ಮಂಜು, ಅಲ್ತಾಫ್ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

ಬೇಕಾದವರಿಗೆ ಹಂಚಲು ಜಿಲ್ಲಾ ಕೇಂದ್ರ ವಸ್ತುವಲ್ಲ
ದೊಡ್ಡಬಳ್ಳಾಪುರ: ಜಿಲ್ಲಾ ಕೇಂದ್ರ ಎಂಬುದು ಬೇಕಾದ ರೀತಿಯಲ್ಲಿ ಘೋಷಣೆ ಮಾಡುವುದಕ್ಕೆ ಅದು ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ. ಅಂಕಿ-ಅಂಶಗಳ ಆಧಾರದಲ್ಲಿ ಮತ್ತು ಈ ಹಿಂದೆ ವಿವಿಧ ಜಿಲ್ಲಾ ಕೇಂದ್ರಗಳ ಘೋಷಣೆಗೆ ಅನುಸರಿಸಿರುವ ಮಾನದಂಡಗಳನ್ನು ಅನುಸರಿಸಿಯೇ ಘೋಷಿಸಬೇಕು. ಜಿಲ್ಲಾ ಕೇಂದ್ರವನ್ನು ಪಟ್ಟಣ ಪ್ರದೇಶದ 10-15 ಕಿ.ಮೀ ದೂರದಲ್ಲಿ ಸ್ಥಾಪಿಸುವುದು ಅವೈಜ್ಞಾನಿಕ. ಅದು ಇತಿಹಾಸದಲ್ಲಿ ಎಂದೂ ಆಗಿಲ್ಲ. ಆ ರೀತಿಯಾಗಿ ವರದಿ ಕೊಡುವ ಅಧಿಕಾರಿಗಳಿಗೆ ಬಹುಶಃ ಅನುಭವದ ಕೊರತೆ ಇರಬೇಕು ಎಂದು ಹೋರಾಟ ಸಮಿತಿ ಕಿಡಿಕಾರಿದೆ.

ಉಪವಿಭಾಗಾಧಿಕಾರಿ ಕಚೇರಿ ವರ್ಗಾವಣೆಗೆ ಕ್ರಮ ಕೈಗೊಂಡಿಲ್ಲ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯನ್ನು ಕೇಂದ್ರ ಸ್ಥಳಕ್ಕೆ ವರ್ಗಾಯಿಸಿ ಸರ್ಕಾರದ ಆದೇಶವಾಗಿ 15 ದಿನ ಕಳೆದರೂ ಇನ್ನೂ ಜಿಲ್ಲಾಧಿಕಾರಿಗಳು ಕಚೇರಿ ವರ್ಗಾವಣೆಗೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮೀನ-ಮೇಷ ಎಣಿಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕೂಡಲೇ ಶಾಸಕರು ಉಪವಿಭಾಗಾಧಿಕಾರಿ ಕಚೇರಿಯನ್ನು ದೊಡ್ಡಬಳ್ಳಾಪುರದಲ್ಲಿ ಕಾರ್ಯಾರಂಭ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ತಪ್ಪಿದಲ್ಲಿ ವ್ಯಾಪಕ ಆಂದೋಲನ ಆರಂಭವಾಗಲಿದೆ ಎಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement