ಶಿವಬೀರಯ್ಯ ಅವಿರೋಧ ಆಯ್ಕೆ
ಚನ್ನಪಟ್ಟಣ: ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಬೀರಯ್ಯ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಮಲ್ಲಿಕ್ಸ್ಮೀರ್ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಗೊಂಡಿದ್ದಾರೆ. ಇತ್ತೀಚಿಗೆ ನಡೆದ ಸಂಘದ ಕಾರ್ಯಕಾರಿ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಚುನಾವಣೆ ನಿಗದಿ ಪಡಿಸಲಾಗಿತ್ತು. ಇವರಿಬ್ಬರನ್ನು ಹೊರತು ಪಡಿಸಿ ಬೇರೆ ಯಾರೂ ನಾಮ ಪತ್ರಸಲ್ಲಿಸದ ಹಿನ್ನೆಲೆಯಲ್ಲಿ ಇವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಸುಭಾಷಿಣಿ ಘೋಷಿಸಿದರು.
ವಿದ್ಯಾರ್ಥಿಗಳಿಗೆ ಸತತ ಅಧ್ಯಯನ ಅಗತ್ಯ
ಚನ್ನಪಟ್ಟಣ: ಆಧುನಿಕ ಯುಗ ಸ್ಪರ್ಧಾತ್ಮಕ ಯುಗವಾಗಿ ಬದಲಾಗಿದೆ. ವಿದ್ಯಾರ್ಥಿಗಳು ಸತತ ಅಧ್ಯಯನ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕೇಂಬ್ರಿಡ್ಜಿವಿದ್ಯಾಸಂಸ್ಥೆಯ ಟ್ರಸ್ಟಿ ಚಿತ್ರಾ ಲಿಂಗೇಶ್ ಕುಮಾರ್ ತಿಳಿಸಿದರು. ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಪರೀಕ್ಷೆ ಎಂಬುವುದು ಜೀವನದ ಒಂದು ಭಾಗ. ತಾಳ್ಮೆ ಹಾಗೂ ವಿಶ್ವಾಸದಿಂದ ಅದನ್ನು ಜಯಸಬೇಕು ಎಂದು ತಿಳಿಸಿದರು. ಪರೀಕ್ಷೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಜ್ಞಾನಾತ್ಮಕ ಅಭಿವೃದ್ಧಿಗೆ ನಮ್ಮ ಸಂಸ್ಥೆ ಶ್ರಮಿಸುತ್ತಿದ್ದು ಜೀವನದಲ್ಲಿ ಉತ್ತಮ ಅವಕಾಶಗಳನ್ನು ದೊರಕಿಸಿ ಕೊಂಡು ಶಾಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು.
ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಗೋಷ್ಠಿ
ವಿಜಯಪುರ: ಪಟ್ಟಣದ ಶ್ರೀ ಕೃಷ್ಣ ಸತ್ಸಂಗ ಸೇವಾ ಸಮಿತಿ ವತಿಯಿಂದ 103ನೇ ಗೀತಾ ತತ್ವಾಮೃತ ರಸಧಾರೆ ಹಾಗೂ ಶ್ರೀ ಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯ 54ನೇ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಫೆ. 10 ಸೋಮವಾರದಂದು ಸಂಜೆ 6-30ರಿಂದ 9-30ರವರೆಗೆ ಶ್ರೀ ಕೃಷ್ಣ ಸತ್ಸಂಗದ ಕಾರ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಲಿದೆ. ಸಮಾರಂಭದ ಸಾನಿಧ್ಯವನ್ನು ಭಗವದ್ಗೀತಾ ಪ್ರವಚಕರಾದ ಕೇಶವಭಟ್ಟಾಚಾರ್ಯ ವಹಿಸಲಿದ್ದು, ಬ್ರಾಹ್ಮಣ ಸಂಘದ ಕಾರ್ಯದರ್ಶಿ ಎಚ್.ಎಸ್. ಶೇಷಗಿರಿರಾವ್ ಉದ್ಘಾಟನೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಸತ್ಸಂಗ ಸೇವಾ ಸಮಿತಿಯ ಅಧ್ಯಕ್ಷ ಜೆ.ಎಸ್. ರಾಮಚಂದ್ರಪ್ಪ, ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮುನಿಯಪ್ಪ, ಎಂಪಿಸಿಎಸ್ ಅಧ್ಯಕ್ಷ ನಾರಾಯಣಸ್ವಾಮಿ, ಸಮಾಜ ಸೇವಕ ನಲ್ಲಿ ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ. ಸಂಜೆ 8ರಿಂದ9 ಘಂಟೆಗೆ ಎಂ.ಕೃಷ್ಣಪ್ಪ ಅವರಿಂದ ಕಬೀರ ದಾಸರ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ
ದೊಡ್ಡಬಳ್ಳಾಪುರ: ಫೆಬ್ರವರಿ ಕೊನೆಯ ವಾರದಲ್ಲಿ ನಡೆಸಲು ಉದ್ದೇಶಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಶಾಸಕ ಟಿ. ವೆಂಕಟರಮರಣಯ್ಯ, ತಹಸೀಲ್ದಾರ್ ಕೆ.ಬಿ.ಸಿದ್ದಲಿಂಗಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್ ಸಮ್ಮುಖದಲ್ಲಿ ತಾಲೂಕು ಕಚೇರಿಯಲ್ಲಿ ಫೆ.10ರ ಸೋಮವಾರ ಬೆಳಗ್ಗೆ 11.30ಕ್ಕೆ ಕರೆಯಲಾಗಿದೆ.
'ಜಾಗತಿಕರಣದಿಂದ ವ್ಯಕ್ತಿ-ವ್ಯಕ್ತಿಗಳ ನಡುವೆ ಕಲಹ'
ರಾಮನಗರ: ಜಾಗತಿಕರಣ, ಖಾಸಗೀಕರಣ, ಕೈಗಾರಿಕೀಕರಣದಿಂದ ದೇಶ-ದೇಶಗಳ ನಡುವೆ ಮಾತ್ರವಲ್ಲದೆ ವ್ಯಕ್ತಿ-ವ್ಯಕ್ತಿಗಳ ನಡುವೆಯೂ ಕಲಹಗಳು ಹೆಚ್ಚಿವೆ. ಇದರಿಂದ ಮನುಷ್ಯ ಮಾನಸಿಕ ನೆಮ್ಮದಿಯನ್ನೇ ಕಳೆದುಕೊಂಡಿದ್ದಾನೆ ಎಂದು ತೋಟಗಾರಿಕೆ ಇಲಾಖೆ ನಿವೃತ್ತ ಉಪ ನಿರ್ದೇಶಕ ಗುತ್ತಲಯ್ಯ ತಿಳಿಸಿದರು. ಇಲ್ಲಿನ ಹನುಮಂತನಗರದಲ್ಲಿ ರಥಸಪ್ತಮಿ ಪ್ರಯುಕ್ತ ಅರೇಹಳ್ಳಿಯ ಶ್ರೀರಾಮ ಸೇವಾ ಮಂಡಳಿಯು ಹಮ್ಮಿಕೊಂಡಿದ್ದ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒತ್ತಡದಿಂದ ಮುಕ್ತವಾಗಿ ಮನಃಶಾಂತಿ ಗಳಿಸಿಕೊಳ್ಳಲು ಧ್ಯಾನ, ಭಜನೆಗಳು ಸಹಕಾರಿಯಾಗಿವೆ. ಹೀಗಾಗಿ ಪ್ರತಿನಿತ್ಯ ಒಂದು ಗಂಟೆ ಧ್ಯಾನ ಮಾಡಬೇಕು ಎಂದು ಅವರು ಕರೆ ನೀಡಿದರು. ಸದಾ ಒಂದಿಲ್ಲೊಂದು ಒತ್ತಡಕ್ಕೆ ಸಿಲುಕಿರುವ ಮನುಷ್ಯ ಸಹನೆ ಕಳೆದುಕೊಳ್ಳುವಂತಾಗಿದೆ. ಜಗತ್ತಿನ ವೇಗಕ್ಕೆ ಹೊಂದಿಕೊಳ್ಳಲು ತನ್ನ ಮನಃಶಾಂತಿಯನ್ನೇ ಒತ್ತೆ ಇಟ್ಟಿದ್ದಾನೆ. ಇದರಿಂದ ಮನುಷ್ಯನಲ್ಲಿ ಸಹನಶೀಲತೆ, ಭ್ರಾತೃತ್ವ ಇಲ್ಲದಂತಾಗಿದೆ. ಮನುಷ್ಯ ಆಧ್ಯಾತ್ಮಿಕ ಮೊರೆ ಹೋದರಷ್ಟೇ ಮನಃಶಾಂತಿ ಗಳಿಸಲು ಸಾಧ್ಯ ಎಂದರು. ಮಾನಸಿಕ ಒತ್ತಡದಿಂದ ಮನುಷ್ಯನು ಖಿನ್ನತೆಗೆ ಒಳಗಾಗುತ್ತಿದ್ದಾನೆ. ಸಮಾಜಮುಖಿಯಾಗುವ ಬದಲು ಏಕಾಂತಕ್ಕೆ ಆದ್ಯತೆ ನೀಡುತ್ತಿದ್ದಾನೆ. ಒಂಟಿತನವು ಕ್ರೂರತೆ, ಆತ್ಮಹತ್ಯೆಗಳಿಗೆ ಪ್ರೇರಣೆ ನೀಡುತ್ತಿದೆ. ವಿಶ್ವದ ಶ್ರೀಮಂತ ರಾಷ್ಟ್ರ ಎಂದು ಹೇಳಿಕೊಳ್ಳುವ ಅಮೆರಿಕದಲ್ಲಿಯೇ ಪ್ರತಿ 18 ಸೆಕೆಂಡಿಗೆ ಒಂದು ಆತ್ಮಹತ್ಯೆ ಪ್ರಕರಣ ವರದಿಯಾಗುತ್ತಿದೆ ಎಂದು ಗುತ್ತಲಯ್ಯ ಹೇಳಿದರು.
ಬಸ್-ಬೈಕ್ ಡಿಕ್ಕಿ: ಇಬ್ಬರ ಸಾವು
ಕೆ.ಆರ್. ನಗರ: ಬೈಕ್ ಮತ್ತು ಸಾರಿಗೆ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ತಾಲೂಕಿನ ಶ್ರೀರಾಮಪುರ ಗ್ರಾಮದ ಬಳಿ ಭಾನುವಾರ ಜರುಗಿದೆ. ಸಿದ್ದಾಪುರ ಗ್ರಾಮದ ಕೃಷ್ಣೇಗೌಡ ಎಂಬವರ ಪುತ್ರ ಮಂಜುನಾಥ್ (35) ಮತ್ತು ಚನ್ನಪಟ್ಟಣದ ಅಪ್ಪಗೆರೆ ಗ್ರಾಮದ ಕೆಂಡದಾಸಯ್ಯ ಎಂಬವರ ಪುತ್ರ ರಮೇಶ್ (33) ಮೃತಪಟ್ಟ ದುರ್ದೈವಿಗಳು. ಇವರು ಮೈಸೂರಿನ ವಿಪ್ರೋ ಸಂಸ್ಥೆಯ ಉದ್ಯೋಗಿಗಳು. ಚುಂಚನಕಟ್ಟೆಯಲ್ಲಿ ಪರಿಚಯದವರ ಮದುವೆಗೆ ಆಗಮಿಸಿ, ಬೈಕ್ನಲ್ಲಿ ಊರಿಗೆ ತೆರಳುತ್ತಿದ್ದ ವೇಳೆ ಕೆ.ಆರ್. ನಗರದ ಕಡೆಯಿಂದ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದಾಗ ಈ ಘಟನೆ ನಡೆದಿದೆ.
ವ್ಯಕ್ತಿ ಕೊಲೆ: ಪ್ರಕರಣ ದಾಖಲು
ಮಾಗಡಿ: ವ್ಯಕ್ತಿಯೊಬ್ಬನನ್ನು ಯಾರೋ ಕೊಲೆ ಮಾಡಿ, ಕಬ್ಬಿಣದ ತೊಲೆಗೆ ಕಟ್ಟಿಹಾಕಿರುವ ಘಟನೆ ಪಟ್ಟಣದ ಜಿಕೆಬಿಎಂಎಸ್ ಶಾಲಾ ಆವರದಲ್ಲಿ ನಡೆದಿದೆ. ಪಟ್ಟಣದ ಸೋಮೇಶ್ವರಸ್ವಾಮಿ ಕಾಲೋನಿಯ ವಾಸಿ ಗಾರೆಕೆಲಸ ಕಾರ್ಮಿಕ ಮಂಜುನಾಥ್ (25) ಎಂದು ಗುರುತಿಸಲಾಗಿದೆ. ಮೃತ ಮಂಜುನಾಥ್ ಕಳೆದ ವರ್ಷವಷ್ಟೆ ಮಂಜುಳಾ ಎಂಬಾಕೆಯನ್ನು ವಿವಾಹ ಮಾಡಿಕೊಂಡಿದ್ದು, ಆಕೆಗೆ 20 ದಿನ ಹೆಣ್ಣುಮಗುವಿದೆ. ಮೃತ ಮಂಜುನಾಥ್ ಮೂಲತಃ ರಾವುತ್ತನಹಳ್ಳಿ ವಾಸಿಯಾಗಿದ್ದು, ಕಳೆದ ವರ್ಷವಷ್ಟೆ ಮಾಗಡಿ ಪಟ್ಟಣದ ಸೋಮೇಶ್ವರ ಕಾಲೋನಿಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.