15ರಿಂದ ಉದ್ಯೋಗ ಮೇಳ
ರಾಮನಗರ: ರೀಟೇಲ್ ವರ್ಕ್ ಇಂಡಿಯಾ ಪ್ರೈ.ಲಿ ಕಂಪನಿಯು ಫೆ.15ರಂದು ಬೆಳಗ್ಗೆ 10.30ಕ್ಕೆ ನಗರದ ಕಂದಾಯ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಯಮ ಕಚೇರಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿದೆ. ಸೇಲ್ಸ್ ಪ್ರಮೋಟರ್ಸ್ನ ಒಟ್ಟು 40 ಹುದ್ದೆಗಳಿಗೆ ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ವೇತನ ರು.6878, 18 ರಿಂದ 25 ವಯೋವುತಿಯಲ್ಲಿರಬೇಕು. ಸ್ಮಾರ್ಟ್ ಕಾರ್ಡ್ ಆಫೀಸರ್ಸ್ನ ಒಟ್ಟು 20 ಹುದ್ದೆಗಳಿಗೆ ಪಿಯುಸಿ, ಪದವಿ ವಿದ್ಯಾರ್ಹತೆ, ವೇತನ ರು.8000, 18 ರಿಂದ 25 ವಯೋವುತಿಯಲ್ಲಿರುವ ಹಾಗೂ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಲಿಚ್ಛಿಸುವ ಉದ್ಯೋಗಕಾಂಕ್ಷಿಗಳು ಮೇಳಕ್ಕೆ ಹಾಜರಾಗಬಹುದು.
ಪುರುಷ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು, ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ವ್ಯಕ್ತಿಪರಿಚಯ ಪತ್ರದೊಂದಿಗೆ ಮೇಲ್ಕಂಡ ವಿಳಾಸದಲ್ಲಿ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ದ್ವಿಚಕ್ರ ವಾಹನ ಲೈಸೆನ್ಸ್ ಇರುವವರಿಗೆ ಆದ್ಯತೆ ನೀಡಲಾಗುವುದು, ವಾಸ್ತವ್ಯ ಮತ್ತು ಊಟೋಪಚಾರದ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗೆ ದೂ.080-41713298, ಮೊ.9632657755 ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ಎಚ್.ಜೆ.ಹೇಮಚಂದ್ರ ಕೋರಿದ್ದಾರೆ.
ನಾಳೆ ಪ್ರಗತಿ ಪರಿಶೀಲನಾ ಸಭೆ
ರಾಮನಗರ: 2014ರ ಜನವರಿ ಮಾಹೆಯ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ. ರಾಜು ಅವರ ಅಧ್ಯಕ್ಷತೆಯಲ್ಲಿ ಫೆ.12ರ ಬೆಳಗ್ಗೆ 11ಕ್ಕೆ ಜಿ.ಪಂ. ಸಭಾಂಗಣದಲ್ಲಿ ನಡೆಯಲಿದೆ ಎಂದು ಸಿಇಒ ಡಾ.ವೆಂಕಟೇಶ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಗತಿ ಪರಿಶೀಲನಾ ಸಭೆ
ರಾಮನಗರ: ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಫೆ.12ರ ಬೆಳಗ್ಗೆ 10ಕ್ಕೆ ಕನಕಪುರ, ಮಧ್ಯಾಹ್ನ 3ಕ್ಕೆ ಚನ್ನಪಟ್ಟಣ ತಾಲೂಕಿನಲ್ಲಿ ಹಾಗೂ ಫೆ.13ರ ಬೆಳಗ್ಗೆ 10ಕ್ಕೆ ರಾಮನಗರ ಹಾಗೂ ಮಧ್ಯಾಹ್ನ 3ಕ್ಕೆ ಮಾಗಡಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವರು. ಆಯಾ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಗಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ
ರಾಮನಗರ : ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಫೆ.11ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯಲಿದೆ.
ಸಾರ್ವಜನಿಕರು, ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರು, ಖಾಸಗಿ ಬಸ್ ಮಾಲೀಕರು ಸಭೆಯಲ್ಲಿ ಭಾಗವಹಿಸಿ, ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.