ಜಿಪಂ ಅಧ್ಯಕ್ಷ ಸ್ಥಾನಕ್ಕೆ ಎಚ್.ಸಿ. ರಾಜು ರಾಜಿನಾಮೆ
ರಾಮನಗರ: ಜೆಡಿಎಸ್ನಲ್ಲಿ ಆಗಿದ್ದ ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರದನ್ವಯ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಎಚ್.ಸಿ. ರಾಜು ರಾಜಿನಾಮೆ ಸಲ್ಲಿಸಿದ್ದಾರೆ.
ಕಳೆದ ಶುಕ್ರವಾರ ಅವರು ಬೆಂಗಳೂರು ಪ್ರಾದೇಶಿಕ ಆಯುಕ್ತರಿಗೆ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದು, ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಮತ್ತೊಂದು ಬದಲಾವಣೆ ಸನ್ನಿಹಿತವಾಗಿದೆ.
2ನೇ 20 ತಿಂಗಳ ಅವಧಿಗೆ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ಕೆ.ಮುದ್ದುರಾಜ್ ಯಾದವ್, ಎಚ್.ಸಿ.ರಾಜು ಮತ್ತು ಸುಧಾರಾಜು ಅವರಿಗೆ ಕ್ರಮವಾಗಿ ಹಂಚಿಕೆ ಮಾಡಲಾಗಿತ್ತು. ಮೊದಲಿಬ್ಬರಿಗೆ ತಲಾ 8 ತಿಂಗಳು ಹಾಗೂ ಸುಧಾರಾಜು ಅವರಿಗೆ ಕಡೆಯ 4 ತಿಂಗಳ ಅವಧಿ ಗೊತ್ತುಪಡಿಸಲಾಗಿತ್ತು. ಮುದ್ದುರಾಜ್ ಯಾದವ್ ಅವಧಿಗಿಂತ ಸ್ವಲ್ಪ ತಡವಾಗಿ ರಾಜಿನಾಮೆ ಸಲ್ಲಿಸಿದರೆ, ರಾಜು ಬದಲಾವಣೆ ವಿಚಾರದಲ್ಲಿ ಜೆಡಿಎಸ್ ಪಡಸಾಲೆಯಲ್ಲಿ ಕಳೆದೊಂದು ತಿಂಗಳಿಂದ ಸಾಕಷ್ಟು ಲೆಕ್ಕಾಚಾರದೊಂದಿಗೆ ಅಳೆದು ಸುರಿಯುವ ಕೆಲಸ ನಡೆದಿತ್ತು. ಇದೀಗ ವರಿಷ್ಠರ ಸೂಚನೆ ಮೇರೆಗೆ ರಾಜು ಪದತ್ಯಾಗ ಮಾಡಿದ್ದಾರೆ. ರಾಜು ಅವರಿಂದ ರಾಜಿನಾಮೆ ಪಡೆದು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಾರಥ್ಯವನ್ನು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಕುಮಾರಸ್ವಾಮಿ ವಹಿಸಿದ್ದಾರೆ. ರಾಜು ರಾಜಿನಾಮೆ ಬೆನ್ನಲ್ಲೇ ಜಿ.ಪಂ.ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳೆಯಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.
ಪುಸ್ತಕ ಮಳಿಗೆ ತೆರೆಯಲು ಅವಕಾಶ
ಚನ್ನಪಟ್ಟಣ: ಫೆ.15ರಂದು ನಡೆಯಲಿರುವ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಾಶಕರು ಹಾಗೂ ಸಾಹಿತಿಗಳಿಗಾಗಿ ಪುಸ್ತಕ ಮಳಿಗೆ ತೆರೆಯಲು ಅವಕಾಶವಿದ್ದು, ಪುಸ್ತಕ ಮಳಿಗೆಗೆ ಸೂಕ್ತ ಸ್ಥಳಾವಕಾಶ ಒದಗಿಸಲಾಗುವುದು ಎಂದು ತಾಲೂಕು ಕಸಾಪ ಅಧ್ಯಕ್ಷ ಶಿವಮಾದು ತಿಳಿಸಿದ್ದಾರೆ. ಮಳಿಗೆ ತೆರೆಯಲು ಇಚ್ಛಿಸುವವರು ಆಸಕ್ತರು ಎಂ.ಶಿವಮಾದು ಅಧ್ಯಕ್ಷರು, ತಾ. ಕಸಾಪ ಮೊಬೈಲ್ 9448688641, ವಿಜಯ್ರಾಂಪುರ 9986700032, ರಾಮಕೃಷ್ಣಯ್ಯ ಬ್ರಹ್ಮಣೀಪುರ 9900121493 ಇವರನ್ನು ಸಂಪರ್ಕಿಸಲು ಕೋರಿದ್ದಾರೆ.