ಪ್ರತಿ ತಿಂಗಳು ಅಂಗವಿಕಲರಿಗೆ ಕಾರ್ಯಕ್ರಮ
ಮಾಗಡಿ: ಪ್ರತಿ ತಿಂಗಳು ಅಂಗವಿಕಲರಿಗೆ ವಿವಿಧೋದ್ದೇಶ ಕಾರ್ಯಕ್ರಮ ಹಾಕಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಕಾರ್ಯಕ್ರಮದ ಜತೆಗೆ ತರಬೇತಿ ಶಿಬಿರಗಳು, ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದಾಗಿ ತಾಲೂಕು ಅಂಗವಿಲಕಲರ ಸಂಯೋಜಕ ಅಸ್ಲಾಂಪಾಷ ತಿಳಿಸಿದರು.
ಅವರು ಮಾಗಡಿ ಪಟ್ಟಣದ ಜಿಜಿಎಂಎಸ್ ಶಾಲೆಯಲ್ಲಿ ಎಂ.ಆರ್.ಡಬ್ಲು ಮತ್ತು ವಿ.ಆರ್.ಡಬ್ಲು ವತಿಯಿಂದ ಅಂಗವಿಕಲರಿಗೆ ಏರ್ಪಡಿಸಿದ್ದ ಸಲಕರಣೆ ವಿತರಣೆ ಹಾಗು ತರಬೇತಿ ಶಿಬಿರದಲ್ಲಿ ಮಾತನಾಡುತ್ತಾ ಅಂಗವಿಕಲತೆ ಶಾಪವಲ್ಲ ಎಂದರು. ಮಕ್ಕಳ ಅಂಗವೈಕಲ್ಯತೆಯನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು ಅಗತ್ಯ. ತರಬೇತಿ ನೀಡಿ, ಸಾಧನ ಸಲಕರಣೆಗಳನ್ನು ನೀಡುತ್ತಾ ಸಮಾಜದಲ್ಲಿ ಎಲ್ಲರಂತೆ ಬಾಳಲು ಪ್ರೇರೇಪಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಅಂಗವಿಕಲರು ಸಾಕಷ್ಟು ಕ್ಷೇತ್ರದಲ್ಲಿ ಸಾಧನೆ ತೋರಿಸುತ್ತಿದ್ದಾರೆ. ಜತೆಗೆ ಅವರಿಗೆ ಸಮಾಜದಲ್ಲಿ ಸಮಾನತೆಯಿಂದ ಬದುಕಲು ಸರ್ಕಾರದ ಸೌಲತ್ತುಗಳನ್ನು ಒದಗಿಸಲು ಅಧಿಕಾರಿಗಳಿಗೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದರು.
ಮಕ್ಕಳ ಚಿಕಿತ್ಸೆಗೆ ಸರ್ಕಾರದಿಂದ ಆರ್ಥಿಕ ಸಹಾಯ ಅಗತ್ಯವಿದೆ ಎಂದು ಗ್ರಾಮ ಪುನರ್ ವಸತಿ ಕಾರ್ಯಕರ್ತ ಡಿ.ಜಿ. ಕುನ್ನೇಗೌಡ ತಿಳಿಸಿದರು.
ಇದೇ ಸಂದರ್ಭದಲ್ಲಿ ಸುಮಾರು 15 ಮಂದಿ ಅಂಗವಿಕಲರಿಗೆ ಸೂಕ್ತ ತರಬೇತಿ ಹಾಗೂ ಸಲಕರಣೆಗಳನ್ನು ವಿತರಿಸಿದರು. ವಿ.ಆರ್. ಡಬ್ಲು ಕಾರ್ಯಕರ್ತ ಕೃಷ್ಣಮೂರ್ತಿ, ಕುಮಾರ್, ಶಶಿಧರ್, ಮಂಜುನಾಥ್, ಜಾವಿದ್ಬಾನು, ವನಜಾಕ್ಷಮ್ಮ ಇತರರು ಇದ್ದರು.