ಬೇಸಿಗೆಗೆ ಮುನ್ನವೇ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ
ಚನ್ನಪಟ್ಟಣ: ಬೇಸಿಗೆಗೆ ಮುನ್ನವೇ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ತಾಲೂಕಿನ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದ್ದು 5 ಗ್ರಾಮಗಳಲ್ಲಿ ಸಮಸ್ಯೆ ಭೀಕರ ಎನಿಸಿದೆ.
ಕುಡಿಯುವ ನೀರಿಗೆ ಅಂತರ ಜಲವನ್ನೇ ನಂಬಿರುವ ಗ್ರಾಮೀಣ ಪ್ರದೇಶದಲ್ಲಿ ಅಂತರ ಜಲ ಬತ್ತಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ಈಬಾರಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬೇಸಿಗೆಗೂ ಮುನ್ನವೇ ಜಲಕ್ಷಾಮ ಎದುರಾಗಿದೆ.
ಕಂಗಾಲಾದ ಪಂಚಾಯತಿ: ಕುಡಿಯುವ ನೀರಿನ ಸಮಸ್ಯೆ ತೀವ್ರ ಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ
ಪಂಚಾಯತ್ರಾಜ್ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಂಗಾಲಾಗಿದ್ದಾರೆ. ಜನತೆಗೆ ಮುಖ ತೋರಿಸುವುದು ಹೇಗೆ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಈಗಲೇ ಇಷ್ಟಾದರೆ ಬೇಸಿಗೆಗೆ ಇನ್ನು ಹೇಗೆ ಎಂಬ ಆತಂಕ ತಾಲೂಕು ಆಡಳಿತವನ್ನು ಕಾಡುತ್ತಿದೆ.
ಹಣ ಇದೆ ನೀರಿಲ್ಲ: ಕುಡಿಯುವ ನೀರಿನ ಯೋಜನೆಗೆ ಕೋಟ್ಯಂತರ ರು. ಹಣವನ್ನು ಕಳೆದೆರಡು ವರ್ಷದಿಂದ ಪಂಚಾಯತ್ ರಾಜ್ ಇಲಾಖೆ ಸುರಿದಿದೆ. 1800 ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ತೋಡಿಸಲಾಗಿದೆಯಾದರೂ ಈ ಪೈಕಿ ಸಫಲ ಗೊಂಡಿರುವುದು ಕೇವಲ 300 ಕೊಳವೆ ಬಾವಿ ಮಾತ್ರ.
ಕೆಲ ಕೊಳವೆ ಬಾವಿಗಳಲ್ಲಿ ಕೊರೆದ ಒಂದೆರಡು ತಿಂಗಳು ನೀರು ಸಿಕ್ಕಿದ್ದು ಕ್ರಮೇಣ ಬತ್ತಿ ಹೋಗಿರುವ ಉದಾಹರಣೆ ಸಾಕಷ್ಟಿದೆ. ಎಸ್.ಎಂ. ಹಳ್ಳಿ ಗ್ರಾಮ ಒಂದರಲ್ಲೇ 40 ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಯಲಾಗದೆ ಯಾದರೂ ಬೊಗಸೆ ತುಂಬುವಷ್ಟು ಗಂಗೆ ಸಿಗದೆ ಗ್ರಾಮದಲ್ಲಿ ಕುಡಿಯುವ ನೀರಿನ ತತ್ವಾರ ತೀವ್ರ ಗೊಂಡಿದೆ.
ಕಳೆದ ಸಾಲಿನಲ್ಲಿ ಒಂದೂವರೆ ಕೋಟಿ ರೂ. ಹಣ ಟಾಸ್ಕ್ ಫೋರ್ಸ್ ಮೂಲಕ ಬಿಡುಗಡೆಯಾಯಿತಾದರೂ ಅಧಿಕಾರಿಗಳ ಉದಾಸೀನತೆಯಿಂದಾಗಿ ಹಣ ಇನ್ನೂ ಬಳಕೆಯಾಗಿಲ್ಲ. ಈ ಬಾರಿ 35 ಲಕ್ಷ ರು.ಹಣ ಬಿಡುಗಡೆಯಾಗಿದೆ. ಸರ್ಕಾರ ದಿಂದ ಬಿಡುಗಡೆಯಾಗುತ್ತಿರುವ ಹಣ ಕೊಳವೆ ಬಾವಿ ತೋಡಿಸಿದೆವು ಎಂಬ ಕೃಷ್ಣನ ಲೆಕ್ಕದಲ್ಲಿ ಅಧಿಕಾರಿಗಳ ಜೇಬು ಸೇರುತ್ತಿದೆ ಎಂಬ ಆಪಾದನೆ ದಟ್ಟವಾಗಿದೆ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಆಗಾಗ್ಗೆ ಸೂಚನೆ ನೀಡುತ್ತಾ ಬಂದಿದ್ದರೂ ಸಮಸ್ಯೆ ಬಗೆಹರಿದಿಲ್ಲ, ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗೆ ಪರಿಹಾರೋಪಾಯ ಹುಡುಕಲಾಗುವುದು. ಪಂಚಾಯತ್ರಾಜ್ ಎಂಜಿನಿಯರಿಂ್ಗ್ ವಿಭಾಗದ ಅಧಿಕಾರಿಗಳ ವೈಫಲ್ಯತೆ ನನ್ನ ಗಮನಕ್ಕೆ ಬಂದಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗುವುದು.
-ಸಿ.ಪಿ.ಯೋಗೇಶ್ವರ್, ಶಾಸಕರು