ರಾಮನಗರ ಕುಡಿವ ನೀರಿಗೆ ರು. 330 ಕೋಟಿ
ಬೆಂಗಳೂರು: ರಾಮನಗರಕ್ಕೆ ಪ್ರತಿನಿತ್ಯ 61 ದಶಲಕ್ಷ ಕುಡಿಯುವ ನೀರು ಕೊಡುವ 330 ಕೋಟಿ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದ್ದು, ಇದರ ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರದ ಶೇ.75ರಷ್ಟು ಪ್ರದೇಶದಲ್ಲಿ ನಿತ್ಯವೂ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಮಾಗಡಿಯಲ್ಲಿ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಚನ್ನಪಟ್ಟಣದಲ್ಲಿ ಎರಡು ದಿನಕ್ಕೆ ಒಂದು ಬಾರಿ. ಆದರೆ ರಾಮನಗರದಲ್ಲಿ 5-6 ದಿನಕ್ಕೆ ಒಂದು ಬಾರಿ ನೀರು ಪೂರೈಕೆಯಾಗುತ್ತಿದೆ. ಅಲ್ಲಿನ ಜನರಲ್ಲಿ ನೀರಿನ ತೊಂದರೆ ಇದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಯೋಜನೆ ಕೈಗೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ರಾಮನಗರಕ್ಕೆ ಪ್ರತಿ ನಿತ್ಯ 25 ದಶಲಕ್ಷ ಲೀಟರ್ ನೀರು ಅಗತ್ಯವಿದ್ದು, ಪ್ರಸ್ತುತ 16 ಎಂಎಲ್ಡಿ ಮಾತ್ರ ಪೂರೈಕೆಯಾಗುತ್ತಿದೆ. ಆದ್ದರಿಂದ 2045ರವರೆಗೆ ಯಾವುದೇ ರೀತಿಯಲ್ಲಿ ಈ ನಗರಕ್ಕೆ ನೀರು ತೊಂದರೆ ಆಗಬಾರದು ಎಂದು ಸಂಸದ ಡಿ.ಕೆ. ಸುರೇಶ್ ಕ್ರಿಯಾಯೋಜನೆ ರೂಪಿಸಿದ್ದಾರೆ. 61 ಎಂಎಲ್ಡಿ ನೀರನ್ನು ಕಾವೇರಿ ನದಿಯಿಂದ ಸರಬರಾಜು ಮಾಡಲಾಗುತ್ತದೆ. ಈ ಹಿಂದೆ ಬೆಂಗಳೂರಿಗೆ ನೀರು ತರಲು ಜಲಮಂಡಳಿ ಅಳವಡಿಸಿದ್ದ ಪೈಪ್ಲೈನ್ ಸ್ಥಗಿತಗೊಂಡಿದ್ದು, ಅದನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಈ ಬೃಹತ್ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಆದ್ದರಿಂದ ಈ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ತಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದರು.
ರಾಮನಗರ ಜನ ಸಹನಾಶೀಲರು: ರಾಮನಗರದಲ್ಲಿ ನೀರಿನ ತೊಂದರೆ ಇದ್ದು, ಈ ಬೇಸಿಗೆಯಲ್ಲಿ ಅಗತ್ಯವಿರುವಷ್ಟು ಕೊಳವೆಬಾವಿ ಕೊರೆಯಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ನೀರಿಗೆ ತೊಂದರೆ ಉಂಟಾಗಬಾರದು. ಈ ಹಿಂದೆ ಇಲ್ಲಿದ್ದ ಶಾಸಕರು ನೀರಿನ ಯೋಜನೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದ್ದರಿಂದ ಈ ನಗರಕ್ಕೆ 5-6 ದಿನವಾದರೂ ನೀರು ಬರುವುದಿಲ್ಲ. ಇದನ್ನು ಸಹಿಸಿಕೊಂಡಿರುವ ಈ ಜನಕ್ಕೆ 'ಹ್ಯಾಟ್ಸ್ ಆಫ್' ಹೇಳಬೇಕು. ಈಗ ನಾನು ಜಿಲ್ಲಾ ಉಸ್ತುವರಿ ಸಚಿವನಾದ ಮೇಲೆ ಕುಡಿಯುವ ನೀರಿನ ಸಮಸ್ಯೆ ಅರಿತಿದ್ದೇನೆ. ಅದಕ್ಕೇ ರಾಮನಗರಕ್ಕೆ ಯಾವುದೇ ರೀತಿಯಲ್ಲಿ ನೀರಿಗೆ ತೊಂದರೆಯಾಗದಂತೆ ಎಲ್ಲ ಅಧಿಕಾರಿಗಳಿಗೂ ಸೂಚಿಸಿದ್ದೇನೆ ಎಂದರು.
ಕೆರೆ ತುಂಬುವ ಯೋಜನೆ
ಕೆರೆ ತುಂಬುವ ಯೋಜನೆಯೂ ಮುಂದುವರಿಯುತ್ತಿದೆ. ಕನಕಪುರದ 10 ಕೆರೆಗಳಿಗೆ ಅರ್ಕಾವತಿ ನದಿ ಕಾಲುವೆಯಿಂದ ನೀರು ಹರಿಸಲಾಗಿದೆ. ಆ ಭಾಗದಲ್ಲಿ ಅಂತರ್ಜಲ ವೃದ್ಧಿಸಿದೆ. ಇನ್ನೂ ಕೆಲವು ಕೆರೆಗಳನ್ನು ತುಂಬಲಾಗುವುದು ಎಂದರು.
ರಾಜೀವ್ಗಾಂಧಿ 'ರೇ' ಯೋಜನೆಯಲ್ಲಿ ರಾಮನಗರದಲ್ಲೇ 4500 ಸಾವಿರ ಮನೆಗಳನ್ನು 3ರಿಂದ 4 ಲಕ್ಷ ರುಪಾಯಿಗಳಲ್ಲಿ ನೀಡಲಾಗುತ್ತದೆ. ಯೋಜನೆಯ ಪ್ರಥಮ ಹಂತದಲ್ಲೇ ರಾಮನಗರವನ್ನು ಸೇರಿಸಲಾಗಿದೆ. ಇದು ರಾಜಕೀಯ ಭರವಸೆಯಲ್ಲ. ಅಭಿವೃದ್ಧಿಯಷ್ಟೇ ಎಂದರು.