ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

Srinivasa Murthy VN
Updated On : 11 Feb 2014, 12:30 pm

ರಾಮನಗರ: ಬಿಡದಿಯಲ್ಲಿರುವ ಪ್ರತಿಷ್ಠಿತ ಟೊಯೋಟ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಎಲ್ಲ 15 ಅಂಗ ಸಂಸ್ಥೆಗಳ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಮೆರವಣಿಗೆ ಬಳಿಕ ಧರಣಿ ನಡೆಸಿದ ಸಾವಿರಾರು ಕಾರ್ಮಿಕರು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. 15 ಅಂಗ ಸಂಸ್ಥೆಗಳ ಕಚೇರಿ ಬಳಿಯೂ ಮೆರವಣಿಗೆಯಲ್ಲಿ ತೆರಳಿ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ದಿನವಹಿ 700ಕ್ಕೂ ಹೆಚ್ಚು ಕಾರು ಉತ್ಪಾದಿಸುತ್ತಿರುವ ಮುಂಚೂಣಿ ಸಂಸ್ಥೆಯಲ್ಲಿ ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಮನವಿಯಲ್ಲಿ ಅನಾವರಣಗೊಳಿಸಿದ್ದು, ಆಡಳಿತ ಮಂಡಳಿಯ ಗಮನ ಸೆಳೆದಿದ್ದಾರೆ. ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಉದ್ಯೋಗ ಅಭದ್ರತೆ ಕಾಡುತ್ತಿದ್ದು, ಆಡಳಿತ ಮಂಡಳಿಯಿಂದ ಕಾರ್ಮಿಕ ಕಾಯ್ದೆ ಉಲ್ಲಂಘನೆ ಆಗುತ್ತಿದೆ. ಆಡಳಿತ ಮಂಡಳಿಯು ಕಾರ್ಮಿಕ ವಿರೋಧಿ ತೀರ್ಮಾನಗಳನ್ನು ಏಕ ಪಕ್ಷೀಯವಾಗಿ ತೆಗೆದುಕೊಂಡು, ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿದರು.  ಕಾಯಂ ನೌಕರರು ನಿರ್ವಹಿಸುವ ಕೆಲಸಕ್ಕೆ ಹೊರ ಗುತ್ತಿಗೆ ನೀಡುವ ಮೂಲಕ ಕಾರ್ಮಿಕರ ಉದ್ಯೋಗಕ್ಕೆ ಸಂಚಕಾರದ ಹುನ್ನಾರ ನಡೆಯುತ್ತಿದೆ. ಸಂಸ್ಥೆಯಲ್ಲೇ ತರಬೇತಿ ಹೊಂದಿದವರ ಸೇವೆ ಕಾಯಂಗೆ ವಿಳಂಬ ಧೋರಣೆ ಅನುಸರಣೆ ಸಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
2013-14ನೇ ಸಾಲಿನ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ಕೂಡದು. ಕಳೆದ 10 ತಿಂಗಳಿಂದ ಬೇಡಿಕೆಗಳನ್ನು ಸಲ್ಲಿಸುತ್ತಲೇ ಬಂದಿದ್ದರೂ ಗಮನ ನೀಡದಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಟೊಯೋಟ ಕಿರ್ಲೋಸ್ಕರ್ ಕಂಪನಿಯಲ್ಲಿ ಒಟ್ಟಾರೆ 4 ಸಾವಿರಕ್ಕೂ ಅಧಿಕ ನೌಕರರಿದ್ದು, ಬಹುತೇಕರು ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಿನ ಪಾಳಿಯ ಹೊರ ಗುತ್ತಿಗೆ ನೌಕರರಿಗೆ ರಜೆ ನೀಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement