ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ
ನೆಲಮಂಗಲ: ತಾಲೂಕಿನ ದಾಬಸ್ಪೇಟೆಯ ಪಾವಗಡ ಮತ್ತು ಮಧುಗಿರಿ ರಸ್ತೆಯ ಜನನಿಬಿಡ ಪ್ರದೇಶದಲ್ಲಿರುವ ವಿದ್ಯುತ್ ಕಂಬ ಅಪಘಾತದಿಂದ ಹಾನಿಯಾಗಿ ಬೀಳುವ ಹಂತದಲ್ಲಿದ್ದರೂ ಸಂಬಂಧಿಸಿದ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಮಾತ್ರ ಸಾರ್ವಜನಿಕರ ದೂರಿಗೆ ಸ್ಪಂದಿಸುತ್ತಿಲ್ಲ ಮತ್ತು ದೂರವಾಣಿ ಕರೆಗಳನ್ನು ಸ್ವೀಕರಿಸದೇ ಕರ್ತವ್ಯ ಲೋಪವೆಸಗುತ್ತಿದ್ದಾರೆ ಎಂದು ದಾಬಸ್ಪೇಟೆ ಭಾನುಪ್ರಕಾಶ್ ದೂರಿದ್ದಾರೆ.
ಕಳೆದ ತಿಂಗಳಉ ರಸ್ತೆ ಅಭಿವೃದ್ಧಿ ಪಡಿಸುತ್ತಿರುವ ಕೆಸಿಪ್ ಸಂಸ್ಥೆ ರಸ್ತೆ ಬದಿ ಇದ್ದ ವಿದ್ಯುತ್ ಹಳೆ ಕಂಬಗಳನ್ನು ಬದಲಿಸಿ ಹೊಸ ವಿದ್ಯುತ್ ಕಂಬಗಳನ್ನು ನೆಟ್ಟಿದ್ದರು. ನಂತರ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಂಬ ಸಂಪೂರ್ಣ ಹಾಳಾಗಿದ್ದು ಬೀಳುವ ಸ್ಥಿತಿಯಲ್ಲಿದೆ. ಕಂಬ ಬೀಳದಿರಲೆಂದು ಜನ ಕಲ್ಲನ್ನು ಕಂಬದ ಆಶ್ರಯಕ್ಕೆ ನಿಲ್ಲಿಸಿದ್ದಾರೆ. ಸಾರ್ವಜನಿಕರಿಗೆ ಇರುವ ಎಚ್ಚರಿಕೆ ಮತ್ತು ಜವಾಬ್ದಾರಿ ಬೆಸ್ಕಾಂ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಇಲ್ಲದಿರುವುದು ಇವರ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.
ಕಂಬ ನೆಲಕ್ಕುರುಳಿದರೆ ಈ ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿಗಳು ಮತ್ತು ಜನ ಪ್ರಾಣ ಕಳೆದುಕೊಳ್ಳುವ ಸಂಭವವಿದೆ. ಇಲ್ಲಿಯ ವಿದ್ಯುತ್ ಕಂಬದ ಸ್ಥಿತಿಯ ಬಗ್ಗೆ ಬೆಸ್ಕಾಂನ ಸಹಾಯಕ ಅಭಿಯಂತರ ವೆಂಕಟಸ್ವಾಮಿ ಮಾತ್ರ ಏನೂ ಅನಾಹುತ ಆಗಿಲ್ಲ. ತೊಂದರೆಯಾಗಿದ್ದರೆ ಸರಿ ಮಾಡಿದರಾಯಿತು ಎನ್ನುತ್ತಾರೆ.
ಕೆಲವು ವೇಳೆ ಸಾರ್ವಜನಿಕರು ವಿದ್ಯುತ್ ಸಮಸ್ಯೆ ಮತ್ತು ತೊಂದರೆ ಬಗ್ಗೆ ಕರೆ ಮಾಡಿದರೂ ಈ ಅಧಿಕಾರಿ ಸ್ವೀಕರಿಸುವುದೇ ಇಲ್ಲ ಎಂಬ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ. ದಾಬಸ್ಪೇಟೆಯ ವಿದ್ಯುತ್ ಕಚೇರಿಯಲ್ಲಾಗುತ್ತಿರುವ ಲೋಪ ದೋಷದ ಬಗ್ಗೆ ಇಂಧನ ಮಂತ್ರಿಗಳು ಗಮನ ಹರಿಸಿ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಸ್ಥಳೀಯ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.