ಇಎಸ್‌ಐ ಆಸ್ಪತ್ರೆ ಬಾಡಿಗೆ ಬಾಕಿ: ಬೀಗ ಜಡಿದ ಪರಿಣಾಮ ರೋಗಿಗಳ ಪರದಾಟ
ದೊಡ್ಡಬಳ್ಳಾಪುರ: ಇಲ್ಲಿನ ಚಿಕ್ಕಪೇಟೆಯ ಮಹಾತ್ಮಗಾಂಧಿ ವೃತ್ತದಲ್ಲಿರುವ ತಾಲೂಕು ಕಾರ್ಮಿಕ ಕಲ್ಯಾಣ ಆಸ್ಪತ್ರೆ (ಇಎಸ್‌ಐ ಆಸ್ಪತ್ರೆ) ಬಾಡಿಗೆ ಕಟ್ಟಡದಲ್ಲೇ ಹತ್ತಾರು ವರ್ಷಗಳಿಂದ ನಡೆಯುತ್ತಿದೆ. ಬಾಡಿಗೆ ಬಾಕಿ ಉಳಿಸಿಕೊಂಡಿದ್ದ ಕಾರಣ ಆಸ್ಪತ್ರೆಗೆ ಬೀಗ ಜಡಿದ ಪ್ರಸಂಗ ಮಂಗಳವಾರ ನಡೆದ ಹಿನ್ನಲೆಯಲ್ಲಿ ರೋಗಿಗಳು ಪರದಾಡುವಂತಾಯಿತು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕಾರ್ಮಿಕರನೇಕರು, ತಾಲೂಕಿನಲ್ಲಿ ನೂರಾರು ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದೆ. ಆದರೆ ಇರುವುದೊಂದೇ ಕಾರ್ಮಿಕರ ಆಸ್ಪತ್ರೆ. ಇದು ಈ ಬಗೆಯ ದುಃಸ್ಥಿತಿಯಲ್ಲಿದೆ. ಹತ್ತಾರು ಸಾವಿರ ಸಂಖ್ಯೆಯಲ್ಲಿರುವ ಕಾರ್ಮಿಕರಿಗೆ ಇದರಿಂದ ನಿರ್ದಿಷ್ಟ ಆರೋಗ್ಯ ಭದ್ರತೆ ಇಲ್ಲದಾಗಿದೆ. ಜೊತೆಗೆ ಕಾರ್ಮಿಕ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ನಿರ್ಲಕ್ಷ್ಯದಿಂದ ನಾವು ಪರಿತಪಿಸುವಂತಾಗಿದೆ. ಇದಕ್ಕೆ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳ ಮುಖ್ಯಸ್ಥರುಗಳೇ ನೇರ ಹೊಣೆ. ಕೂಡಲೇ ಆಸ್ಪತ್ರೆ ಬಾಡಿಗೆ ಪಾವತಿಸಿ ಬೀಗಮುದ್ರೆ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಆಸ್ಪತ್ರೆಯ ಸಿಬ್ಬಂದಿ ಮಾತನಾಡಿ, ಈ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ನೀರು ಮತ್ತು ಇತರೆ ವ್ಯವಸ್ಥೆಗಳು ಸರಿಯಿಲ್ಲ. ಹಾಗಾಗಿ ಆಸ್ಪತ್ರೆಯನ್ನು ಈ ಕಟ್ಟಡದಿಂದ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ಪ್ರಸ್ತಾವನೆಗೆ ಮಂಜೂರಾತಿ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಆಸ್ಪತ್ರೆ ಸ್ಥಳಾಂತರ ಮಾಡುವ ಉದ್ದೇಶವಿದೆ ಎಂದು ವಿವರಿಸಿದರು. ಹಲವರ ಮಧ್ಯಸ್ಥಿಕೆಯಲ್ಲಿ ಆಸ್ಪತ್ರೆ ಬೀಗ ತೆರವುಗೊಳಿಸಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಯಿತು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆದ ಈ ಪ್ರಸಂಗ ಅನೇಕ ಕಾರ್ಮಿಕ ರೋಗಿಗಳ ಪಾಲಿಗೆ ಅಸಹನೆ ಪ್ರಚೋದಿಸಿತು. ಕೆಲಕಾಲ ವಾಗ್ವಾದವೂ ನಡೆಯಿತು. ಕೆಲ ಗಣ್ಯರೂ ಭೇಟಿ ನೀಡಿದ್ದರು.