ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಪ್ರತಿಭಟನೆ

Srinivasa Murthy VN
Updated On : 12 Feb 2014, 12:40 pm

ರಾಮನಗರ: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ನಗರದ 2ನೇ ವಾರ್ಡ್‌ನ ನಾಗರಿಕರು ಜಲಮಂಡಳಿ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.
ನಗರಸಭೆ ಕಚೇರಿ ಆವರಣದಲ್ಲಿರುವ ಜಲಮಂಡಳಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಲಮಂಡಳಿ, ನಗರಸಭೆ, ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದರು.
2ನೇ ವಾರ್ಡ್‌ಗೆ ಸೇರಿದ ವಿವಿಧ ಬಡಾವಣೆಗಳಲ್ಲಿ 8 ರಿಂದ 10 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಸಂಬಂಧ ಜಲಮಂಡಳಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದ್ದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಡಿ.ಕೆ.ಶಿವಕುಮಾರ್,ಮಾಜಿ ಸದಸ್ಯ ನಾಗರಾಜು, ಮುಖಂಡರಾದ ಶಿವಶಂಕರ್, ಬಸವರಾಜು, ರಾಜಣ್ಣ, ರೂಪ, ಗುರುಮಲ್ಲಯ್ಯ, ರಾಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಗುಣಮಟ್ಟ ಕಾಯ್ದುಕೊಳ್ಳಲು ಸಲಹೆ
ಹೊಸಕೋಟೆ: ತಾಲೂಕಿನ ಸರಕಾರಿ ಶಾಲೆಗಳಲ್ಲಿನ ಅಡುಗೆ ತಯಾರಕರು ಗುಣಮಟ್ಟದ ಆಹಾರ ತಯಾರಿಸಲು ಆದ್ಯತೆ ನೀಡಬೇಕು ಎಂದು ಬಿಇಒ ಬೈಲಾಂಜಿನಪ್ಪ ಮನವಿ ಮಾಡಿದರು.
ಅವರು ಪಟ್ಟಣದ ವಿವೇಕಾನಂದ ವಿದ್ಯಾಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ ಅಡುಗೆ ಸಹಾಯಕರಿಗಾಗಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಎಲ್ಲಾ ಶಾಲೆಗಳಿಗೂ ಅಡುಗೆ ತಯಾರಿಗೆ ಸೂಕ್ತ ಸ್ಥಳವಕಾಶ ಕಲ್ಪಿಸಿದ್ದು,ಅಗತ್ಯ ಸಾಮಗ್ರಿಗಳನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆ. ಸಾಮಗ್ರಿ, ಸಲಕರಣೆಗಳ ಬಳಕೆ, ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಇಂತಹ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಅಲ್ಲಾ ಭಕ್ಷ್, ಆರೋಗ್ಯ ಶಿಕ್ಷಣಾಧಿಕಾರಿ ರೇವಣ್ಣ, ಸಂಪನ್ಮೂಲ ವ್ಯಕ್ತಿ ಲಕ್ಷ್ಮಮ್ಮ, ವಿವೇಕಾನಂದ ವಿದ್ಯಾಕೇಂದ್ರದ ಕಾರ್ಯದರ್ಶಿ ನಾಗರಾಜಗುಪ್ತ ಮಾತನಾಡಿದರು. ತಾಲೂಕಿನ ಸುಮಾರು 400 ಅಡುಗೆ ತಯಾರಕರು, ಸಹಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement