221 ಎಕರೆ ಜಮೀನು ವಶಕ್ಕೆ ರೈತರ ವಿರೋಧ
ದೇವನಹಳ್ಳಿ : ತಾಲೂಕು ಚನ್ನರಾಯಪಟ್ಟಣ ಹೋಬಳಿಗೆ ಸೇರಿದ ಬೂದಿಗೆರೆ ಸಮೀಪವಿರುವ ಕೊಟ್ಟತೆವರು, ಕೊಂಡೇನಹಳ್ಳಿ ಹಾಗೂ ಗೊಲ್ಲಹಳ್ಳಿ ಗ್ರಾಮಗಳ 90 ಮಂದಿ ರೈತರ 221 ಎಕರೆ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳುವುದರ ವಿರುದ್ಧ ನೊಂದ ರೈತರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಜಮೀನು ಕಳೆದುಕೊಳ್ಳಲಿರುವ ರೈತರಾದ ಮಂಚಪ್ಪನಹಳ್ಳಿ ಶಿವರಾಮಣ್ಣ, ಬೂದಿಗೆರೆಯ ಸೈಯದ್ ಅತಾಉಲ್ಲ, ಸುಬ್ಬಣ್ಣ, ಸುಧಾಕರ್ ಹಾಗೂ ಕಗ್ಗಲಹಳ್ಳಿಯ ಮುನೇಗೌಡ ಅಲ್ಲದೆ ಅನೇಕ ರೈತರು ದೇವನಹಳ್ಳಿಗೆ ಆಗಮಿಸಿ ಲ್ಯಾಂಡ್ ಮಾಫಿಯಾಗಳ ಉದ್ಧಾರಕ್ಕಾಗಿ ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿಯವರು ಶಾಮೀಲಾಗಿರುವುದು ಖಂಡನೀಯ ಎಂದು ನೊಂದ ರೈತ ಶಿವರಾಮಣ್ಣ ತಿಳಿಸಿದರು. ನಾವು ಯಾವುದೇ ಕಾರಣಕ್ಕೂ ನಮ್ಮ ಜಮೀನು ಬಿಟ್ಟುಕೊಡುವುದಿಲ್ಲ. ನಮ್ಮ ಪ್ರಾಣವನ್ನಾದರೂ ಕೊಡುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಹೋರಾಟ ಸಮಿತಿ ಮುಖ್ಯ ಸಂಚಾಲಕ ಬಿ.ಕೆ.ಶಿವಪ್ಪ, ರೈತ ಮುಖಂಡರಾದ ವೆಂಕಟೇಶ್ ಉಪಸ್ಥಿತರಿದ್ದರು.
ದೇವನಹಳ್ಳಿ ಹಗಲು ಪರಿಷೆಗೆ ಸಾವಿರಾರು ಮಂದಿ ಭಕ್ತರು
ದೇವನಹಳ್ಳಿ: ಇಲ್ಲಿನ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ಭಾನುವಾರ ನಡೆದ ಹಗಲು ಪರಿಷೆಗೆ ಸುತ್ತ ಮುತ್ತ ಗ್ರಾಮಗಳ ಸಾವಿರಾರು ಮಂದಿ ಆಗಮಿಸಿ ದೇವರ ದರ್ಶನ ಪಡೆದರು. ಇಲ್ಲಿನ ಜೇಸಿಐ ಸಂಸ್ಥೆಯವರು ಪರಿಷೆಗೆ ಆಗಮಿಸಿದವರಿಗೆ ಪ್ರತಿ ವರ್ಷದಂತೆ ಅನ್ನ ಸಂತರ್ಪಣೆ ಆಯೋಜಿಸಿದ್ದರು. ಜಾತ್ರೆಯಲ್ಲಿ ಮಕ್ಕಳಿಗಾಗಿಯೇ ವಿಶೇಷವಾದ ಮನರಂಜನಾ ಕ್ರೀಡೆಗಳು ಗಮನ ಸೆಳೆಯಿತು.