ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಿಲ್ಲಾ ಕೇಂದ್ರಕ್ಕೆ ದೊಡ್ಡಬಳ್ಳಾಪುರವೇ ಯೋಗ್ಯ

Srinivasa Murthy VN
Updated On : 17 Feb 2014, 12:06 pm

- ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಲು ದೊಡ್ಡಬಳ್ಳಾಪುರ ನಗರ ಯೋಗ್ಯ ಮತ್ತು ಅರ್ಹ ಸ್ಥಳವಾಗಿದೆ. ಎಲ್ಲ ಬಗೆಯ ಮಾನದಂಡಗಳು ಮತ್ತು ಅರ್ಹತೆಗಳ ಆಧಾರದಲ್ಲಿ ದೊಡ್ಡಬಳ್ಳಾಪುರವನ್ನು ಈ ಕೂಡಲೇ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕಿದೆ ಎಂಬ ಒಕ್ಕೊರಲ ಆಗ್ರಹ ಇದೀಗ ಗಂಭೀರ ಸ್ವರೂಪ ಪಡೆಯುತ್ತಿದೆ.
ರಾಜಸ್ವ ಸೇರಿದಂತೆ ಸರ್ಕಾರಿ ಇಲಾಖೆಗಳ ಯಾವುದೇ ಮಾನದಂಡಗಳನ್ನು ಅನುಸರಿಸಿದರೂ ನ್ಯಾಯಬದ್ಧವಾಗಿ ಜಿಲ್ಲಾ ಕೇಂದ್ರ ದೊಡ್ಡಬಳ್ಳಾಪುರ ನಗರದಲ್ಲಿ ಸ್ಥಾಪನೆಯಾಗಬೇಕಿದೆ. ಈ ಬಗ್ಗೆ ಸರ್ಕಾರ ಉದಾಸೀನ ಧೋರಣೆ ಕೈಬಿಟ್ಟು ಇಡೀ ರಾಜ್ಯದಲ್ಲಿ ಜಿಲ್ಲಾ ಪ್ರದೇಶ ವ್ಯಾಪ್ತಿಯ ಹೊರಗೆ ಜಿಲ್ಲಾ ಕೇಂದ್ರವನ್ನು ಹೊಂದಿರುವ ಅವೈಜ್ಞಾನಿಕ ಮತ್ತು ನತದೃಷ್ಟ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಬೆಂಗಳೂರು ಗ್ರಾಮಾಂತರಕ್ಕೆ ಹೊಸ ಜಿಲ್ಲಾ ಕೇಂದ್ರವನ್ನು ಘೋಷಿಸಬೇಕಿದೆ. ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2 ಉಪವಿಭಾಗಗಳಾಗಿದ್ದ ರಾಮನಗರ ಮತ್ತು ದೊಡ್ಡಬಳ್ಳಾಪುರದಲ್ಲಿ ರಾಮನಗರ ಈಗಾಗಲೇ ಜಿಲ್ಲಾ ಕೇಂದ್ರದ ಸ್ಥಾನಮಾನ ಪಡೆದು 7 ವರ್ಷಗಳಾಗಿದೆ. ಆದರೆ ದೊಡ್ಡಬಳ್ಳಾಪುರಕ್ಕೆ ಜಿಲ್ಲಾ ಕೇಂದ್ರ ವಂಚಿಸಿ, ಹೋರಾಟಕ್ಕೆ ದಾರಿ ಮಾಡಿಕೊಟ್ಟು 7 ವರ್ಷಗಳಾಗಿರುವುದು ದುರ್ದೈವ.
ಅವೈಜ್ಞಾನಿಕ ಕ್ರಮ: ಸಾಮಾನ್ಯವಾಗಿ ನಗರ ಪ್ರದೇಶ ಹೊಂದಿರುವ ಕಡೆ ಜಿಲ್ಲಾ ಕೇಂದ್ರ ರಚನೆಯಾಗಬೇಕು. ಈವರೆಗೆ ರಾಜ್ಯದಲ್ಲಿ ರಚನೆಯಾಗಿರುವ 12 ಹೊಸ ಜಿಲ್ಲೆಗಳ ಎಲ್ಲ ಕೇಂದ್ರಗಳೂ ಆಯಾ ನಗರಗಳೇ ಆಗಿವೆ. ನಗರವನ್ನು ಹೊರತು ಪಡಿಸಿ 10-15 ಕಿ.ಮೀ ದೂರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸ್ಥಾಪಿಸಿದ ಉದಾಹರಣೆಗಳಿಲ್ಲ. ಆದರೆ ಬೆಂ.ಗ್ರಾ.ಜಿಲ್ಲಾಧಿಕಾರಿಗಳು ದೊಡ್ಡಬಳ್ಳಾಪುರ-ದೇವನಹಳ್ಳಿ ಮಧ್ಯೆ ಸ್ಥಳ ಗುರುತಿಸಿರುವ ಕುರಿತು ವರದಿಯಾಗಿದೆ. ಇದು ಅತ್ಯಂತ ಅವೈಜ್ಞಾಕ ಕ್ರಮ. ಅದೂ ಅಲ್ಲದೆ ಜಿಲ್ಲಾ ವ್ಯಾಪ್ತಿ ಒಳಗೊಂಡಿರುವ ಉಪವಿಭಾಗ ಕೇಂದ್ರವೇ ದೊಡ್ಡಬಳ್ಳಾಪುರ ನಗರಕ್ಕೆ ಸ್ಥಳಾಂತರಗೊಳಿಸಿ ಸರ್ಕಾರವೇ ಆದೇಶ ಹೊರಡಿಸಿದೆ. ಅದೇ ವ್ಯಾಪ್ತಿಯ ಜಿಲ್ಲಾ ಕೇಂದ್ರವನ್ನು ಹೊರಗೆ ಸ್ಥಾಪಿಸಲು ನಡೆಸುವ ಹುನ್ನಾರ ಖಂಡನಾರ್ಹ. ರಾಜ್ಯದಲ್ಲಿ ರಚನೆಯಾಗಿರುವ ಎಲ್ಲ ಜಿಲ್ಲೆಗಳೂ ಉಪವಿಭಾಗ ಕೇಂದ್ರಗಳಲ್ಲೇ ರಚನೆಯಾಗಿವೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ.
ಕೇವಲ ಭರವಸೆ: ಈ ಬಗ್ಗೆ ಹಿಂದಿನ ಮುಖ್ಯಮಂತ್ರಿಗಳನೇಕರು ಓತಪ್ರೋತವಾದ ಭರವಸೆಗಳನ್ನು ಕೊಡುತ್ತಲೇ ಬಂದಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ 2008ರಲ್ಲೇ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರ ಮಾಡುವ ಭರವಸೆ ನೀಡಿದ್ದರು. ತದನಂತರ 2009, 2011ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಒಮ್ಮೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ, ಮತ್ತೆರಡು ಬಾರಿ ದೊಡ್ಡಬಳ್ಳಾಪುರದಲ್ಲಿ ನಡೆದ ಸಭೆಗಳಲ್ಲೂ ಜಿಲ್ಲಾ ಕೇಂದ್ರ ಘೋಷಣೆಯ ಪ್ರಸ್ತಾವನೆ ಮತ್ತು ಸ್ಪಷ್ಟ ಭರವಸೆ ನೀಡಿದ್ದರು. ನಂತರ ಬಂದ ಡಿ.ವಿ.ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ಕೂಡ ಈ ಹೋರಾಟಕ್ಕೆ ಭರವಸೆಯ ದನಿ ನೀಡಿದ್ದರು. ಆದಾಗ್ಯೂ ಇನ್ನೂ ಹೋರಾಟಕ್ಕೆ ಸ್ಪಷ್ಟ ಉತ್ತರ ಸಿಗದಿರುವುದು ದುರ್ದೈವ.

 ದೊಡ್ಡಬಳ್ಳಾಪುರ ನಗರದ ಟಾಪ್ 10 ಅರ್ಹತೆಗಳು
-  ಜಿಲ್ಲೆಯ 4 ತಾಲೂಕು ಒಳಗೊಂಡಂತೆ ಇರುವ ಏಕೈಕ ಉಪವಿಭಾಗ ಕೇಂದ್ರ.
-  ರಾಮನಗರ ಮತ್ತು ಬೆಂ.ಗ್ರಾ.ಜಿಲ್ಲೆಯ ಏಕೈಕ ಜವಾಹರ ನವೋದಯ ವಿದ್ಯಾಲಯ.
-  ಜಿಲ್ಲೆಯ ಅತಿದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ.
-  ಜಿಲ್ಲಾ ಸೆಷನ್ಸ್ ನ್ಯಾಯಾಲಯ ಇರುವುದು ದೊಡ್ಡಬಳ್ಳಾಪುರದಲ್ಲಿ.
-  ಜಿಲ್ಲೆಯಲ್ಲಿ ಏಕೈಕ ಪೊಲೀಸ್ ಡಿವೈಎಸ್ಪಿ ಕಚೇರಿ.
-  ಬ್ರಾಡ್‌ಗೇಜ್ ರೈಲು ಮಾರ್ಗ, ಸುಸಜ್ಜಿತ ರೈಲು ನಿಲ್ದಾಣ ಹೊಂದಿರುವ ಜಿಲ್ಲೆಯ ಏಕೈಕ ನಗರ.
-  ಅತಿಹೆಚ್ಚು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರಗಳು, ಜನಸಂಖ್ಯೆ, ವಿಸ್ತೀರ್ಣ,
-  ಜಿಲ್ಲೆಯಲ್ಲಿರುವ ಏಕೈಕ ನಗರಸಭೆ ದೊಡ್ಡಬಳ್ಳಾಪುರ ನಗರ ಮಾತ್ರ.
-  ದೊಡ್ಡಬಳ್ಳಾಪುರ ಈಗಾಗಲೇ ಶೈಕ್ಷಣಿಕ ಜಿಲ್ಲೆ.
-  ಸುಮಾರು 40 ಸಾವಿರ ಉದ್ಯೋಗಾವಕಾಶಗಳನ್ನು ಕಲ್ಪಿಸಿರುವ ಕೈಗಾರಿಕಾ ಪ್ರದೇಶ, ಅಪರಲ್ ಪಾರ್ಕ್, ಜವಳಿ ಪಾರ್ಕ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement