ದೇವನಹಳ್ಳಿಯಲ್ಲಿ ತಾಲೂಕು ಮಟ್ಟದ ಮಕ್ಕಳ ಕಲಾ ಉತ್ಸವ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ಬೆಂಗಳೂರು ಬಾಲಭವನ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಮಕ್ಕಳ ಕಲಾ ಉತ್ಸವ ಇಲ್ಲಿನ ಗುರುಭವನದಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ನೆರವೇರಿಸಿ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಪ್ರತಿಭೆಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಅವಕಾಶಗಳಿಂದ ವಂಚಿತರಾಗಬಾರದು ಎಂದರು.
ಶಿಕ್ಷಣ ಸಂಯೋಜನಾಧಿಕಾರಿ ರವಿಪ್ರಕಾಶ್ ಮಾತನಾಡಿ ಮಕ್ಕಳ ಪ್ರತಿಭೆ ವ್ಯಕ್ತಪಡಿಸಲು ಹಿಂದಿನ ದಿನಗಳಲ್ಲಿ ಇಷ್ಟೊಂದು ಅವಕಾಶಗಳು ಇರಲಿಲ್ಲ. ಆದರೆ ಸರ್ಕಾರ ಪ್ರತಿ ಮಕ್ಕಳಲ್ಲಿನ ಪ್ರತಿಭೆ ಹೊರಬರಲು ವಿವಿಧ ರೀತಿಯ ಅವಕಾಶಗಳನ್ನು ಕಲ್ಪಿಸಿದೆ. ಆದ್ದರಿಂದ ಸೃಜನಾತ್ಮಕವಾಗಿ ಬೆಳೆಯಲು ಸಾಧ್ಯ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅಶ್ವತ್ಥಮ್ಮ ಮಾತನಾಡಿ ತಾಲೂಕಿನ ಸುಮಾರು 20 ಶಾಲೆಗಳಿಂದ 250 ಮಂದಿ ಮಕ್ಕಳು ಭಾಗವಹಿಸಿದ್ದು ಅವರಿಗೆ ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ವಿಜ್ಞಾನದಲ್ಲಿ ನೂತನ ಅವಿಷ್ಕಾರ ಹಾಗೂ ನೃತ್ಯ, ಕಲೆ ಮತ್ತು ಸಾಹಿತ್ಯದ ಬಗ್ಗೆ ವಿವಿಧ ಪರೀಕ್ಷೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕುಂದಾಣ ಹೋಬಳಿ ಮುಖಂಡ ಚಂದ್ರೇಗೌಡ ಉಪಸ್ಥಿತರಿದ್ದರು. ಇಲಾಖೆ ಅಧಿಕಾರಿ ಅರುಣ ವಂದನೆ ಅರ್ಪಿಸಿದರು.
ಹೊಸಕೋಟೆ ತಾಪಂಗೆ ಮಮತಾ ಅಧ್ಯಕ್ಷೆ
ಹೊಸಕೋಟೆ: ತಾಪಂ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಮಮತಾ ಮಂಜುನಾಥ್ ಆಯ್ಕೆಯಾದರು.
ಪಕ್ಷದೊಳಗಿನ ಅಂತರಿಕ ಒಪ್ಪಂದದಂತೆ ನಿರ್ಗಮಿತ ಅಧ್ಯಕ್ಷೆ ರಾಣಿ ರಾಮಚಂದ್ರ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಎರಡನೇ ಅವಧಿಗೆ ಚುನಾವಣೆಗೆ ನಡೆಸಲಾಯಿತು. ಜಡಿಗೇನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸದಸ್ಯೆ ಮಮತಾ ಮಂಜುನಾಥ್ 11 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತ ಸದಸ್ಯೆ ಕಮಲಾಕ್ಷಿ ರಾಜಣ್ಣ 8 ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಮಂಜುನಾಥ್ ಕಾರ್ಯನಿರ್ವಹಿಸಿದರು. ಇಒ ದ್ಯಾಮಪ್ಪ, ತಹಸೀಲ್ದಾರ್ ಕುಮಾರಸ್ವಾಮಿ ಉಪಸ್ಥಿತರಿದ್ದರು.