ನೀರಿಲ್ಲದೆ ಹತಾಶೆಗೊಂಡ ರೈತ ಆತ್ಮಹತ್ಯೆ
ಸೂಲಿಬೆಲೆ: ಇಲ್ಲಿಗೆ ಸಮೀಪದ ತಿಮ್ಮಪ್ಪನಹಳ್ಳಿ ಗ್ರಾಮದಲ್ಲಿರುವ ತನ್ನ ಜಮೀನನಲ್ಲಿ ಕೊಳವೆ ಬಾವಿ ಕೊರೆಯಿಸಲು ಮಾಡಿದ್ದ ವಿಪರೀತ ಸಾಲವನ್ನು ತೀರಿಸಲಾಗದೆ ರೈತನೊಬ್ಬ ಕಾಳು ಮಾತ್ರೆ ತಿಂದು ಆತ್ಮಹತ್ಯೆಮಾಡಿಕೊಂಡ ಘಟನೆ ನಡೆದಿದೆ.
ಮಂಜುನಾಥ(32) ಆತ್ಮಹತ್ಯೆ ಮಾಡಿಕೊಂಡ ರೈತ. ತಿಮ್ಮಪ್ಪನಹಳ್ಳಿ ಗ್ರಾಮದ ನಾರಾಯಣಪ್ಪ ಎಂಬುವರ ಮಗನಾದ ಮಂಜುನಾಥ ಮನೆಗೆ ಹಿರಿಯ ಮಗನಾಗಿದ್ದು ಮನೆಯ ಜವಾಬ್ದಾರಿ ಹಾಗೂ ವ್ಯವಸಾಯದ ಹೊಣೆ ಹೊತ್ತುಕೊಂಡಿದ್ದ. ತೋಟದಲ್ಲಿ ಹಾಕಿದ್ದ ಬೆಳೆಗಳಿಗೆ ನೀರಿಲ್ಲದ ಕಾರಣ ಕಳೆದ 2 ತಿಂಗಳಿಂದ ಎರಡು ಕೊಳವೆ ಬಾವಿಗಳನ್ನು ಕೊರೆಯಿಸಲು ವಿಪರೀತವಾದ ಸಾಲ ಮಾಡಿಕೊಂಡಿದ್ದ. ಆದರೇ ಹಾಕಿದ್ದ ಕೊಳವೆ ಬಾವಿಗಳಲ್ಲಿ ನೀರು ಸಿಗದೆ ಬೆಳೆಗಳು ಒಣಗುತ್ತಿದ್ದವು. ಇದರಿಂದ ತೀವ್ರ ಜಿಗುಪ್ಸೆಗೊಂಡಿದ್ದ ಮಂಜುನಾಥ ನೀರಾವರಿಗಾಗಿ ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದ. ನೀರು ಸಿಗದೇ ಬೆಳೆಗಳು ನಷ್ಟವಾಗುತ್ತಿದ್ದರಿಂದ ಬೇಸತ್ತ ರೈತ ಮಂಜುನಾಥ ಮನೆಯಲ್ಲಿ ಕಾಳು ಮಾತ್ರೆ ತಿಂದು ಸಾವನ್ನಪ್ಪಿದ್ದಾನೆ ಎಂದು ಈತನ ತಂದೆ ನಾರಾಯಣಪ್ಪ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದಾನೆ. ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಚಿತ ಸಾಮೂಹಿಕ ವಿವಾಹ
ವಿಜಯಪುರ: ಇಲ್ಲಿಗೆ ಸಮೀಪದ ಹೊಲೇರಹಳ್ಳಿ ಗ್ರಾಮದಲ್ಲಿ ಶ್ರೀ ಮುನೇಶ್ವರ ಸ್ವಾಮಿ ಮಹಾದ್ವಾರ ಕುಂಭಾಭೀಷೆಕ ಹಾಗೂ ಉಚಿತ ವಿವಾಹ ಮಹೋತ್ಸವವನ್ನು ಏ.13ರಂದು ಹಮ್ಮಿಕೊಳ್ಳಲಾಗಿದೆ. ಶ್ರೀ ಮುನೇಶ್ವರ ಮಹಾದ್ವಾರ ಸಮಿತಿ ಸಹಯೋಗದೊಂದಿಗೆ ಬೆಳಿಗ್ಗೆ 10ಕ್ಕೆ ಆರಂಭವಾಗಲಿರುವ ಸಮಾರಂಭದಲ್ಲಿ ಕಳಸಗಳ ಮೆರವಣಿಗೆ , ಕಥಾಕಲಾಕ್ಷೇಪ ಆಯೋಜಿಸಲಾಗಿದೆ. ಈ ವಿವಾಹ ಮಹೋತ್ಸವದಲ್ಲಿ ಭಾಗವಹಿಸುವ ಜೋಡಿಗಳಿಗೆ ಸಮವಸ್ತ್ರ ಮಾಂಗಲ್ಯ ಹಾಗೂ ಕಾಲುಂಗುರ ನೀಡಲಾಗುವುದು. ಹೆಚ್ಚಿನ ವಿವರಕ್ಕೆ ಬಿ.ಎಂ.ಲಕ್ಷ್ಮಣ್ ರೆಡ್ಡಿ ಮೊ.9611600263, ನಾಗರಾಜ್ ಮೊ. 8693919636 ಸಂಪರ್ಕಿಸಿ
ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಭಾವಚಿತ್ರದ ಟೀ ಶರ್ಟ್ ವಿತರಣೆ
ಮಾಗಡಿ: ಸಚಿವ ಡಿ.ಕೆ.ಶಿವಕುಮಾರ್ ಭಾವಚಿತ್ರವಿರುವ ಟೀ ಶರ್ಟ್ ಮತ್ತು ಕೈಗಡಿಯಾರಗಳನ್ನು ಕೆಪಿಸಿಸಿ ಸದಸ್ಯ ಎ.ಮಂಜು ಕಾಂಗ್ರೆಸ್ ಕಾರ್ಯಕರ್ತರಿಗೆ ವಿತರಿಸಿದರು. ಕುಣಿಗಲ್ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ರಾಹುಲ್ ಗಾಂಧಿ ರೋಡ್ ಶೋನಲ್ಲಿ ಭಾಗವಹಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ತೆರಳಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ರೇವಣ್ಣ, ಉಪಾಧ್ಯಕ್ಷ ಕಾರ್ತೀಕ್ ಹಾಗೂ ಪುರಸಭಾ ಸದಸ್ಯರಾದ ಎಂ.ಎನ್. ಮಂಜುನಾಥ್, ಎಂ.ಬಿ.ಮಹೇಶ್, ಶಿವಕುಮಾರ್, ಕೆ.ವಿ. ಬಾಲು ಹಾಗೂ ಸಹಸ್ರಾರು ಕಾರ್ಯಕರ್ತರು ಕುಣಿಗಲ್ ಮಾರ್ಗವಾಗಿ ಬೈಕ್ ರ್ಯಾಲಿಯಲ್ಲಿ ತೆರಳಿದರು.