'ಪಶುಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಲಸಿಕಾ ಕಾರ್ಯಕ್ರಮ'
ಕನಕಪುರ: ರಾಮನಗರ ಜಿಲ್ಲೆಯಲ್ಲಿ ಪಶುಗಳಿಗೆ ಮಾರಕವಾದ ಕಾಲುಬಾಯಿ ಹಾಗೂ ಗೆರಸಲು ರೋಗಗಳಿಂದ ಎರಡು ಸಾವಿರಕ್ಕೂ ಹೆಚ್ಚು ಹಸುಗಳು, ದನಗಳು ಸಾವನ್ನಪ್ಪಿದ್ದು ಪಶುಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಲಸಿಕಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಪಶುವೈದ್ಯ ಇಲಾಖೆ ಉಪನಿರ್ದೇಶಕ ಡಾ.ಎಂ.ಡಿ.ದೇವರಾಜು ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಚೌಕಸಂದ್ರ ಗ್ರಾಮದಲ್ಲಿ ಕುರಿ ಪೋಷಕರ ಸಂಘ, ಹಾಲು ಉತ್ಪಾದಕರ ಸಂಘ ಆಯೋಜಿಸಿದ್ದ ಉಚಿತ ಜಾನುವಾರು ತಪಾಸಣೆ ಹಾಗೂ ಲಸಿಕೆ ನೀಡಿಕೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿಪ ಮಾಜಿ ಸದಸ್ಯ ಎಸ್.ರವಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಗ್ರಾಪಂ ಅಧ್ಯಕ್ಷ ಗೋಪಾಲನಾಯ್ಕ, ಡಾ.ವರದರಾಜಕುಮಾರ್, ಬಮೂಲ್ ನಿರ್ದೇಶಕ ನಟೇಶ್, ಮುಖಂಡರಾದ ರವಿಶಂಕರ್, ತಮ್ಮಣ್ಣಗೌಡ, ತಮ್ಮಯ್ಯ, ಗ್ರಾಪಂ ಅಧ್ಯಕ್ಷ ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ದಿಲೀಪ್, ವಿಜಯದೇವ್, ಎಸ್. ಶಂಕರ್ ಪಾಲ್ಗೊಂಡಿದ್ದರು. ರಾಮನಗರ ಜಿಲ್ಲೆಯ ಒಂದುಸಾವಿರ ಗ್ರಾಮಗಳಲ್ಲಿನ ರಾಸುಗಳಿಗೆ ಪ್ರತೀ ಆರುತಿಂಗಳಿಗೊಮ್ಮೆ ಲಸಿಕೆ ಹಾಕಲು ಸರ್ಕಾರ ಎರಡೂವರೆ ಕೋಟಿ ಬಿಡುಗಡೆ ಮಾಡಿದೆ, ನಿರಂತರ ಮೂರುವರ್ಷ ಲಸಿಕಾ ಕಾರ್ಯಕ್ರಮ ನಡೆದರೆ ರೋಗ ನಿರ್ಮೂಲನೆ ಆಗುತ್ತದೆ ಎಂದರು.
ಈ ಪ್ರಾಂತ್ಯದ ರೈತರ ಜೀವನಾಧಾರ ಸಿಲ್ಕ್ ಮತ್ತು ಮಿಲ್ಕ್ ಆಗಿದ್ದು ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದು ಎಸ್. ರವಿ ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಕುರಿ, ಉತ್ಪಾದಕರು ಹಾಗೂ ಪೋಷಕರ ಸಂಘದ ವತಿಯಿಂದ ಉತ್ತಮವಾಗಿ ಕುರಿಗಳನ್ನು ಸಾಕಾಣಿಕೆ ಮಾಡುತ್ತಿರುವ ಚೌಕಸಂದ್ರ ಗ್ರಾಮದ ಐವರು ಹಾಗೂ ತೊರೆಬೇಕುಪ್ಪೆ ಗ್ರಾಮದ ಐದು ಮಂದಿ ಮಹಿಳೆಯರನ್ನು ಜಿಲ್ಲಾ ನಬಾರ್ಡ್ ಬ್ಯಾಂಕಿನ ವ್ಯವಸ್ಥಾಪಕ ನಾರಾಯಣಸ್ವಾಮಿ ಸನ್ಮಾನಿಸಿದರು.