ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜನಸಂಖ್ಯಾ ಜಾಗೃತಿಗೆ ವಿಶಿಷ್ಟ ಕ್ರಮ

Srinivasa Murthy VN
Updated On : 10 Jul 2014, 1:17 am

ಕ.ಪ್ರ.ವಾರ್ತೆ  ರಾಮನಗರ  ಜು.9
ಜನಸಂಖ್ಯೆ ಏರಿಕೆಯಿಂದಾಗುತ್ತಿರುವ ದುಷ್ಪರಿಣಾಮಗಳನ್ನು ಜಿಲ್ಲೆಯ ಜನರಿಗೆ ಅರಿವು ಮೂಡಿಸಲು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಸೂಚಿಸಿದರು.
ಪ್ರತಿ ವರ್ಷ ಜು.11ರಂದು ಆಚರಿಸುವ ವಿಶ್ವ ಜನಸಂಖ್ಯಾ ದಿನಾಚರಣೆ ಸಂಬಂಧ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   
ಈ ಕಾರ್ಯಕ್ರಮವು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ವರ್ಷ ಪೂರ್ತಿ ಜಾಗೃತಿ ಮೂಡಿಸುವಂತಾಗಬೇಕು. ಯಾವುದೇ ಸಂವಹನ ಇಲ್ಲದ ಕೂಲಿ ಕಾರ್ಮಿಕರು, ಅನಕ್ಷರಸ್ಥರಿಗೂ ತಲುಪುವಂತಾಗಲು ಪರಿಣಾಮಕಾರಿ ಹಾಗೂ ಹೊಸ ಅನ್ವೇಷಣೆಯುಳ್ಳ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
 ಮಾತ್ರವಲ್ಲ, ಈ ಸಂಬಂಧ ಕೇವಲ ಸಮಯ, ಹಣ ವಿನಿಯೋಗಿಸುವುದು ಮುಖ್ಯವಲ್ಲ. ಅದರಿಂದ ದೊರಕುವ ಫಲಿತಾಂಶ ಮುಖ್ಯ ಎಂದರು.
ಪ್ರಮುಖ ಆದ್ಯತೆ: ವಿಶ್ವಾದ್ಯಂತ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದೇ ಎಲ್ಲಾ ದೇಶಗಳ ಪ್ರಮುಖ ಆದ್ಯತೆಯಾಗಿದೆ. ಜನಸಂಖ್ಯಾ ಸ್ಫೋಟದಿಂದ ಹಲವು ದೇಶಗಳ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತೊಡಕಾಗಿದೆ. ಮಾನವನಿಗೆ ಅತ್ಯಗತ್ಯವಾಗಿರುವ ಆಹಾರ, ನೀರು, ವಸತಿ ಸೌಲಭ್ಯಗಳಿಗಾಗಿ ಹೋರಾಟ ನಡೆಸಬೇಕಾದ ದುಃಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದರು.
  ಜನಸಂಖ್ಯಾ ಸ್ಫೋಟದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜಿಲ್ಲೆಯಲ್ಲಿ ಜು.11 ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಹಲವಾರು ಕಾರ್ಯಕ್ರಮಗಳನ್ನು  ಹಮ್ಮಿಕೊಂಡಿದೆ.
ಜು.11 ರಿಂದ 25 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜು.11ರ ಬೆಳಗ್ಗೆ 9ಕ್ಕೆ ಜಾಗೃತಿ ಜಾಥಾವನ್ನು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಆಯೋಜಿಸಿದೆ. ಜಾಥಾದಲ್ಲಿ ಆರೋಗ್ಯ, ಅಂಗನವಾಡಿ ಕಾರ್ಯಕರ್ತೆಯರು, ಅಧಿಕಾರಿಗಳು, ಶಾಲಾ ಮಕ್ಕಳು ಭಾಗವಹಿಸುವರು.
ಸಂತಾನ ಹರಣ ಶಸ್ತ್ರ ಚಿಕಿತ್ಸಾ ಶಿಬಿರ: ಪ್ರತಿ ವಾರ 1 ದಿನ ನಡೆಯುತ್ತಿದ್ದ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಶಿಬಿರವನ್ನು ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ವಾರ ಪೂರ್ತಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಸೇರಿದಂತೆ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ.
ಜನಸಂಖ್ಯೆ ನಿಯಂತ್ರಿಸಬೇಕಾದ ಅನಿವಾರ್ಯತೆಯನ್ನು ಜನರಿಗೆ ತಲುಪಿಸಲು  ಆರೋಗ್ಯ ಇಲಾಖೆಯು ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡಿದೆ. ಪ್ರತಿ ದಿನದ ಕಾರ್ಯಕ್ರಮಗಳನ್ನು ವರ್ಷವಿಡೀ ಜಿಲ್ಲೆಯಾದ್ಯಂತ ಆಯೋಜಿಸಲು ತೀರ್ಮಾನಿಸಿದೆ ಎಂದು ಡಿ.ಎಚ್.ಒ ಡಾ.ರಘುನಾಥ್ ತಿಳಿಸಿದರು.  
ರಾಜ್ಯ ಮತ್ತು ಜಿಲ್ಲೆಯಲ್ಲಿ ಜನನ ಪ್ರಮಾಣ 1.2ರಷ್ಟು ಇರುವುದು ಸಂತೋಷದಾಯಕ ವಿಚಾರವಾಗಿದೆ. ಜಿಲ್ಲೆಯಲ್ಲಿ ಏರಿಕೆ ಪ್ರಮಾಣ ಕಡಿಮೆ ಇರುವುದು ಜನರಲ್ಲಿ ಜಾಗೃತಿ ಮೂಡಿರುವುದಕ್ಕೆ ಸಾಕ್ಷಿಯಾಗಿದೆ.
ಜನಸಂಖ್ಯೆ ಕಡಿಮೆ ಮಾಡುವ ಕಾರ್ಯದಲ್ಲಿ ಆರೋಗ್ಯ ಇಲಾಖೆ ಸಕ್ರಿಯವಾಗಿ ತೊಡಗಿಕೊಂಡಿದೆ ಎಂದು ವಿವರಿಸಿದರು.
  ಸಭೆಯಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಆರ್. ಸುಲೋಚನಾ, ಡಿ.ಎಂ.ಒ ಡಾ.ವಾಸು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ನಾಗಲಾಂಬಿಕಾದೇವಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗುತ್ತಲಯ್ಯ, ಎ.ಸಿ.ಡಿ.ಪಿ.ಒ ರೇಣುಕಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement