ಭಾರತಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಉಚಿತ ವಿತರಣೆ
ಆನೇಕಲ್ಲು: ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರು ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಡಿಜಿ ಇಮೇಜ್-2014 ಅಂತಾರಾಷ್ಟ್ರೀಯ ಪ್ರದರ್ಶನ ಹಮ್ಮಿಕೊಂಡಿದ್ದು ರಾಜ್ಯದ ಎಲ್ಲ ತಾಲೂಕಿನಿಂದ ಸದಸ್ಯರು ಭಾಗವಹಿಸಿ ಆಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳ ಬಳಕೆ ಬಗ್ಗೆ ತಿಳಿದು ಕೊಳ್ಳಬೇಕೆಂದು ರಾಜ್ಯ ಸಂಘದ ಕಾರ್ಯದರ್ಶಿ ಪರಮೇಶ್ ಮನವಿ ಮಾಡಿದ್ದಾರೆ.
ಅವರು ಆನೇಕಲ್ ತಾಲೂಕು ಛಾಯಾಚಿತ್ರಗ್ರಾಹಕರ ಸಂಘ ಹಮ್ಮಿಕೊಂಡಿದ್ದ ಭಾರತಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಫೋಟೋಗ್ರಫಿ ಉದ್ಯಮ ವಿಶ್ವದೆಲ್ಲೆಡೆ ಜನಪ್ರಿಯವಾಗಿದ್ದು ಪ್ರೊಫೆಷನಲ್ ಛಾಯಾ ಚಿತ್ರಗ್ರಾಹಕರು ತಮ್ಮ ಸ್ಟುಡಿಯೋವನ್ನು ಆಧುನಿಕ ಉಪಕರಣಗಳಿಂದ ಸಜ್ಜುಗೊಳಿಸಿ ಲಾಭದಾಯಕವನ್ನಾಗಿಸಬೇಕು ಎಂದರು.
3 ದಿನಗಳ ಕಾರ್ಯಾಗಾರ: ಜುಲೈ 18, 19 ಮತ್ತು 20 ರಂದು ನಡೆಯುವ 3 ದಿನಗಳ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ವೃತ್ತಿ ಬಾಂಧವರಿಗೆ ವೀಡಿಯೋಗ್ರಫಿ, ಡಿಜಿಟಲ್ ಇಮೇಜಿಂಗ್, ಫ್ರೇಮ್ ಮತ್ತು ಆಲ್ಬಂ ತಯಾರಿಕೆ ವಿಭಾಗದಲ್ಲಿ ತಜ್ಞರಿಂದ ಕಾರ್ಯಾಗಾರ ಏರ್ಪಡಿಸಿದ್ದು ಡಿಜಿ ಇಮೇಜ್ ಅಭಿಯಾನ ಪ್ರಸ್ತುತ ಅದ್ಯತೆಯ ವಿಷಯವಾಗಿದೆ ಎಂದರು.