ಹೊನ್ನೇನಹಳ್ಳಿ ಗ್ರಾಪಂಗೆ ಪರಮೇಶ್ ನೂತನ ಅಧ್ಯಕ್ಷ
ನೆಲಮಂಗಲ: ತಾಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷರಾಗಿ ಬಿ.ಎನ್. ಪರಮೇಶ್ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಎನ್. ಪರಮೇಶ್ ಮಾತನಾಡಿ, ಹೊನ್ನೇನಹಳ್ಳಿ ಗ್ರಾಮ ಪಂಚಾಯ್ತಿಯು ಅತಿ ಹಿಂದುಳಿದ ಪಂಚಾಯ್ತಿಯಾಗಿದ್ದು ಹೆಚ್ಚಿನ ಆದಾಯ ಇಲ್ಲದಿದ್ದರೂ ಶಾಸಕರು ಮತ್ತು ಸಂಸದರ ಕೋಟಾದಲ್ಲಿ ಅನುದಾನ ತಂದು ಪಂಚಾಯ್ತಿ ವ್ಯಾಪ್ತಿಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿ ಎಲ್ಲಾ ಸದಸ್ಯರ ಸಹಕಾರದಿಂದ ಅವಶ್ಯಕವಾದ ಕಾರ್ಯಗಳಿಗೆ ಸಚಿವರು ಮತ್ತು ಸರ್ಕಾರದಿಂದ ಅನುದಾನವನ್ನು ತಂದು ಸಮಸ್ಯೆ ಪರಿಹಾರ ಮಾಡಲಾಗುವುದು ಎಂದರು.ಚುನಾವಣಾಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸ್ಕರ್ತವ್ಯ ನಿರ್ವಹಿಸಿದರು. ಪಿ.ಡಿ.ಓ ಮೋಹನ್ ಕುಮಾರ್, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ರಾಮಕೃಷ್ಣಯ್ಯ, ಮಾಜಿ ಅಧ್ಯಕ್ಷ ಜಗದೀಶ್ ಚೌಧರಿ, ಜಿ.ಪಂ.ಮಾಜಿ ಸದಸ್ಯ ಟಿ.ಆರ್. ರಾಜು, ವೆಂಕಟೇಶ್, ಹಾಲು ಒಕ್ಕೂಟದ ನಿರ್ದೇಶಕ ಎಂ.ಜಿ. ತಿಮ್ಮರಾಜು, ಮುಖಂಡ ಶಿವಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಪುಟ್ಟಗಂಗಯ್ಯ, ತಾ.ಪಂ.ಸದಸ್ಯ ವೀರಯ್ಯ, ರಾಮಕೃಷ್ಣಯ್ಯ, ತೀರ್ಥಪ್ರಸಾದ್, ಜಗದೀಶ್, ಜಾನಕಮ್ಮ ಜಯಣ್ಣ, ಮಾಚನಹಳ್ಳಿ ಜಯಣ್ಣ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಅಪಘಾತ: ಬೈಕ್ ಸವಾರ ಸಾವು
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಗೌರಿಬಿದನೂರು ರಾಜ್ಯ ಹೆದ್ದಾರಿಯ ಪಾಲನಜೋಗಿಹಳ್ಳಿ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಮೃತನನ್ನು ಇಸ್ಲಾಂಪುರದ ನಿವಾಸಿ ಶಬೀರ್ (45) ಎಂದು ಗುರುತಿಸಲಾಗಿದೆ. ಗೌರಿಬಿದನೂರಿನಿಂದ ಬರುತ್ತಿದ್ದ ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ದ್ವಿಚಕ್ರವಾಹನ ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯ ಮೇಲೆ ಹರಿದು ನಂತರ ಹಳ್ಳಕ್ಕೆ ಜಾರಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಜಾರಿದ್ದರೂ ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರು ಅದೃಷ್ಟವಶಾತ್ ಸುರಕ್ಷಿತವಾಗಿದ್ದಾರೆ. ಬಸ್ ಸ್ವಲ್ಪ ಮುಂದಕ್ಕೆ ಚಲಿಸಿದ್ದರೂ ಹೆಚ್ಚಿನ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಬಸ್ ಚಾಲಕ ಪರಾರಿಯಾಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: 4 ಬೈಕ್, 15 ಸಾವಿರ ನಗದು ವಶ
ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸರು ಬುಧವಾರ ಬೆಳಗಿನ ಜಾವ ಇಸ್ಟಿಟ್ ಅಡ್ಡೆಯೊಂದರ ಮೇಲೆ ದಾಳಿ ಮಾಡಿ ನಾಲ್ಕು ಬೈಕ್ ಸೇರಿದಂತೆ ನಗದು ವಶಪಡಿಸಿಕೊಂಡ ಘಟನೆ ನಡೆದಿದೆ. ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮದ ಬೈರೇಗೌಡರ ಇಟ್ಟಿಗೆ ಕಾರ್ಖಾನೆಯಲ್ಲಿ ಗುಂಪೊಂದು ಹಣವನ್ನು ಪಣಕ್ಕಿಟ್ಟು ಇಸ್ಪಿಟ್ ಆಟವಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಪಿಐ ತಿಮ್ಮಯ್ಯ ಹಾಗೂ ಪಿಎಸ್ಐ ಅನಿಲ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದು ಆಟದಲ್ಲಿ ನಿರತವಾಗಿದ್ದ 10 ಮಂದಿಯನ್ನು ವಶಕ್ಕೆ ಪಡೆದುಕೊಂಡರು. ಸ್ಥಳದಲ್ಲಿ ಸಿಕ್ಕಿ 15 ಸಾವಿರದಷ್ಟು ನಗದು ಹಾಗೂ ನಾಲ್ಕು ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿದ್ಯುತ್ ವ್ಯತ್ಯಯ ಇಂದು
ನೆಲಮಂಗಲ: ತಾಲೂಕಿನ ವ್ಯಾಪ್ತಿಯಲ್ಲಿ 66-11ಕೆ.ವಿ ತಿಪ್ಪಗೊಂಡನಹಳ್ಳಿ ಸ್ಟೇಷನ್ಗಳಲ್ಲಿ ತ್ರೈಮಾಸಿಕ ನಿರ್ವಾಹಣಾ ಕಾರ್ಯ ಇರುವುದರಿಂದ ಈ ಕೆಳಕಂಡ ಗ್ರಾಮಗಳಲ್ಲಿ ಜುಲೈ 10ರ ಗುರುವಾರದಂದು ಬೆಳಗ್ಗೆ 9-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ವಿದ್ಯುತ್ ಆಡಚಣೆ ಆಗುವುದು. ಮಾಗಡಿ ಟೌನ್, ನೇತೇನಹಳ್ಳಿ, ಮಾಡ್ಬಾಳ್, ಹೊಸಪೇಟೆ, ಹೊಂಬಾಳಮ್ಮನಪೇಟೆ, ತಿರುಮಲೈ, ವ್ಯಾಸರಾಯನಪಾಳ್ಯ, ಕಲ್ಯಾಗೇಟ್, ಸೋಮೇಶ್ವರ ಕಾಲೋನಿ, ತಟವಾಳು, ಕರೀನಹಳ್ಳಿ, ಮಂಚನಬೆಲೆ, ಕಲ್ಯಾ ತಗ್ಗಿಕುಪ್ಪೆ, ಗುಡೇಮಾರನಹಳ್ಳಿ, ಚಕ್ರಬಾವಿ, ಕೆಂಚನಹಳ್ಳಿ, ಸಾವನದುರ್ಗ, ವಿ.ಜಿ.ದೊಡ್ಡಿ, ಮಾನಗಲ್ಲು, ಗೆಜ್ಜಗಾರಗುಪ್ಪೆ, ಅಗಲಕೋಟೆ, ಮತ್ತಿಕೆರೆ, ಸೋಲೂರು ಚೀಲಿಂಗ್ ಸೆಂಟರ್, ನೇತನಹಳ್ಳಿ, ವೈ.ಜಿ.ಗುಡ್ಡ, ಗಂಗಪ್ಪನಹಳ್ಳಿ, ಹೊಸಪಾಳ್ಯ, ಮಾದಪಟ್ಟಣ, ಹುಲ್ಲುವೇನಹಳ್ಳಿ, ಉಣಿಗೆರೆ, ಚಂದ್ರಪ್ಪ ಸರ್ಕಲ್, ದೊಡ್ಡೇರಿ, ಅಡಕಮಾರನಹಳ್ಳಿ, ಬ್ಯಾಲಾಳು, ಚಿಕ್ಕನಹಳ್ಳಿ, ಗೊಲ್ಲಹಳ್ಳಿ, ಮೋಟಗಾನಹಳ್ಳಿ, ಗಿರಿಜಾಪುರ, ಪೆಮ್ಮನಹಳ್ಳಿ, ನಾರನಹಳ್ಳಿ, ವರದೇನಹಳ್ಳಿ, ಕಟೇನಹಳ್ಳಿ ಗ್ರಾಮಗಳು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಆಡಚಣೆಯುಂಟಾಗುವುದು. ಆದ್ದರಿಂದ ವಿದ್ಯುತ್ ಅಡಚಣೆ ಬಗ್ಗೆ ಹೆಚ್.ಟಿ ಮತ್ತು ಎಲ್.ಟಿ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಬೆ.ವಿ.ಕಂ. ಕೋರಿದೆ.
ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಒಡಮೂಡಲಿ
ನೆಲಮಂಗಲ: ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಮೂಡಬೇಕು ಎಂದು ರಾಜ್ಯ ಬಿಜೆಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ ಹೇಳಿದರು.ಅವರು ಬುಧವಾರ ತ್ಯಾಮಗೊಂಡ್ಲು ಶಾಖೆಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ವಾಸವಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಗುರುಪೂಜಾ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ,ದೇಶವನ್ನು ಪ್ರೀತಿಸುವಂತೆ ಮಾಡುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿದೆ ಎಂದರು.ಭಗವಾಧ್ವಜವನ್ನು ಗುರುಸ್ಥಾನದಲ್ಲಿ ಪೂಜಿಸಿ ಕಾಣಿಕೆ ಅರ್ಪಿಸಲಾಯಿತು. ಅಧ್ಯಕ್ಷತೆಯನ್ನು ವಕೀಲ ಕಾರೇಹಳ್ಳಿ ಟಿ. ವೆಂಕಟರಾಮ್ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಪರ್ಕ ಪ್ರಮುಖ ಚಂದ್ರಣ್ಣ, ತಜಗದೀಶ್ ಪ್ರಸಾದ್, ರುದ್ರೇಶ್, ಹೋಬಳಿ ಪ್ರಾಂತ ಪ್ರವ್ರ್ಖ್ ರಮೇಶ್, ಉಪಾಧ್ಯಕ್ಷ ಶಿವರಾಜು, ಹಿರಿಯ ಆರ್.ಎಸ್.ಎಸ್.ಮುಖಂಡ ಸೂರಣ್ಣ, ವಾಸುದೇವಮೂರ್ತಿ ಇದ್ದರು.