ಬದುಕಿನ ಮೌಲ್ಯದ ಅರಿವು ವಿದ್ಯಾರ್ಥಿಗೆ ಬಹು ಮುಖ್ಯ
ದೊಡ್ಡಬಳ್ಳಾಪುರ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ವೋಗ್ ಇನ್ಸ್‌ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯಲ್ಲಿ ವಿದ್ಯಾರ್ಥಿ ಮತ್ತು ಪೋಷಕರನ್ನೊಳಗೊಂಡ ಸಮಾಲೋಚನಾ ಕಾರ್ಯಕ್ರಮ ನಡೆಯಿತು.
ಆರ್.ವಿ.ತಾಂತ್ರಿಕ ಮಹಾವಿದ್ಯಾಲಯದ ಸಂಸ್ಥಾಪಕ ಪ್ರಾಂಶುಪಾಲ ಪ್ರೊ.ಎಂ.ಆರ್.ಹೊಳ್ಳ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರು ಮಾತನಾಡಿ, ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಉಪನ್ಯಾಸಕರ ಸಂಬಂಧಗಳು ಗಾಢವಾದ ಸಂವೇದನೆಗಳನ್ನು ಒಳಗೊಳ್ಳದೇ ಹೋಗುತ್ತಿರುವುದು ಆತಂಕಕಾರಿ. ವಿದ್ಯಾರ್ಥಿ ತಾನು ಕಲಿಯುವ ವಾತಾವರಣದಲ್ಲೇ ಬದುಕಿಗೆ ಅನಿವಾರ್ಯವಾಗಿ ಬೇಕಿರುವ ಹಲವು ಪಾಠಗಳನ್ನು ಕಲಿಯಬೇಕಿದೆ. ಶೈಕ್ಷಣಿಕ ಮೌಲ್ಯಗಳನ್ನು ಅರಿತಾಗ ಮಾತ್ರ ಬದುಕಿನ ನೈತಿಕತೆ ಅರ್ಥವಾಗುತ್ತದೆ ಎಂದರು. ವೋಗ್ ಸಂಸ್ಥೆಯ ಅಧ್ಯಕ್ಷ ಎಂ.ಎಂ.ಕರಿಯಪ್ಪ ಮಾತನಾಡಿ, ಸಂಸ್ಥೆ ಆರಂಭಿಕ ಹಂತದಲ್ಲೇ ಕೆಲವೇ ವಿದ್ಯಾರ್ಥಿಗಳ ಮೂಲಕ ಆರಂಭವಾದದ್ದು ಇಂದು ದೇಶದ ಪ್ರತಿಷ್ಠಿತ ಫ್ಯಾಷನ್ ಡಿಸೈನಿಂಗ್ ಸಂಸ್ಥೆಗಳಲ್ಲಿ ಒಂದಾಗಿರುವುದು ಸಾಧನೆಯ ಹಾದಿಯ ಸಾರ್ಥಕ ಹೆಜ್ಜೆ ಎಂದರು.
ಸಂಸ್ಥೆಯ ಪ್ರಾಂಶುಪಾಲ ಡಾ.ರಾವ್ ಮಾತನಾಡಿ, ವಿದ್ಯಾರ್ಥಿಗಳ ಅಭ್ಯುದಯಕ್ಕೆ ಪೋಷಕರ ಮಹತ್ವದ ಪಾತ್ರದ ಕುರಿತು ವಿವರಿಸಿದರು. ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ದೇಶದ ಹಲವೆಡೆಗಳಿಂದ ಅಗಮಿಸಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ.ಜಾತಿ, ಪ.ವರ್ಗದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ದೇವನಹಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಪ.ಜಾತಿ ಮತ್ತು ಪ.ವರ್ಗದ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ದಲಿತ ಸಂಘಟನೆಗಳ ಸಹಕಾರದೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ.ಜಾತಿ ಮತ್ತು ಪ.ವರ್ಗಗಳ 154 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಗುರುಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಉದ್ಘಾಟನೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ನೆರವೇರಿಸಿ ಕೆಳ ವರ್ಗದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಸಂಘಟನೆಗಳನ್ನು ಅಭಿನಂದಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿ ತಾನು ಬಡವ ಎಂಬ ಭಾವನೆಯನ್ನು ಮನಸ್ಸಿನಿಂದ ಕಿತ್ತುಹಾಕಿ ಏನಾದರೂ ಮಾಡಿ ವಿದ್ಯಾಭ್ಯಾಸ ಮಾಡುತ್ತೇನೆ ಎಂಬ ಹಠ ಇರಬೇಕು. ಆಗ ಮಾತ್ರ ಮುಂದುವರೆಯಲು ಸಾಧ್ಯ ಎಂದರು. ಅಧ್ಯಕ್ಷತೆಯನ್ನು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಲಕ್ಷ್ಮಣಮೂರ್ತಿ ವಹಿಸಿದ್ದರು, ಕಾರ್ಯದರ್ಶಿ ರಾಜಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ಮುನಿರಾಜು, ಎ.ಚಿನ್ನಪ್ಪ, ಯರ್ತಿಗಾನಹಳ್ಳಿ ಶಾಮಣ್ಣ, ಕಾರಹಳ್ಳಿ ಶ್ರೀನಿವಾಸ್, ಬುಳ್ಳಹಳ್ಳಿ ರಾಜಪ್ಪ, ನಾಗೇಶ್ ಮಾತನಾಡಿದರು. ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿ ಶ್ರೀರಾಮ್, ತಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ, ಉಪನ್ಯಾಸಕ ವೆಂಕಟೇಶ್, ಮಾದಿಗ ದಂಟೋರ ಅಧ್ಯಕ್ಷ ಮಾರಪ್ಪ ಉಪಸ್ಥಿತರಿದ್ದರು. ಖಜಾಂಚಿ ಎಂ.ಕೃಷ್ಣಪ್ಪ ಸ್ವಾಗತ ಕೋರಿದರು.