ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ಸೋಮಶೇಖರ್ ಕರೆ
ನೆಲಮಂಗಲ: ದೇಶದ ಬೆನ್ನೆಲುಬಾಗಿರುವ ರೈತರಿಗೆ ಆಧುನಿಕ ಕೃಷಿ ಪದ್ಧತಿ ಮಿಶ್ರ ತಳಿ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಲು ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಕೃಷಿ ಇಲಾಖೆ ಮಾಡಬೇಕಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ್ ತಿಳಿಸಿದರು.
ತಾಲೂಕಿನ ಹಸಿರುಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೈತ ಕ್ಷೇತ್ರ ಕಾರ್ಯಕ್ರಮದಡಿ ಸುಮಾರು 50ಕ್ಕೂ ಹೆಚ್ಚಿನ ರೈತರಿಗೆ ಮಣ್ಣಿನ ಪರೀಕ್ಷೆ, ಫಲವತ್ತತೆ ಮತ್ತು ಆದಾಯ ಕುರಿತಾದ ಕಾರ್ಯಾಗಾರದಲ್ಲಿ ಮಾತನಾಡುತ್ತ ರೈತರು ಹಳೆ ಬೇಸಾಯ ಪದ್ಧತಿಯನ್ನು ದೂರ ಮಾಡಿ ಆಧುನಿಕ ಕೃಷಿ ಪದ್ಧತಿಗೆ ಹೊಂದಿಕೊಳ್ಳಬೇಕು. ಅದಕ್ಕಾಗಿ ನೂತನ ತಂತ್ರಗಾರಿಕೆ ಮಣ್ಣಿನ ಫಲವತ್ತತೆಗೆ ಅಗತ್ಯ ಬೆಳೆ ಬೆಳೆಯಲು ಕೃಷಿ ವಿಜ್ಞಾನಿಗಳ ಮಾರ್ಗದರ್ಶನ ಪಡೆದುಕೊಂಡು ಹೆಚ್ಚಿನ ಆದಾಯ ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ತೋಟಗಾರಿಕೆ ಅಧಿಕಾರಿ ಶಿವಣ್ಣ ಮಾತನಾಡುತ್ತ ರೈತರಿಗೆ ತಮ್ಮ ಬೆಳೆಗಳಿಗೆ ಸಂಬಂಧಿಸಿದಂತೆ ತರಕಾರಿ ಮತ್ತು ಇತರೆ ಬೆಳೆಗಳನ್ನು ಬೆಳೆಯಲು ಬೇಕಾದ ಪ್ರಾಥಮಿಕ ಮಾಹಿತಿ, ಬೆಳೆಯುವ ವಿಧಾನ, ತಂತ್ರಗಾರಿಕೆ, ಮಣ್ಣಿನ ಪರೀಕ್ಷೆ, ಮಣ್ಣಿನ ಫಲವತ್ತತೆ, ಉತ್ಪಾದನೆ ಹಾಗೂ ತೊಡಗಿಸಿಕೊಳ್ಳುವ ವಿಧಾನ ಮತ್ತು ಸರ್ಕಾರದಿಂದ ದೊರೆಯಬಹುದಾದ ಅನುದಾನದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಸುಮಾರು 54 ರೈತರು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಯೋಜನಾಧಿಕಾರಿ ಎ.ಎಸ್. ಸುಕೇಶ್, ಆರ್. ಶಿವಕುಮಾರ್, ಬೋರಣ್ಣ, ಎಂ.ಬಿ. ಮೇಲ್ವಿಚಾರಕರು ಯತೀಶ್ ಸೇವಾ ಪ್ರತಿನಿಧಿಗಳು ಇದ್ದರು.