ಜಾತಿ ಗಣತಿಯಿಂದ ಜಾತಿ ನಿರ್ಮೂಲನೆ ಸಾಧ್ಯ: ಕಾಂತರಾಜು
ಆನೇಕಲ್ಲು: ದೇಶದಲ್ಲಿ 1400ಕ್ಕೂ ಹೆಚ್ಚು ಜಾತಿಗಳಿದ್ದು ರಾಜ್ಯದಲ್ಲಿ 500 ಜಾತಿಗಳನ್ನು ಗುರುತಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಕಡು ಬಡತನವನ್ನು ನೀಗಿಸಿ ಸಮಾನತೆ ತರಲು ಸಂಪನ್ಮೂಲಗಳ ಸಮಾನ ರೀತಿಯ ಹಂಚಿಕೆಯಾಗಬೇಕಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಎಚ್. ಕಾಂತರಾಜು ತಿಳಿಸಿದ್ದಾರೆ. ಅವರು ಆನೇಕಲ್ ತಾಲೂಕು ವಕೀಲರ ಸಂಘ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ವಕೀಲ ಸಮೂಹವನ್ನುದ್ದೇಶಿಸಿ ಮಾತನಾಡಿ ವಕೀಲ ಮಿತ್ರರು ಜಾತಿ ಗಣತಿ ಕಾರ್ಯಕ್ರಮವನ್ನು ಸಾಮಾಜಿಕ ಜವಾಬ್ದಾರಿ ಎಂದು ಪರಿಗಣಿಸಿ ಸಹಕಾರ ನೀಡಬೇಕು. ಜಾತಿ ಗಣತಿಯಿಂದ ಮಾತ್ರ ಜಾತ್ಯತೀತ ವ್ಯವಸ್ಥೆ ತರಲು ಸಾಧ್ಯ ಎಂದರು. ಜಾತಿ ಗಣತಿ ಮೂಲಕ ಆರೋಗ್ಯ, ಶಿಕ್ಷಣ, ಸೂರು ಹಾಗೂ ಉದ್ಯೋಗ ಭದ್ರತೆ ನೀಡಿ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ. ಮಂಡಲ ಆಯೋಗ ವರದಿಯಿಂದ ಪ್ರಾರಂಭವಾಗಿ ಇತ್ತೀಚಿನ ದ್ವಾರಕನಾಥ ವರದಿ ವರೆಗಿನ ಎಲ್ಲ ಪ್ರಮುಖ ಅಂಶಗಳನ್ನು ಅನುಷ್ಠಾನ ಮಾಡಲು ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. 2014ರ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಜಾತಿಗಣತಿ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಸ್ಥಳೀಯ ಸಂಸ್ಥೆಗಳು ಕೈ ಜೋಡಿಸಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ನಗರ-ಗ್ರಾಮೀಣ ಅಂತರ ದೂರವಾಗಿ ಸಮಾನ ರೀತಿಯ ಶಿಕ್ಷಣ ನೀಡಲು ಸರ್ಕಾರ ದಿಟ್ಟ ಹೆಜ್ಜೆ ಇಡಬೇಕೆಂದರು. ವಕೀಲರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ವಕೀಲರ ತಂಡ ಸದಾ ಸಿದ್ಧವಿದೆ. ಶುದ್ಧ ಕುಡಿಯುವ ನೀರು, ರಸ್ತೆ, ಸಾರಿಗೆ ವ್ಯವಸ್ಥೆ ಹಾಗೂ ರೈತಾಪಿ ಜನರ ಸೇವೆ ನೀಡಬೇಕಾದ ಕಂದಾಯ ಕಚೇರಿಯಲ್ಲಿನ ಅಕ್ರಮಗಳ ಸದ್ದಡಗಿಸಲು ವಕೀಲರ ಸಂಘ ಸದಾ ಸಿದ್ಧವಿದೆ ಎಂದರು.