ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪಡಿತರ ಚೀಟಿ ನವೀಕರಣ ಅವ್ಯವಸ್ಥೆಯ ಆಗರ

Srinivasa Murthy VN
Updated On : 15 Jul 2014, 1:08 am

-ಮತ್ತೀಕೆರೆ ಜಯರಾಮ್
ರಾಮನಗರ: ಪಡಿತರ ಚೀಟಿ ನವೀಕರಣ ಪ್ರಕ್ರಿಯೆ ಅದ್ವಾನವಾಗಿದೆ. ಅಧಿಕಾರಿಗಳ ಅಸಡ್ಡೆ ಮತ್ತು ಅವ್ಯವಸ್ಥೆಯ ಪರಿಣಾಮ ನವೀಕರಿಸಲ್ಪಟ್ಟ ಪಡಿತರ ಚೀಟಿ ಪಡೆದುಕೊಳ್ಳಲು ಆಹಾರ ಇಲಾಖೆ ಕಚೇರಿಗೆ ಬಂದವರು ಯಾತನೆ ಅನುಭವಿಸುತ್ತಿದ್ದಾರೆ.  
2010ಕ್ಕೆ ಮುನ್ನ ಪಡಿತರ ಚೀಟಿ ಪಡೆದಿದ್ದವರು ಪ್ರಸ್ತುತ ತಮ್ಮ ವಿಳಾಸ ದೃಢೀಕರಣ, ಬಯೋವುಟ್ರಿಕ್ ಯಂತ್ರದಲ್ಲಿ ಹೆಬ್ಬೆಟ್ಟಿನ ಮುದ್ರೆ ನೀಡುವ ಮೂಲಕ ಹೊಸದಾಗಿ ಕಾರ್ಡ್ ಪಡೆದುಕೊಳ್ಳಬೇಕಿದೆ. ಆದರೆ ವಿತರಣೆಗೆ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ.
ಕಾರ್ಡ್ ಹಂಚಿಕೆಯನ್ನು ಆಯಾ ತಾಲೂಕು ಕಚೇರಿಯಲ್ಲಿರುವ ಆಹಾರ ಇಲಾಖೆ ಶಾಖೆಯಲ್ಲೇ ವಿತರಣೆ ಮಾಡುತ್ತಿದ್ದು, ಜನದಟ್ಟಣೆಯೇ ಸೇರಿದೆ. ನೂಕು ನುಗ್ಗಲಿನಿಂದಾಗಿ ಕಾರ್ಡ್ ಪಡೆದುಕೊಳ್ಳಲು ಬಂದ  ವಯೋವೃದ್ಧರು, ಮಹಿಳೆಯರು, ಅನಾರೋಗ್ಯಪೀಡಿತರ ಪಾಡು ಹೇಳ ತೀರದಾಗಿದೆ.  
ಕೇಂದ್ರೀಕೃತ ವ್ಯವಸ್ಥೆ: ಹೊಸ ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು ಗ್ರಾಮ ಪಂಚಾಯಿತಿ ಇಲ್ಲವೇ ಹೋಬಳಿ ಮಟ್ಟದಲ್ಲಿ ಹಂಚಿಕೆ ಮಾಡಿದ್ದರೆ ಜನ ದಟ್ಟಣೆಯನ್ನು ಸಹಜವಾಗಿಯೇ ಕಡಿಮೆ ಮಾಡಬಹುದಿತ್ತು. ಆದರೆ, ಅಧಿಕಾರಿಗಳು ಮಾಡಿರುವ ಕೇಂದ್ರೀಕೃತ ವ್ಯವಸ್ಥೆ ಸಾಕಷ್ಟು ಅದ್ವಾನ, ಅವಾಂತರಗಳಿಗೆ ಕಾರಣವಾಗಿದೆ.
ಈ ಜಿಲ್ಲೆಯಲ್ಲಿ ಎಲ್ಲ 4 ತಾಲೂಕು ಕೇಂದ್ರಗಳಲ್ಲೂ ಕಾರ್ಡ್ ವಿತರಣೆ ನಡೆಯುತ್ತಿದೆ. ಪ್ರತಿ ಗ್ರಾ.ಪಂ., ನಾಡ ಕಚೇರಿಯಲ್ಲೂ ಕಂಪ್ಯೂಟರ್ ವ್ಯವಸ್ಥೆ ಇರುವುದರಿಂದ ಕಾರ್ಡ್ ಹಂಚಿಕೆಯನ್ನು ಆ ಮಟ್ಟಕ್ಕೆ ವಿಸ್ತರಿಸಬಹುದಿತ್ತಾದರೂ ಆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಾಳಜಿ ಇಲ್ಲದಾಗಿದೆ.
ತಾಲೂಕಿನ ಸಹಸ್ರಾರು ಕುಟುಂಬಗಳು ಅದರಲ್ಲೂ ಬಿಪಿಎಲ್ ಪಡಿತರ ಚೀಟಿದಾರರು ಹೊಸ ಕಾರ್ಡ್ ಪಡೆದುಕೊಳ್ಳಲು ತಾಲೂಕು ಕಚೇರಿಯಲ್ಲಿನ ಆಹಾರ ಇಲಾಖೆ ಶಾಖೆ ಮುಂದೆ ಮುಗಿಬೀಳುತ್ತಿದ್ದಾರೆ. ಸಾಕಷ್ಟು ಮಂದಿ ಬೆಳಗ್ಗೆಯಿಂದ ಸಂಜೆವರೆಗೆ ಕಾದು ಬರಿಗೈಲಿ ಹೋಗುತ್ತಿರುವುದೂ ಉಂಟು.
ಸರದಿಯಲ್ಲಿ ಬರೋದಿಲ್ಲ: ಕಾರ್ಡ್ ಪಡೆದುಕೊಳ್ಳಲು ಆಯಾ ಕುಟುಂಬದ ಸದಸ್ಯರಲ್ಲಿ ಒಬ್ಬರು ಕಡ್ಡಾಯವಾಗಿ ಹಾಜರಿರಬೇಕು. ಹೀಗಾಗಿಯೇ ಭಾರಿ ಪ್ರಮಾಣದಲ್ಲಿ ಜನ ಜಂಗುಳಿ ಕಂಡು ಬರುತ್ತಿದೆ. ಬಂದವರೆಲ್ಲ ಸರದಿಯಲ್ಲಿ ನಿಲ್ಲುವ ಬದಲು ಅಡ್ಡಾದಿಡ್ಡಿಯಾಗಿ ನುಗ್ಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.
ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಸೋಮವಾರ ಒಂದೇ ದಿನ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ನವೀಕರಿಸಲ್ಪಟ್ಟ ಕಾರ್ಡ್ ಪಡೆದುಕೊಳ್ಳಲು ಆಗಮಿಸಿದ್ದರು. ಅಲ್ಲಿ ನಡೆದ ನೂಕು ನುಗ್ಗಲಿನಲ್ಲಿ ಸಿಲುಕಿಕೊಂಡು ಮಹಿಳೆ ಸೇರಿದಂತೆ ಮೂವರು ಅಸ್ವಸ್ಥಗೊಂಡಿದ್ದೂ ಉಂಟು.

ಗದ್ದಲದಿಂದ ಸ್ಥಗಿತ
ಸಾಕಷ್ಟು ಕಾದು ಬಸವಳಿದ ಜನರು ಕಡೆಗೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಗದ್ದಲವೆಬ್ಬಿಸಿದರು. ಇದರಿಂದಾಗಿ ಕೆಲ ಕಾಲ ಕಾರ್ಡ್ ಹಂಚಿಕೆ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಲಾಗಿತ್ತು. ಇಷ್ಟಾಗಿಯೂ ಯಾಮೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡುವ ಗೋಜಿಗೆ ಹೋಗಲಿಲ್ಲ. ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಪೇದೆಯೊಬ್ಬರನ್ನು ನಿಯೋಜಿಸಿ, ನೂಕು ನುಗ್ಗಲು ತಡೆಯುವ ಪ್ರಯತ್ನವಾಯಿತು. ಸರದಿ ಮಾಡುವ ವಿಷಯದಲ್ಲಿ ಮಾತಿನ ಚಕಮಕಿ, ಕೂಗಾಟ ಮುಂದುವರಿದೇ ಇತ್ತು. ಇಷ್ಟೆಲ್ಲ ಅವ್ಯವಸ್ಥೆಗಳಿಗೆ ನೆರೆದವರು ಅಧಿಕಾರಿಗಳನ್ನು ದೂಷಿಸುತ್ತಲೇ ಇದ್ದರು.

ಪಹಣಿಗೂ ಸಾಲುಗಟ್ಟಿದ್ದರು
ಮುಂಗಾರು ಹಂಗಾಮಿನ ಕೃಷಿಗಾಗಿ ಸಬ್ಸಿಡಿ ದರದ ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಪಹಣಿ ಒದಗಿಸುವುದು ಕಡ್ಡಾಯವಾಗಿದೆ. ಹೀಗಾಗಿ ಪಹಣಿ ಪಡೆದುಕೊಳ್ಳುವುದಕ್ಕೂ ತಾಲೂಕು ಕಚೇರಿಯಲ್ಲಿ ಮತ್ತೊಂದು ದೊಡ್ಡನೆಯ ಸಾಲು ಕಂಡು ಬಂದಿತು. ಜನರಿಂದ ಸಾಕಷ್ಟು ಒತ್ತಡ, ಬೇಡಿಕೆ ಬಂದರೂ ಪಹಣಿ ವಿತರಣೆಯನ್ನು ಹೋಬಳಿ ಮಟ್ಟದ ನಾಡ ಕಚೇರಿಗಳಿಗೆ ವಿಸ್ತರಣೆ ಆಗಿಲ್ಲ. ಅಲ್ಲಲ್ಲಿ ವಿಸ್ತರಿಸಿದ್ದರೂ ಇಂಟರ್ ನೆಟ್ ಸೌನಭ್ಯವಿಲ್ಲದೆ ಜನರು ಬರಿಗೈಲಿ ಹಿಂತಿರುಗುತ್ತಿದ್ದಾರೆ. ಕಂದಾಯ ಇಲಾಖೆ ಜನರ ಬವಣೆಗಳಿಗೆ ಸ್ಪಂದಿಸುತ್ತಲೇ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement