ಮರಾಠಿ ಪುಂಡರ ಹಾವಳಿ ಖಂಡಿಸಿ ರಸ್ತೆ ತಡೆ
ಆನೇಕಲ್ಲು: ಭಾರತ ದೇಶದ ಒಕ್ಕೂಟ ವ್ಯವಸ್ಥೆ ಸಂವಿಧಾನದಡಿಯಲ್ಲಿ ರೂಪಿತವಾಗಿದ್ದು ಕಾರ್ಯಾಂಗ ನ್ಯಾಯಾಂಗ ಮತ್ತು ಶಾಸಕಾಂಗದ ಎಲ್ಲ ಪರಿಧಿಯನ್ನು ದೇಶವಾಸಿಗಳು ಗೌರವಿಸಬೇಕಾಗುತ್ತದೆ. ಮರಾಠಿಗರು ರಾಜ್ಯದ ಬೆಳಗಾವಿ ಗಡಿ ಭಾಗದಲ್ಲಿ ಪದೇಪದೆ ಪುಂಡಾಟಿಕೆ ನಡೆಸಿ ಕನ್ನಡಿಗರ ಸ್ವಾಭಿಮಾನ ಕೆಣಕ್ಕುತ್ತಿದ್ದಾರೆ. ಉಚ್ಛ ನ್ಯಾಯಾಲಯದ ಆದೇಶ ತಿರಸ್ಕರಿಸಿ ಅಕ್ಷಮ್ಯ ಅಪರಾಧ ಎಸಗಿದ್ದು ಈ ಕೂಡಲೇ ಶಾಸಕ ಮತ್ತು ಅವರ ಚೇಲಾಗಳನ್ನು ಬಂಧಿಸಿ ಗಡೀಪಾರು ಮಾಡಬೇಕೆಂದು ಪ್ರಜಾ ವಿಮೋಚನಾ ಚಳವಳಿ ಸಮತಾವಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಆದೂರು ಪ್ರಕಾಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅವರು ತಾಲೂಕಿನ ಬೊಮ್ಮಸಂದ್ರ ಕೈಗಾರಿಕೆ ಪ್ರದೇಶದಲ್ಲಿ ಎಂಇಎಸ್ ಪುಂಡರ ಹಾವಳಿ ಹಾಗೂ ರಾಜ್ಯ ಶಾಸಕರ ವೈಫಲ್ಯ ಖಂಡಿಸಿ ನಡೆಸಿದ ರಸ್ತೆ ತಡೆಯಲ್ಲಿ ನೂರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ನಾಡಿನ ಗಡಿ, ನೆಲ, ಜಲ ಹಾಗೂ ಭಾಷೆ ಸಂರಕ್ಷಣೆ ಬಗ್ಗೆ ಪಿವಿಸಿಎಂ ಅವಿರತವಾಗಿ ಹೋರಾಟ ನಡೆಸುತ್ತಿದ್ದು ರಾಜ್ಯದ 224 ಶಾಸಕರು ಹಾಗೂ ಮೇಲ್ಮನೆ ಸದಸ್ಯರು, ಲೋಕಸಭೆ ಮತ್ತು ರಾಜ್ಯ ಸಭೆ ಸದಸ್ಯರು ಈ ವಿಷಯ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬಂತೆ ಜಾಣ ಕುರುಡು ಮತ್ತು ಕಿವುಡು ಮೆರೆಯುತ್ತಿರುವುದು ಖಂಡನೀಯ ಎಂದರು. ಇಂದು ಒಂದು ಹಳ್ಳಿ ಕೇಳಿದ ಅವರು ನಾಳೆ ಬೆಳಗಾವಿ ಜಿಲ್ಲೆಯನ್ನೇ ಕೇಳುತ್ತಾರೆ. ಹಾಗೆಯೇ ಗಡಿ ಪ್ರದೇಶದಲ್ಲಿ ಎಲ್ಲ ಜಿಲ್ಲೆಗಳನ್ನು ತೆಲುಗು, ಕೇರಳಿಗರು ಮತ್ತು ತಮಿಳರು ಕೇಳಿದರೆ, ರಾಜ್ಯ ಒಕ್ಕೂಟ ವ್ಯವಸ್ಥೆಗೆ ಅರ್ಥವೇನು ಎಂದು ಕಿಡಿ ಕಾರಿದರು. ಬಹುಭಾಷಿಕರು ನೆಲೆಸಿರುವ ಕೈಗಾರಿಕೆ ಪ್ರದೇಶದಲ್ಲಿ ರಸ್ತೆ ತಡೆ ನಡೆಸುವ ಮೂಲಕ ದೇಶದ ಜನರ ಗಮನ ಸೆಳೆದು ಸಮಸ್ಯೆಯ ಆಳವನ್ನು ಅರ್ಥ ಮಾಡಿಸಿದರು.
ತಾಲೂಕು ಮುಖಂಡರಾದ ವಸಂತ್, ಕುಮಾರ್, ಆನಂದ್, ಮುನಿರಾಜು, ಯಲ್ಲಪ್ಪ ಸೇನೆ, ರಮೇಶ್, ನಾಗರಾಜು, ಹರೀಶ್ ಪಾಲ್ಗೊಂಡಿದ್ದರು