ಎಂಇಎಸ್, ಶಿವಸೇನೆ ಭೂತ ದಹಿಸಿ ಪ್ರತಿಭಟನೆ
ಬೆಂಗಳೂರು: ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ವಿಚಾರದಲ್ಲಿ ಪದೇಪದೆ ಖ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನೆ ಮುಖಂಡರ ವಿರುದ್ಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕನ್ನಡ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ಕನ್ನಡ ಸೇನೆ ಕಾರ್ಯರ್ತರು ಕನ್ನಡ ವಿರೋಧಿಗಳ ಭೂತ ದಹಿಸಿದರು. ಕನ್ನಡ ನೆಲದಲ್ಲಿ ಜನಿಸಿ, ಇಲ್ಲಿನ ಸಕಲ ಸೌಲಭ್ಯ ಪಡೆದು ಬೆಳಗಾವಿ ಜನತೆಯಿಂದ ಚುನಾಯಿತರಾಗಿ ಕೇಂದ್ರ, ರಾಜ್ಯ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದಿರುವ ರಾಜಕೀಯ ನಾಯಕರು, ಸಹೋದರರಂತೆ ಬಾಳುತ್ತಿರುವ ಕನ್ನಡ ಹಾಗೂ ಮರಾಠಿಗರ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಸೇನೆ ಆರೋಪಿಸಿದೆ.
ಪ್ರೌಢಶಾಲೆ ಸಹಶಿಕ್ಷಕರ ಸಂಘಕ್ಕೆ ಆಯ್ಕೆ
ನೆಲಮಂಗಲ: ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘಕ್ಕೆ ವಿ.ರಾಜಣ್ಣ (ಅಧ್ಯಕ್ಷ), ರುಜಾರಿ ಮಸ್ಕರೇನಸ್(ಉಪಾಧ್ಯಕ್ಷ), ಸಿ.ಜಿ.ಕುಮಾರಸ್ವಾಮಿ (ಪ್ರಧಾನ ಕಾರ್ಯದರ್ಶಿ), ಕೆ.ಎಂ.ಷಣ್ಮುಕಪ್ಪ (ಖಜಾಂಚಿ), ಮಂಜಪ್ಪ(ಸಹಕಾರ್ಯದರ್ಶಿ), ಮೋಹನ್ ಕುಮಾರ್ ಸಂಘಟನಾ ಕಾರ್ಯದರ್ಶಿ), ಎಂ.ಆರ್.ನಟರಾಜು (ನಿರ್ದೇಶಕ) ರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಎಸ್. ಶಾಂತಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿ.ಆರ್.ಭಟ್
ಬಂಧನಕ್ಕೆ ಆಗ್ರಹ
ಬೆಂಗಳೂರು: ಸಾಮಾಜಿಕ ತಾಣದಲ್ಲಿ ಅನಾಗರಿಕವಾಗಿ ಪ್ರಗತಿಪರ ಮಹಿಳಾ ಹೋರಾಟಗಾರ್ತಿ ಪ್ರಭಾ ಎನ್. ಬೆಲವಂಗಲ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿರುವ ವಿ.ಆರ್.ಭಟ್ ಅವರನ್ನು ಗೂಂಡಾ ಕಾಯ್ದೆ ಅನ್ವಯ ಕೂಡಲೇ ಬಂಧಿಸುವಂತೆ ಸಿಪಿಎಂ ಆಗ್ರಹಿಸಿದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಶೀಘ್ರ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಭಾರಿ ಪ್ರತಿಭಟನೆ ನಡೆಸುವುದಾಗಿ ಸಿಪಿಎಂ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಎಚ್ಚರಿಸಿದ್ದಾರೆ. ಕಮೆಂಟ್ ಹಾಕುವ ಭರದಲ್ಲಿ, ನಿಮ್ಮಂಥವರನ್ನು ಅತ್ಯಾಚಾರಿಗಳಿಂದ ಅತ್ಯಾಚಾರ ಮಾಡಿಸಬೇಕು ಎಂದು ವಿ.ಆರ್. ಭಟ್ ಕಮೆಂಟ್ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾ ಎನ್. ಬೆಲವಂಗಲ ಚಂದ್ರ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಟಿಸಿಎಸ್ ಐಟಿ ವಿಜ್
ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 'ಟಿಸಿಎಸ್ ಐಟಿ ವಿಜ್ 2014' ರಸಪ್ರಶ್ನೆ ಸ್ಪರ್ಧೆಯ ಬೆಂಗಳೂರು ಆವೃತ್ತಿ ಆ.7ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ. ಎಂಟನೇ ತರಗತಿಯಿಂದ ಆರಂಭಿಸಿ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ಶುಲ್ಕವಿರುವುದಿಲ್ಲ. ಪ್ರತಿಯೊಂದು ಶಾಲೆ, ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ 10 ತಂಡಗಳನ್ನು ಸ್ಪರ್ಧೆಗೆ ಕಳುಹಿಸಲು ಅವಕಾಶವಿದೆ. ಐಸಿಎಸ್ ಐಟಿ ವಿಜ್ 2014 ರಸಪ್ರಶ್ನೆ ಸ್ಪರ್ಧೆ ಭಾರತದ 14 ಸ್ಥಳಗಳಲ್ಲಿ ನಡೆಯುತ್ತದೆ. ಅಹಮದಾಬಾದ್, ಬೆಂಗಳೂರು, ಭುವನೇಶ್ವರ, ಚೆನ್ನೈ, ಕೊಯಮತ್ತೂರು, ದೆಹಲಿ, ಹೈದರಾಬಾದ್, ಇಂದೋರ್, ಕೊಚ್ಚಿ, ಕೋಲ್ಕತಾ, ಲಖನೌ, ಮುಂಬೈ, ನಾಗಪುರ ಮತ್ತು ಪುಣೆಯಲ್ಲಿ ಸ್ಪರ್ಧೆ ನಡೆಯುತ್ತದೆ. ಆಸಕ್ತ ವಿದ್ಯಾರ್ಥಿಗಳು, ತಮ್ಮ ಪ್ರೌಢಶಾಲೆ, ಕಾಲೇಜು ಮೂಲಕವೇ ಪ್ರವೇಶ ಪತ್ರವನ್ನು ಆ.4ರಂದು ಅಥವಾ ಅದಕ್ಕೂ ಮುನ್ನವೇ ರವಾನಿಸಬೇಕು. ವಿಳಾಸ- ಟಿಸಿಎಸ್ ಐಟಿ ವಿಜ್ ಕಾರಿಡಾರ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಸ್ಜೆಎಂ ಟವರ್, ನಂ. 18, ಶೇಷಾದ್ರಿ ರಸ್ತೆ, ಗಾಂಧಿ ನಗರ. 080-67246000. ವೆಬ್ಸೈಟ್-ಢಿಢಿಢಿ.ಡ್ಛಿಡ್ಝಡಿಢ್ಝಿಣ.್ಛ್ಟಟ
ಸಿಪಿಐ ಪ್ರತಿಭಟನೆ
ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸಿದ ಗೂಂಡಾಗಿರಿಯನ್ನು ಖಂಡಿಸಿ ಸಿಪಿಐ ಕಾರ್ಯಕರ್ತರು ನಗರದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಆದೇಶ ಉಲ್ಲಂಘಿಸುವ ಮೂಲಕ ಎಂಇಎಸ್ ಕಾರ್ಯಕರ್ತರು ನಾಮಫಲಕ ಹಾಕಿರುವ ಕ್ರಮವನ್ನು ಸಿಪಿಐ ಆಕ್ಷೇಪಿಸಿತು. ರಾಜ್ಯ ಸರ್ಕಾರ ಎಂಇಎಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಜನತೆಗೆ ಸೂಕ್ತ ರಕ್ಷಣೆ ನೀಡಬೇಕೆಂದು ಸಿಪಿಐ ಮನವಿ ಮಾಡಿದೆ. ಪ್ರತಿಭಟನೆಯಲ್ಲಿ ಸಿಪಿಐನ ಜಿಲ್ಲಾ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ, ಕಾ.ಎಂ.ದೀಪಕ್, ಕಾ.ವಿಜಯಬಾಸ್ಕರ್ ಹಾಗೂ ಡಾ.ಜನಾರ್ದನ್ ಭಾಗವಹಿಸಿದ್ದರು.
'ಫಾರ್ಮ್ ಪ್ರೆಶ್' ರೈತರ ಸಂತೆ
ಬೆಂಗಳೂರು: ಗ್ರೀನ್ ಅಲ್ಯೂರ್ ಸಹಯೋಗದೊಂದಿಗೆ ಫೋರಂ ವ್ಯಾಲ್ಯೂ ಮಾಲ್ 'ಫಾರ್ಮ್ ಫ್ರೆಶ್' ಎಂಬ ವಿಶಿಷ್ಟ ರೈತರ ಸಂತೆ ಪರಿಚಯಿಸುತ್ತಿದೆ. ರೈತರಿಂದ ನೇರವಾಗಿ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲಾಗುತ್ತದೆ. ಫಾರ್ಮ್ ಫ್ರೆಶ್ನ ಮೊದಲ ಮಾರಾಟ ಪ್ರದರ್ಶನದಲ್ಲಿ ತಾಜಾ ಉತ್ಪನ್ನಗಳಾದ ಗಿಣ್ಣು, ಆಹಾರ ಪದಾರ್ಥ ಸೇರಿದಂತೆ ತೋಟಗಾರಿಕೆ ಸಾಧನಗಳು, ಸಾವಯವ/ನೈಸರ್ಗಿಕ ಬಣ್ಣಗಳಿಂದ ತಯಾರಿಸಲ್ಪಟ್ಟ ಸುಸ್ಥಿರ ಪರಿಸರ ಅಲಂಕಾರಿಕ ವಸ್ತುಗಳು ಸಹ ಮಾರಾಟವಾಗಲಿದೆ. ಇದರ ಜತೆ ಗುಜರಾತಿನ ಢೋಕ್ಲಾ ಸೇರಿದಂತೆ ವಿವಿಧ ರಾಜ್ಯಗಳ ನಿರ್ದಿಷ್ಟ ಖಾದ್ಯಗಳು ಲಭ್ಯವಿದೆ. ಪ್ರತಿ ತಿಂಗಳ ಮೊದಲ ಭಾನುವಾರ ಫೋರಂ ವ್ಯಾಲ್ಯೂ ಮಾಲ್ನಲ್ಲಿ ರೈತರ ಮಾರುಕಟ್ಟೆ ಫಾರ್ಮ್ ಫ್ರೆಶ್ ಮಾರಾಟ ಮಳಿಗೆ ಆಯೋಜಿಸಲಾಗುತ್ತದೆ. 8150099680
ಲೇಖಕಿಯೊಬ್ಬರು ಕಸಾಪ ಅಧ್ಯಕ್ಷರಾಗಲಿ
ಬೆಂಗಳೂರು: ಉತ್ಕೃಷ್ಟವಾದ ಸಾಹಿತ್ಯ ರಚನೆಯಲ್ಲಿ ಮಹಿಳೆಯರು ತೊಡಗಿದ್ದರೂ, ಲೇಖಕಿಯೊಬ್ಬರಿಗೆ ಕಸಾಪ ಅಧ್ಯಕ್ಷರಾಗುವ ಅವಕಾಶ ಈವರೆಗೆ ದೊರೆತಿಲ್ಲ ಎಂದು ಮಾಜಿ ಸಚಿವೆ ಡಾ. ಲೀಲಾದೇವಿ ಪ್ರಸಾದ್ ವಿಷಾದ ವ್ಯಕ್ತಪಡಿಸಿದರು. ಸ್ನೇಹ ಸೌರಭ್ ಟ್ರಸ್ಟ್ ಹೊರತಂದ ಲೇಖಕಿಯರ ಹಲವು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮಹಿಳಾ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೂ ಪಾತ್ರವಾಗಿಲ್ಲ ಎನ್ನುವುದು ನೋವಿನ ಸಂಗತಿ ಎಂದರು. ಮಹಿಳೆಯರ ಸಾಹಿತ್ಯ ಅಡುಗೆ ಮನೆಗೆ ಸೀಮಿತ ಎನ್ನುವ ಕಾಲವಿತ್ತು. ಆದರೆ, ಕಥೆ, ಕವನ, ಕಾದಂಬರಿ, ವಿಮರ್ಶೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಹಿತ್ಯ ರಚಿಸಿ ಮಹಿಳೆಯರು ಸೈ ಎನಿಸಿಕೊಂಡಿದ್ದಾರೆ. ಆದರೆ ಅವರಿಗೆ ಸೀಗಬೇಕಾದ ಗೌರವ ಸಿಗುತ್ತಿಲ್ಲ ಎಂದರು. ಆರು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಲೇಖಕಿಯೊಬ್ಬರು ಅಧ್ಯಕ್ಷರಾಗಬೇಕು. ಆದಷ್ಟು ಬೇಗ ಆ ಕಾಲ ಬರಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದರು. ಪುಸ್ತಕ ಲೋಕಾರ್ಪಣೆಗೂ ಮುನ್ನ ನಟಿ ಕಲ್ಪನಾ ನೆನಪಿನಲ್ಲಿ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಗರಗಳಲ್ಲಿ ಸಂಸ್ಕೃತಿ ಬಿತ್ತುವ ಕೆಲಸ ಅಗತ್ಯ
ಬೆಂಗಳೂರು: ಕಾಸ್ಮೋಪಾಲಿಟನ್ ನಗರದಲ್ಲಿ ಅವ್ವ- ಅಜ್ಜಿ, ಅಪ್ಪ- ತಾತ ಪದಪ್ರಯೋಗ ಮರೀಚಿಕೆ ಆಗಿದ್ದು ಆಂಟಿ ಅಂಕಲ್ಗಳಲ್ಲಿ ಬೆರೆತು ಹೋಗಿದೆ. ಈ ನಿಟ್ಟಿನಲ್ಲಿ ನಗರಗಳಲ್ಲಿ ಸಂಸ್ಕೃತಿಯ ಬಿತ್ತನೆ ಅಗತ್ಯ ಎಂದು ಖ್ಯಾತ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಅಭಿಪ್ರಾಯಪಟ್ಟರು. ವಚನ ಜ್ಯೋತಿ ಬಳಗ ಏರ್ಪಡಿಸಿದ್ದ 'ಕವಿ ಕಾವ್ಯ ಶ್ರಾವಣ-ಮನೆಯಿಂದ ಮನಕ್ಕೆ' ಸಂಸ್ಕೃತಿ ಸಿಂಚನ ಉದ್ಘಾಟಿಸಿ ಮಾತನಾಡಿದರು. ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪುವರೆಗೆ ಮೂವತ್ತು ದಿನಗಳ ಕಾಲ ಕನ್ನಡ ಕವಿಗಳ ನಾಮಸ್ಮರಣೆ ನೆರವೇರುತ್ತಿರುವುದು ಸಂತೋಷ ತಂದಿದೆ ಎಂದರು. ಇಂದು ಎಲ್ಲಡೆ ಹಬ್ಬಿರುವ ಟಿವಿ ಎಂಬ ಮಾರಿಯ ನಿಗ್ರಹಕ್ಕೆ ಕವಿ ಕಾವ್ಯ ಶ್ರಾವಣ ಪೂರಕವಾಗಿದೆ. ಪಂಪ ರನ್ನ ಪೊನ್ನರ ಹೆಸರು ನೆನಪಿಸುವ ಕನ್ನಡ ಸಂಸ್ಕೃತಿ ಸಂಚಾರ, ಮಹಾನಗರದಲ್ಲಿ ಕನ್ನಡ ಭಾಷೆ ಉಳಿಸಿ ಬೆಳಸುವ ನಿಟ್ಟಿನಲ್ಲಿ ಕವಿ ಕಾವ್ಯ ಶ್ರಾವಣ ಉತ್ತಮ ವೇದಿಕೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮಾಜಿ ಡಿಜಿಪಿ ಶಂಕರ್ ಬಿದರಿ ಮಾತನಾಡಿ, ವಚನಗಳು ಜಾತಿಪೂರಕವಲ್ಲ, ಅವು ವರ್ಗ ವಿರೋಧಿಗಳು. ಶ್ರಾವಣ ಮಾಸದ ಕವಿ ಕಾವ್ಯ ಶ್ರಾವಣ ಕಾರ್ಯಕ್ರಮ ಅವ್ವ-ಅಜ್ಜಿ ಕೈಹಿಡಿದು ಕರೆದೊಯ್ಯುತ್ತಿರುವುದು ನೆನಪಾಗುತ್ತದೆ. ಕನ್ನಡದ ದಿಗ್ಗಜರ ಪರಿಚಯ ಮಾಡಿಕೊಡುವ ಜತೆಗೆ ದಿನನಿತ್ಯ ಗೀತಗಾಯನ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಎಂದು ಪ್ರಶಂಸಿದರು. ವಚನ ಜ್ಯೋತಿ ಬಳಗದ ಅಧ್ಯಕ್ಷಎಸ್.ಪಿನಾಕಪಾಣಿ, ಶಿವಕುಮಾರ್, ಮಾದಯ್ಯ, ಪ್ರಭು ಇಸುವನಹಳ್ಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಶ್ವಕರ್ಮ ನಿಗಮ ಆಯ್ಕೆ ಮಹತ್ವದ ಸಭೆ ಇಂದು
ಬೆಂಗಳೂರು: ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರ ಆಯ್ಕೆ ಹಾಗೂ ಇನ್ನಿತರ ವಿದ್ಯಮಾನಗಳ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಬುಧವಾರ ಮಹತ್ವದ ಸಭೆ ಕರೆದಿದೆ.ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅವರು ಈ ಸಭೆ ಕರೆದಿದ್ದು, ದೇವರಾಜ್ ಅರಸು ಭವನದಲ್ಲಿ ಬುಧವಾರ ಸಂಜೆ 5 ಗಂಟೆಗೆ ಸಭೆ ನಡೆಯಲಿದೆ.ವಿಶ್ವಕರ್ಮ ಸಮಾಜದ ಪ್ರಮುಖ ಸ್ವಾಮೀಜಿಗಳು, ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ, ವಿಧಾನಪರಿಷತ್ ಸದಸ್ಯ ರಘು ಆಚಾರ್ ಸೇರಿದಂತೆ ಹಲವು ಮುಖಂಡರಿಗೆ ಆಹ್ವಾನ ನೀಡಲಾಗಿದೆ.
ದೂರದರ್ಶನ ವ್ಯಾಮೋಹ ಸಾಹಿತ್ಯ ಬೆಳವಣಿಗೆಗೆ ಧಕ್ಕೆ
ಹೊಸಕೋಟೆ: ಜನರಲ್ಲಿ ಅತಿಯಾದ ದೂರದರ್ಶನ ವ್ಯಾಮೋಹ ಕನ್ನಡ ಸಾಹಿತ್ಯ ಬೆಳವಣಿಗೆಗೆ ತೀವ್ರವಾದ ಧಕ್ಕೆಯಾಗುತ್ತಿದ ಎಂದು ಬೆಂಗಳೂರಿನ ಚಾರುಮತಿ ಪ್ರಕಾಶನದ ಪ್ರಕಾಶಕ ಬಿ.ಎಸ್. ವಿದ್ಯಾರಣ್ಯ ಹೇಳಿದರು. ಪಟ್ಟಣದಲ್ಲಿ ಬೆಂಗಳೂರಿನ ಚಾರುಮತಿ ಪ್ರಕಾಶನ ಏರ್ಪಡಿಸಿದ್ದ ಐದು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಸಮಾಜದಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಜನರಲ್ಲಿ ಸಾಹಿತ್ಯದ ಬಗ್ಗೆ ಉತ್ಸಾಹ ಕುಂಠಿತಗೊಳ್ಳುತ್ತಿದೆ ಎಂದು ಹೇಳಿದರು. ಶೀಘ್ರವಾಗಿ ಜನಪ್ರಿಯತೆಗಳಿಸಲು ಕೆಲವರು ಕೀಳು ಅಭಿರುಚಿಯ ಅಶ್ಲೀಲ ಸಾಹಿತ್ಯ ರಚಿಸುವ ಮೂಲಕ ಯುವಕರ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅನ್ಯರು ಭಾಷೆಯ ಬಗ್ಗೆ ತಾತ್ಸಾರ ಮನೋಭವಾ ಹೊಂದುವಂತಾಗಿದೆ. ಚಲನಚಿತ್ರಗಳಲ್ಲೂ ದ್ವಂದ್ವಾರ್ಥದಿಂದ ಕೂಡಿದ ಸಂಭಾಷಣೆಗಳು ಹೆಚ್ಚಾಗುತ್ತಿದ್ದು, ಯುವಕ ಯವತಿಯರು ಹಾದಿ ತಪ್ಪಲು ಪ್ರಮಖ ಕಾರಣವಾಗಿದೆ ಎಂದರು. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಸಾಹಿತ್ಯ ರಚನೆ ಬಗ್ಗೆ ಯುವಕರಿಗೆ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ರೂಪಿಸಬೇಕಾಗಿದ್ದು ಸರಕಾರ ಸಹ ಅಗತ್ಯ ನೆರವು ನೀಡಬೇಕಾದ್ದು ಅಗತ್ಯವಾಗಿದೆ. ಸಾಮಾಜಿಕ ಬದಲಾವಣೆ ತರುವಂತಹ ಸಾಹಿತ್ಯಗಳನ್ನು ರಚಿಸಲು ಗಮನಹರಿಸಬೇಕಾಗಿದ್ದು ಜನರಲ್ಲಿ ಓದುವ ಅಭಿರುಚಿ ಸಹ ಹೆಚ್ಚಿದಲ್ಲಿ ಮಾತ್ರ ಸಾಹಿತಿಗಳ, ಪ್ರಕಾಶಕರ ಶ್ರಮ ಸಾರ್ಥಕವಾಗಲಿದೆ ಎಂದರು. ಕೃತಿಗಳನ್ನು ಬಿಡುಗಡೆ ಮಾಡಿದ ವಿವೇಕಾನಂದ ವಿದ್ಯಾಕೇಂದ್ರದ ಕಾರ್ಯದರ್ಶಿ ನಾಗರಾಜ ಗುಪ್ತ ಮಾತನಾಡಿ, ಸಮಾಜದಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಜನರಲ್ಲಿ ಸಾಹಿತ್ಯದ ಬಗ್ಗೆ ಉತ್ಸಾಹ ಕುಂಠಿತಗೊಳ್ಳುತ್ತಿದೆ. ಪರಿಸ್ಥಿತಿಗೆ ಅನುಗುಣವಾದ ಉತ್ತಮ ಸಾಹಿತ್ಯ ರಚನೆ ಬಗ್ಗೆ ಯುವಕರಿಗೆ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ರೂಪಿಸಬೇಕಾಗಿದೆ ಎಂದರು. ನಾಗಸುಬ್ರಹ್ಮಣ್ಯಂ ರಚನೆಯ ಕನ್ನಡ ಚಮತ್ಕಾರ ಕೃತಿಯ ಬಗ್ಗೆ ವಿದ್ವಾಂಸ ನಿಡುಮಾಮಿಡಿ ಶ್ರೀಕಂಠರೀವು, ನಾ.ಧನಪಾಲರ ಕಾಡುವ ಕಥೆಗಳ ಬಗ್ಗೆ ಸಾಹಿತಿ ಹನುಮಂತರಾಜು ಬಿ.ಪಾಳ್ಯ, ಎನ್.ಬಿ.ರೇಣುಕಾರ ಗರಿ ಬಿಚ್ಚಿದ ನವಿಲು ಬಗ್ಗೆ, ಸಾಹಿತಿ ಜ.ಮು.ಚಂದ್ರ, ಎನ್.ಜೆ.ಶ್ರೀರಾಮ್ರ ಯಾರೋ ಆ ಚಿತ್ರಕಾರ ಕೃತಿಯ ಬಗ್ಗೆ ಸಾಹಿತಿ ರಮೇಶ್ ಚನ್ನಪ್ಪ, ನಿಡಘಟ್ಟ ಕೃಷ್ಣರ ಸಂಘರ್ಷದ ಬಗ್ಗೆ ಸಾಹಿತಿ ಎಂ.ಆರ್. ಶಿವರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಶಂಕರ ಭಗವತ್ಪಾದ ಆಶ್ರಮಅಧ್ಯಕ್ಷ ಪದ್ಮಪಾದ ಸ್ವಾಮೀಜಿ ಉಪಸ್ಥಿತರಿದ್ದರು.
ಕೃಷಿ ಭೂಮಿ ನೀಡುವ ನೆಪದಲ್ಲಿ ಅಕ್ರಮ: ಆರೋಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಕೃಷಿ ಭೂಮಿ ನೀಡುವ ನೆಪದಲ್ಲಿ ಕೋಟ್ಯಂತರ ಬೆಲೆ ಬಾಳುವ ಸರ್ಕಾರಿ ಜಾಗವನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘ ಆರೋಪಿಸಿದೆ.ಕೃಷಿ ಉದ್ದೇಶಕ್ಕೆ ಜಮೀನು ನೀಡುವ ನೆಪದಲ್ಲಿ ನಗರದ ಕೇಂದ್ರ ಭಾಗದಲ್ಲಿ ಜಮೀನು ಹಂಚಿಕೆ ಮಾಡಿ, ಸಮಗ್ರ ನಗರ ಯೋಜನೆಯನ್ನೇ ಉಲ್ಲಂಘಿಸಲಾಗಿದೆ. ಈ ಮೂಲಕ ಬಿಲ್ಡರ್ಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ನಾಗರಾಜ್ ಮತ್ತು ನಿರ್ದೇಶಕ ಪ್ರಸಾದ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ಸೂರ್ಯನಾರಾಯಣ ರಾವ್ ಎಂಬ ಸ್ವಾತಂತ್ರ್ಯ ಹೋರಾಟಗಾರರಿಗೆ ನೆರವು ನೀಡಬೇಕೆಂದು ಕೆಲ ದಶಕಗಳ ಹಿಂದೆ ಅಂದಿನ ರಾಜ್ಯ ಸರ್ಕಾರ 4 ಎಕರೆ ಕೃಷಿ ಜಮೀನು ನೀಡಲು ನಿರ್ಧರಿಸಿತ್ತು. ಅದರಂತೆ 16-3-1967ರಲ್ಲಿ ಕಂದಾಯ ಇಲಾಖೆ ಬೆಂಗಳೂರಿನಲ್ಲಿ 4 ಎಕರೆ ಜಮೀನನ್ನು ನೇರವಾಗಿ ಮಂಜೂರು ಮಾಡಿತು. ಆದರೆ, ಕಂದಾಯ ಇಲಾಖೆ ನೇರವಾಗಿ ಫಲಾನುಭವಿಗೆ ಸರ್ಕಾರಿ ಜಮೀನು ನೀಡುವುದು ತಪ್ಪು. ಅದು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಮೂಲಕ ಹಂಚಿಕೆಯಾಗಬೇಕೆಂದು ಸರ್ಕಾರಕ್ಕೆ ತಕ್ಷಣ ತಿಳಿಯಿತು. ಹೀಗಾಗಿ ಸೂರ್ಯನಾರಾಯಣ ರಾವ್ ಅವರಿಗೆ ನೀಡಿದ್ದ ಜಮೀನನ್ನು ತಕ್ಷಣವೇ ವಾಪಸ್ ಪಡೆದಿತ್ತು ಎಂದು ಪ್ರೊ.ನಾಗರಾಜ್ ವಿವರಿಸಿದರು.10 ವರ್ಷಗಳೇ ಕಳೆದರೂ ಜಮೀನು ಸಿಗದಿದ್ದರಿಂದ ಸೂರ್ಯನಾರಾಯಣ ರಾವ್ ಹೈಕೋರ್ಟ್ ಮೆಟ್ಟಿಲೇರಿದರು. ಅದು ವಿಚಾರಣೆ ನಡೆದು ತೀರ್ಪು ಬರುವಷ್ಟರಲ್ಲಿ ಸೂರ್ಯನಾರಾಯಣ ರಾವ್ (1989)ತೀರಿಕೊಂಡರು. ಆದರೆ 2010ರಲ್ಲಿ ಈ ಬಗ್ಗೆ ಅಂತಿಮ ತೀರ್ಪು ನೀಡಿದ ಕೋರ್ಟ್, ಸೂರ್ಯನಾರಾಯಣ ರಾವ್ ಅವರಿಗೆ ಎಲ್ಲಾದರೂ ಜಮೀನು ನೀಡಬೇಕೆಂದು ಸೂಚಿಸಿತು. ನಂತರ ಸೂರ್ಯನಾರಾಯಣ ರಾವ್ ಪುತ್ರ ಸುಂದರೇಶ್ ಕಾನೂನು ಹೋರಾಟ ಮುಂದುವರಿಸಿದರು. ಆಗ ಕಂದಾಯ ಇಲಾಖೆ ಜಮೀನು ನೀಡುವುದಾಗಿ ಒಪ್ಪಿಕೊಂಡಿತ್ತು. ಆದರೆ ನೀಡಿದ್ದು ಕೃಷಿ ಜಮೀನಲ್ಲ. ಪರಿವರ್ತನೆಯಾದ ಬೆಲೆ ಬಾಳುವ ಜಮೀನು. ಅದೂ ಶ್ರೀಗಂಧ ಕಾವಲ್ನಲ್ಲಿ ನೀಡಿದೆ ಎಂದು ಎಂದು ಸಂಘದ ನಿರ್ದೇಶಕ ಪ್ರಸಾದ್ ದೂರಿದರು.ಸರ್ಕಾರದ ಜಮೀನು ಹಂಚಿಕೆ ಮಾಡಿರುವುದು ಕಾನೂನು ಮತ್ತು ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಜಮೀನು ನೀಡುವ ನೆಪದಲ್ಲಿ ಅವರ ಪುತ್ರ ಸುಂದರೇಶ್ಗೆ ಜಮೀನು ಮಂಜೂರು ಮಾಡಲಾಗಿದೆ ಎಂದರು.