ಲೈಂಗಿಕ ದೌರ್ಜನ್ಯ ತಡೆಗೆ ಶಿಕ್ಷಕರ ಸಹಕಾರ ಅಗತ್ಯ
ಸೂಲಿಬೆಲೆ: ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ತಡೆಗಟ್ಟಲು ಶಿಕ್ಷಕರು ಪೊಲೀಸರಿಗೆ ಸಹಕಾರ ನೀಡಬೇಕು. ಖಾಸಾಗಿ ಶಾಲೆಗಳಿಗೆ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಸಂದೀಪ್ ಪಿ.ಕೌರಿ ಹೇಳಿದ್ದಾರೆ.
ಸೂಲಿಬೆಲೆ ಸಮೀಪದ ಚಿಕ್ಕಅರಳಿಗೆರೆಯಲ್ಲಿರುವ ರಿಷಿಕುಲ್ ವಿದ್ಯಾ ಫೀಠದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಖಾಸಗಿ ಶಾಲೆಯ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸಿಸಿಟಿವಿ ಆಳವಡಿಸಬೇಕು. ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲೆಯ ವಾಹನ ಚಾಲಕರ ನೇಮಕ, ಅಪರಿಚಿತ ವ್ಯಕ್ತಿಗಳ ಒಡಾಟದ ಮೇಲೆ ನಿಗಾ, ಗುರುತಿನ ಚೀಟಿ ಇಲ್ಲದೇ ಬರುವ ಪೋಷಕರು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ರಿಷಿಕುಲ್ ವಿದ್ಯಾಪೀಠದ ಸಂಸ್ಥಾಪಕ ದೇವರಾಜ್ ಮಾತನಾಡಿ, ಶಾಲೆಯ ವ್ಯಾಪ್ತಿಯಲ್ಲಿ ಸಿಸಿಟಿವಿ ಆಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ವಾಹನ ಚಾಲಕರ ನೇಮಕ ಮಾಡಿಕೊಳ್ಳಲಾಗಿದೆ. ಅಪ್ಪಣೆ ಇಲ್ಲದೇ ಯಾರೊಬ್ಬರು ಶಾಲೆಯ ಒಳಗಡೆ ಪ್ರವೇಶ ಮಾಡುವಂತಿಲ್ಲ. ಶಾಲೆ ವಾಹನದಲ್ಲಿ ಪ್ರತಿನಿತ್ಯ ಮಕ್ಕಳನ್ನು ಕರೆದುಕೊಂಡು ಬರಲು ವಾಹನ ಚಾಲಕರ ಜೊತೆ ಮಹಿಳೆ ಸಿಬ್ಬಂದಿ ಹೋಗುತ್ತಾರೆ. ಮಾರ್ಗಸೂಚಿ ಆಳವಡಿಕೆಗೆ ಶಾಲೆ ಆಡಳಿತ ಮಂಡಳಿ ನಿಗಾ ವಹಿಸಿದೆ ಎಂದರು.
ಮಕ್ಕಳ ಶಿಕ್ಷಣಕ್ಕೆ ಪೂರಕ ಸೌಲಭ್ಯ ಕಲ್ಪಿಸಿ
ಹೊಸಕೋಟೆ: ಮಕ್ಕಳ ಶಿಕ್ಷಣಾಭ್ಯಾಸಕ್ಕೆ ಪೂರಕವಾದ ಸೌಲಭ್ಯ ಕಲ್ಪಿಸಬೇಕಾದ್ದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಎನ್. ನಾಗರಾಜ್ ಹೇಳಿದರು.
ತಾಲೂಕು ಕುರುಬರ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ಬೆಂಗಳೂರಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಂಸ್ಥೆಗಳು ಹೆಚ್ಚಾಗಿವೆ. ವಿಫುಲವಾದ ಉದ್ಯೋಗಾವಕಾಶಗಳು ಲಭ್ಯವಿದ್ದು, ಉತ್ತಮ ಅಂಗ ಗಳಿಸಿಕೊಂಡಲ್ಲಿ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದರು. ತಾಲೂಕಿನ ಜನಾಂಗದ ಸುಮಾರು 50 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಕುರುಬರ ಸಂಘದ ತಾಲೂಕು ಅಧ್ಯಕ್ಷ ಸಿ.ಶ್ರೀನಿವಾಸಯ್ಯ, ಪ್ರದೇಶ ಕುರುಬರ ಸಂಘದ ನಿರ್ದೇಶಕ ಕೆ.ನಾಗೇಶ್, ಗ್ರಾಮಾಂತರ ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಸಿ. ನಾಗರಾಜ್ ತಾಲೂಕು ಕುರುಬ ನೌಕರರ ಸಂಘದ ಅಧ್ಯಕ್ಷ ಎ.ಎನ್.ಅಶ್ವತ್ಥ ನಾರಾಯಣ್, ದಶರಥ, ಎಂ.ವೆಂಕಟಸ್ವಾಮಿ, ಪುರಸಭೆ ಅಧ್ಯಕ್ಷೆ ಗುಲಾಬ್ ಜಾನ್ ಉಪಸ್ಥಿತರಿದ್ದರು.