ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆ
ರಾಮನಗರ: ಕಟ್ಟಡ ನಿರ್ಮಾಣ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಕಾರ್ಮಿಕರು ಈ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ವಕೀಲ ಜೆ.ಕೆ. ರಂಗಸ್ವಾಮಿ ಕರೆ ನೀಡಿದರು.
ನಗರದ ಛತ್ರದ ಬೀದಿಯಲ್ಲಿರುವ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಗೃಹ ನಿರ್ಮಾಣ ಹಾಗೂ ಕಟ್ಟಡ ಕಾರ್ಮಿಕರ ಸಂಘವು ಏರ್ಪಡಿಸಿದ್ದ ಕಾರ್ಮಿಕ ಜಯಂತಿ ಆಚರಣೆ ಹಾಗೂ ಶ್ರೀರಾಮ ದೇವರ 51ನೇ ವರ್ಷದ ಮುತ್ತಿನ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕ ವರ್ಗ ಸಂಘಟಿತರಾಗಿದ್ದರೆ ಸರ್ಕಾರಿ ಸೌಲಭ್ಯಗಳನ್ನು ದೊರಕಿಸಿಕೊಳ್ಳುವುದು ಸುಲಭ. ಕಾರ್ಮಿಕರು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘದ ಹಾಗೂ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ತಿಳಿಸಿದರು.
ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಹಾಗೂ ಮದ್ಯಪಾನ, ಬೀಡಿ-ಸಿಗರೇಟು ಸೇದುವಂತಹ ದುರಭ್ಯಾಸಗಳಿಗೆ ಬಲಿಯಾಗಿ ಶ್ರಮ ವಹಿಸಿ ದುಡಿದ ಹಣವನ್ನು ವೃಥಾ ಖರ್ಚು ಮಾಡಬಾರದು. ಹೀಗಾದಾಗ ಆರ್ಥಿಕವಾಗಿ ಸದೃಢರಾಗುವ ಜತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದು ಕಿವಿ ಮಾತು ಹೇಳಿದರು.
ಸಂಖ್ಯೆ ಕ್ಷೀಣ: ಯಾಂತ್ರಿಕತೆಯ ಹಾವಳಿ ಹಾಗೂ ಸುರಕ್ಷತೆಯ ಕೊರತೆಯಿಂದ ದಿನೇ ದಿನೇ ಕೂಲಿ ಕಾರ್ಮಿಕರ ಸಂಖ್ಯೆ ಕ್ಷೀಣಿಸುತ್ತಿದೆ. ಆಕರ್ಷಣೆಯಾಗಿ ಬಂಗಲೆಗಳನ್ನು ಕಟ್ಟುವ ಅನೇಕ ಕಾರ್ಮಿಕರು ಸ್ವಂತ ಸೂರಿಲ್ಲದೆ ಕೊರಗುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ ನಿವೇಶನಗಳನ್ನು ನೀಡುವಂತೆ ಹಿಂದಿನ ಎಲ್ಲಾ ಸರ್ಕಾರಗಳಿಗೆ ಮನವಿ ಮಾಡಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂಘದ ಅಧ್ಯಕ್ಷ ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸೀತಾ ರಾಮದೇವರ ಉತ್ಸವ ಮೂರ್ತಿಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಆರಂಭದಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ರುದ್ರಮುನಿ ಅವರಿಗೆ ಸಂಘದ ವತಿಯಿಂದ ಸಂತಾಪ ಸೂಚಿಸಲಾಯಿತು.
ಕಾರ್ಮಿಕ ಇಲಾಖೆಯ ಚೇತನ್, ಸಂಘದ ಉಪಾಧ್ಯಕ್ಷ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ವಿ. ಲಕ್ಷ್ಮಣ್, ಸಂಚಾಲಕ ವಿ.ಚಂದ್ರಶೇಖರ್, ಪದಾಧಿಕಾರಿಗಳಾದ ಪಾಪಣ್ಣ, ಕೃಷ್ಣಪ್ಪ ಮತ್ತಿತರರು ಹಾಜರಿದ್ದರು. ಇದೇ ವೇಳೆ 11 ಮಂದಿ ಹಿರಿಯ ಕಾರ್ಮಿಕರನ್ನು ಸನ್ಮಾನಿಸಲಾಯಿತು.