ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕ್ಷೇತ್ರಕ್ಕೆ ಶಾಸಕರು ಅಪರೂಪದ ಅತಿಥಿ

Srinivasa Murthy VN
Updated On : 2 Jun 2014, 1:47 am

-ಮತ್ತೀಕೆರೆ ಜಯರಾಮ್
ರಾಮನಗರ: ಈ ಕ್ಷೇತ್ರಕ್ಕೆ ಶಾಸಕರು ಅಪರೂಪದ ಅತಿಥಿ. ಜನರ ದೂರು, ದುಮ್ಮಾನ ಆಲಿಸಲು ನೀಡುತ್ತಿದ್ದ ಪ್ರತಿ ಸೋಮವಾರದ ಭೇಟಿ ನಿಲ್ಲಿಸಿ ಮೂರು ತಿಂಗಳಾಗಿದೆ. ಕ್ಷೇತ್ರಾಂತರ ಮಾಡಿ ಪಾಠ ಕಲಿತರೂ ಅವರಿನ್ನೂ ತಪ್ಪು ತಿದ್ದುಕೊಳ್ಳುತ್ತಿಲ್ಲ.
ಹೀಗೆ, ಶಾಸಕ ಇದ್ದೂ ಇಲ್ಲದಂತಿರುವ ಕ್ಷೇತ್ರವೇ ರಾಮನಗರ. ಕ್ಷೇತ್ರದಲ್ಲಿ ಪ್ರಚಾರ ನಡೆಸದೆಯೂ ಭಾರಿ ಅಂತರದ ಗೆಲವು ಸಾಧಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಕ್ಷೇತ್ರ ಸಂಪರ್ಕ ಕಡಿದುಕೊಂಡ ಶಾಸಕರಾಗಿದ್ದಾರೆ.
ಅಲ್ಲಿ ಮಲ ಮಗ: ರಾಮನಗರ ಮತ್ತು ತಮ್ಮ ಸಂಬಂಧವನ್ನು ತಾಯಿ-ಮಗನಿಗೆ ಹೋಲಿಸಿಕೊಂಡೇ ಬಂದಿರುವ ಕುಮಾರಸ್ವಾಮಿ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ಕ್ಷೇತ್ರಾಂತರ ಮಾಡಿದ್ದರು. ಅಲ್ಲಿನ ಜನತೆ ಇವರನ್ನು ಮಲ ಮಗನಂತೆ ಕಂಡಿದ್ದಾರೆ.
ಕ್ಷೇತ್ರಾಂತರದ ಪರಿಣಾಮ ಬೆಂಗಳೂರು ಗ್ರಾಮಾಂತರದಲ್ಲೂ ಜೆಡಿಎಸ್ 3ನೇ ಸ್ಥಾನಕ್ಕೆ ದೂಡಲ್ಪಟ್ಟಿತು. ಸ್ವಕ್ಷೇತ್ರ ರಾಮನಗರದಲ್ಲೂ ಸ್ವಪಕ್ಷಕ್ಕೆ ಮುನ್ನಡೆ ಸಿಗಲಿಲ್ಲ. ಇಷ್ಟಾಗಿಯೂ ಎಚ್ಚೆತ್ತುಕೊಳ್ಳದ ಕುಮಾರಸ್ವಾಮಿ ರಾಮನಗರವನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ.
ಕುಮಾರಸ್ವಾಮಿ ಪಾಲಿಗೆ ರಾಜಕೀಯವಾಗಿ ಜನ್ಮ ನೀಡಿದ ನೆಲ ರಾಮನಗರ. ಅತ್ತೆ ಮೇಲಿನ ಕೋಪವನ್ನು ಕೊತ್ತಿ ಮೇಲೆ ತೋರಿದಂತೆ ಸೋಲಿಸಿ 3ನೇ ಸ್ಥಾನಕ್ಕೆ ದೂಡಿದ ಚಿಕ್ಕಬಳ್ಳಾಪುರದ ಜನರ ಮೇಲಿನ ಸಿಟ್ಟಿಗೆ ರಾಮನಗರದ ಜನರು ಪರಿತಪಿಸುವುದು ಯಾವ ನ್ಯಾಯ ಎನ್ನುವ ಪ್ರಶ್ನೆ ಎದುರಾಗಿದೆ.
ಗೋಳು ಕೇಳೋರಿಲ್ಲ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕುಡಿಯುವ ನೀರಿನ ಬವಣೆ ನೀಗಿಲ್ಲ. 8-10 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ವಿಷಯವನ್ನೇ ರಾಜಕೀಯ ವಿರೋಧಿಗಳು ಕುಮಾರಸ್ವಾಮಿ ವಿರುದ್ಧದ ಟೀಕಾಸ್ತ್ರವಾಗಿ ಬಳಸುತ್ತಿದ್ದಾರೆ. ಸಮಸ್ಯೆ ಸುಳಿಗೆ ಸಿಲುಕಿದರೂ ಜನರು ಬೀದಿಗಿಳಿದಿಲ್ಲ.
ಬೇಸಿಗೆ ಬೇಗೆಯ ನಡುವೆ ಗ್ರಾಮೀಣ ಭಾಗದಲ್ಲೂ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಜಡ್ಡುಗಟ್ಟಿರುವ ಜಿಲ್ಲಾಡಳಿತ, ವಿವಿಧ ಇಲಾಖೆಗಳಲ್ಲಿ ಕಡತ ವಿಲೇವಾರಿ ಆಗದೆ ಜನತೆ ಪರಿತಪಿಸುತ್ತಿದ್ದಾರೆ. ಅವರ ಕೂಗಿಗೆ ಸ್ಪಂದನೆ ಇಲ್ಲದಂತಾಗಿದೆ.
ಲಗ್ಗೆಯಿಡಲು ಯತ್ನ: ಡಿಕೆಎಸ್ ಸಹೋದರರು ರಾಮನಗರ ಜಿಲ್ಲೆಯಲ್ಲಿ ಪಾರುಪತ್ಯ ಸ್ಥಾಪಿಸಿಕೊಳ್ಳಲು ಹೊರಟಿದ್ದಾರೆ. ಅವರ ಚಿತ್ತ ಇದೀಗ ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ರಾಮನಗರದತ್ತ ನೆಟ್ಟಿದೆ. ಈ ಕ್ಷೇತ್ರದ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಮೂಗು ತೂರಿಸಿಕೊಂಡೇ ಬರುತ್ತಿದ್ದಾರೆ.
ಇಲ್ಲಿವರೆಗೆ ಕನಕಪುರಕ್ಕೆ ಸೀಮಿತವಾಗಿದ್ದ ಡಿಕೆಎಸ್ ಸಹೋದರರ ಭಾವಚಿತ್ರ ಸಹಿತ ಫಲಕಗಳು ರಾಮನಗರ ಸಹಿತ ಇತರೆಡೆಯ ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೂ ರಾರಾಜಿಸುತ್ತಿವೆ. ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲೂ ಡಿಕೆಎಸ್ ಟ್ರಸ್ಟ್ ಪಾತ್ರ ವಹಿಸುತ್ತಿದೆ.
ಕ್ಷೇತ್ರದಲ್ಲಿ ತಮಗೆ ಯಾರೂ ಸಾಟಿ ಇಲ್ಲವೆಂದೇ ಕುಮಾರಸ್ವಾಮಿ ಭಾವಿಸಿದಂತಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ತಮ್ಮ ರಾಜಕೀಯ ಜನ್ಮಭೂಮಿ, ಕರ್ಮಭೂಮಿ ರಾಮನಗರವೂ ಕಠಿಣವಾಗದಿರದು. ಈಗಲಾದರೂ ಕುಮಾರಸ್ವಾಮಿ ಆಮೆ, ಮೊಲದ ಓಟ ಸ್ಪರ್ಧೆ ನೆನಪಿಸಿಕೊಳ್ಳಬೇಕಿದೆ.

ಚನ್ನಪಟ್ಟಣವನ್ನೂ ಮರೆತರು
ಚನ್ನಪಟ್ಟಣದಲ್ಲಿ ಕಳೆದ ಬಾರಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಿದರೂ ಗೆಲವು ದಕ್ಕಲಿಲ್ಲ. ಅಲ್ಲಿನ ಕಾರ್ಯಕರ್ತರನ್ನು ಹುರಿದುಂಬಿಸುವ ಭರಾಟೆಯಲ್ಲಿ ರಾಮನಗರದೊಟ್ಟಿಗೆ ಚನ್ನಪಟ್ಟಣಕ್ಕೂ ಸೋಮವಾರದ ಭೇಟಿ ವಿಸ್ತರಣೆ ಭರವಸೆಯನ್ನು ಕುಮಾರಸ್ವಾಮಿ ನೀಡಿದ್ದರು. ರಾಮನಗರದ ಜತೆಗೆ ಚನ್ನಪಟ್ಟಣದಲ್ಲಿ ಸೋಮವಾರದ ಭೇಟಿ ನಡೆದಿದ್ದು ಒಮ್ಮೆಯಷ್ಟೇ. ಮತ್ತೆ ಅತ್ತ ಸುಳಿಯಲಿಲ್ಲ. ಜೆಡಿಎಸ್ ಬಹುಮತ ಸಾಧಿಸಿದ್ದರೂ ಅಲ್ಲಿನ ನಗರಸಭೆ ಚುಕ್ಕಾಣಿ ಹಿಡಿಯುವ ಗೋಜಿಗೆ ಹೋಗಲಿಲ್ಲ. ಕಡೇಪಕ್ಷ ಪುರಪಿತೃಗಳ ಒಂದು ಸಭೆ ನಡೆಸಲೂ ಸಾಧ್ಯವಾಗಿಲ್ಲ.

ಫಲಿಸದ ಪ್ರಯತ್ನ  
ಚನ್ನಪಟ್ಟಣ ಮೂಲದ ಪುಟ್ಟಣ್ಣ ಮೇಲ್ಮನೆ ಸದಸ್ಯರಾಗಿದ್ದಾರೆ. ರಾಮನಗರದಲ್ಲಿ ತಮ್ಮ ಅನುಪಸ್ಥಿತಿ ಕಾಡದಿರಲೆಂದು ವ್ಯಾಪಾರಿ ವೃತ್ತಿಯ ಅಪ್ಸರ್ ಆಗಾ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿದ ಕುಮಾರಸ್ವಾಮಿ ಅವರ ಪ್ರಯತ್ನವೂ ಫಲ ನೀಡದಾಗಿದೆ. ದೇವೇಗೌಡ, ಕುಮಾರಸ್ವಾಮಿ ಭೇಟಿ ವೇಳೆಯಲ್ಲಷ್ಟೇ ಪ್ರತ್ಯಕ್ಷರಾಗುವ ಅಪ್ಸರ್ ಆಗಾ ಜನರ ಮಧ್ಯೆ ಇರುವ ಗೋಜಿಗೆ ಹೋಗಿಲ್ಲ. ಆಗೊಂದು ಹೀಗೊಂದು ಬಾರಿ ಅಧಿಕಾರಿಗಳಿಗೆ ಫೋನಾಯಿಸಿದ್ದನ್ನು ಬಿಟ್ಟರೆ ಜನರ ಸಮಸ್ಯೆಗಳ ಪರಿಹಾರಕ್ಕೆ ಖುದ್ದು ಕಾಳಜಿ ವಹಿಸಿದ ನಿದರ್ಶನವಿಲ್ಲ.

ಚಾಡಿಕೋರರಿಗೆ ಕಿವಿ
ಜೆಡಿಎಸ್ ಪಡಸಾಲೆಯಲ್ಲಿ ಚಾಡಿಕೋರರದ್ದೇ ಕಾರುಬಾರು. ಅವರಿವರ ಮೇಲೆ ಚಾಡಿ ಹೇಳಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವವರು, ಪಕ್ಷದ್ರೋಹಿಗಳನ್ನು ದೂರವಿಡದೆ ಜೆಡಿಎಸ್ ಬಲವರ್ಧನೆಗೆ ಹೊರಟರೆ ಹೊಳೆಯಲ್ಲಿ ಹುಣಸೆ ಹಣ್ಣು ತೊಯ್ದಂತಾಗುತ್ತದಷ್ಟೇ. ಇನ್ನೇನು ಜಿ.ಪಂ., ತಾ.ಪಂ.ಗಳ ವರಿಷ್ಠರ ಸ್ಥಾನಗಳಿಗೆ ಚುನಾವಣೆ ಸಮೀಪಿಸುತ್ತಿದೆ. ಆಪರೇಷನ್ ಹಸ್ತ ಕಾರ್ಯಾಚರಣೆಗೆ ಈಗಾಗಲೇ ಕಾಂಗ್ರೆಸ್ ಇಳಿದಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪಕ್ಷಕ್ಕೆ ಆಸರೆಯಾಗುವ ಬದಲು ಕುಮಾರಸ್ವಾಮಿ ತಟಸ್ಥರಾಗುವುದು ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement