ನಗರ ಪೊಲೀಸ್ ಆಯುಕ್ತ ಔರಾದ್ಕರ್ ವಿಚಾರಣೆ
ಬೆಂಗಳೂರು: ಕೆಎಸ್‌ಆರ್‌ಪಿ ಎಡಿಜಿಪಿ ಡಾ.ಪಿ.ರವೀಂದ್ರನಾಥ್ ಅವರು ಕಾಫಿ ಶಾಪ್‌ನಲ್ಲಿ ಯುವತಿಯ ಆಕ್ಷೇಪಾರ್ಹ ಫೋಟೋ ಕ್ಲಿಕ್ಕಿಸಿದ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಭಾನುವಾರ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.
ತಮ್ಮ ವಿರುದ್ಧ ದುರುದ್ದೇಶದಿಂದ ಔರಾದ್ಕರ್ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣ ಸಂಬಂಧ ದೂರು ನೀಡಿರುವ ಯುವತಿಯ ಹೇಳಿಕೆಯನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಪಡೆದಿದ್ದಾರೆ.
ಡಾ.ರವೀಂದ್ರನಾಥ ಗೈರು: ಪ್ರಕರಣದ ಆರೋಪಿಯಾಗಿರುವ ರವೀಂದ್ರನಾಥ್ ಭಾನುವಾರ ಮಧ್ಯಾಹ್ನ 2 ಗಂಟೆಗೆ ಸಿಐಡಿ ಕಚೇರಿಗೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸುವಂತೆ ಸಿಐಡಿ ಅಧಿಕಾರಿಗಳು ಭಾನುವಾರ ಬೆಳಗ್ಗೆ ರವೀಂದ್ರನಾಥ್ ಅವರ ಎಚ್‌ಎಸ್‌ಆರ್ ಬಡಾವಣೆ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದರು. ಕಳೆದ ಒಂದು ವಾರದ ಬೆಳವಣಿಗೆಗಳಿಂದ ಬಳಲಿದ್ದು ವಿಶ್ರಾಂತಿ ಪಡೆದು ಸೋಮವಾರ ಹಾಜರಾಗುವುದಾಗಿ ರವೀಂದ್ರನಾಥ್ ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ ಅವರೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ಕಳೆದ ಸೋಮವಾರ ಕನ್ನಿಂಗ್‌ಹ್ಯಾಮ್ ರಸ್ತೆಯ ಓ ಬೋ ಪೆ ಕಾಫಿ ಶಾಪ್‌ನಲ್ಲಿ ಎಡಿಜಿಪಿ ರವೀಂದ್ರನಾಥ್ ಅವರು ತಮ್ಮ ಆಕ್ಷೇಪಾರ್ಹ ಫೋಟೋ ತೆಗೆದಿದ್ದಾರೆ ಎಂದು ಆರೋಪಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಐಪಿಎಸ್ ಅಧಿಕಾರಿಯೆಂದು ಹೇಳಿದರೂ ತಮ್ಮೊಂದಿಗೆ ಹೈಗ್ರೌಂಡ್ಸ್ ಎಸ್ಸೈ ರವಿ ಕೆಟ್ಟದಾಗಿ ನಡೆಸಿಕೊಂಡು ಲಾಕಪ್‌ಗೆ ಹಾಕಿದ್ದಾರೆ. ಅದಕ್ಕೆ ಕಾರಣ ಪೊಲೀಸ್ ಆಯುಕ್ತ ಔರಾದ್ಕರ್ ಕುಮ್ಮಕ್ಕು ಎಂದು ರವೀಂದ್ರನಾಥ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು.