ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಶಿವನಂಜಪ್ಪ ವಿರುದ್ಧ 2 ಪ್ರಕರಣ ದಾಖಲು
ರಾಮನಗರ: ಅಕ್ರಮ ಕಲ್ಲುಗಣಿಗಾರಿಕೆಗೆ ನಿರಾಕ್ಷೇಪಣ ಪತ್ರ ನೀಡಿರುವುದೂ ಸೇರಿದಂತೆ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಕನಕಪುರ ಉಪ ವಿಭಾಗದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಶಿವನಂಜಪ್ಪ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ.
ಕನಕಪುರ ವಲಯ ಅರಣ್ಯಾಧಿಕಾರಿ ಜಗನ್ನಾಥ್ ಹಾಗೂ ಸಾತನೂರು ವಲಯ ಅರಣ್ಯಾಧಿಕಾರಿ ಕೆ.ವಿ.ಪದ್ಮನಾಭ ಅವರು ಶಿವನಂಜಪ್ಪ ವಿರುದ್ಧ ಸರ್ಕಾರಕ್ಕೆ ರು.42ಲಕ್ಷಕ್ಕೂ ಹೆಚ್ಚು ನಷ್ಟು ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಕನಕಪುರ ಗ್ರಾಮಾಂತರ ಹಾಗೂ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಎನ್.ಶಿವನಂಜಪ್ಪ 1ನೇ ಜುಲೈ 1998 ರಿಂದ 6ನೇ ಜೂನ್ 2003ರವರೆಗೆ ಕನಕಪುರ ಉಪ ವಿಭಾಗದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಅವರು ಆರ್ಥಿಕ ಲಾಭಕ್ಕಾಗಿ ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸರ್ಕಾರಕ್ಕೆ ಪರಿಹಾರಾತ್ಮಕವಾಗಿ ನೆಡುತೋಪು ಬೆಳೆಸಲು ಸಂದಾಯವಾಗಬೇಕಿದ್ದ ಹಣ ಹಾಗೂ ಎನ್.ಪಿ.ವಿ. ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಹೊರಿಸಲಾಗಿದೆ. ಈ ವಿಚಾರವಾಗಿ ಶಿವನಂಜಪ್ಪ ಅವರಿಗೆ ನೋಟಿಸ್ ಜಾರಿಗೊಳಿಸಿದ್ದು, ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವಂತೆ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ ಸೂಚನೆ ಮೇರೆಗೆ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1998ರಡಿ ದೂರು ದಾಖಲಿಸಲಾಗಿದೆ.