'ಪೊಲೀಸ್ ಅಧಿಕಾರಿ ಪ್ರಕರಣ ತನಿಖೆ ಅಗತ್ಯ'
ದೊಡ್ಡಬಳ್ಳಾಪುರ: ಪೊಲೀಸ್ ಅಧಿಕಾರಿ ರವೀಂದ್ರನಾಥ್ ಪ್ರಕರಣದಲ್ಲಿ ಗಂಭೀರ ಸ್ವರೂಪದ ತನಿಖೆ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ, ಸಂಸದ ಎಂ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಸಾಮಾಜಿಕ ಸೇವಾ ಮತ್ತು ಭದ್ರತಾ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳು ಅಗತ್ಯವಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಎಲ್ಲ ವಲಯಗಳ ಸಹಕಾರ ಅಗತ್ಯವಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮತದಾರರಿಗೆ ಕೃತಜ್ಞತೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸತತ 2ನೇ ಬಾರಿಗೆ ಚುನಾಯಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಕಾಂಗ್ರೆಸ್ ಅಭಿವೃದ್ಧಿ ಸಿದ್ಧಾಂತವನ್ನು ಕ್ಷೇತ್ರದ ಜನ ಪುರಸ್ಕರಿಸಿದ್ದಾರೆ. ಅಪಪ್ರಚಾರಗಳಿಗೆ ಗಮನ ಕೊಡದೆ ನೈಜ ಅಭಿವೃದ್ಧಿ ಮತ್ತು ಪ್ರಗತಿಪರ ಚಿಂತನೆಗೆ ಒತ್ತು ನೀಡಿದ್ದಾರೆ ಎಂದಿದ್ದಾರೆ.
ಎತ್ತಿನಹೊಳೆ ಶೀಘ್ರ: ಬಯಲುಸೀಮೆ ಜಿಲ್ಲೆಗಳಿಗೆ ನೀರಾವರಿ ಒದಗಿಸುವ ಸಮಗ್ರ ಯೋಜನೆಯಾಗಿರುವ ಎತ್ತಿನಹೊಳೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮಹತ್ವದ ಹಂತದಲ್ಲಿದ್ದು, ಕಾಮಗಾರಿ ಕೂಡ ಆದಷ್ಟು ಬೇಗ ಆರಂಭವಾಗಲಿದೆ. ಕೇವಲ ಭರವಸೆಯಲ್ಲಿ ಉಳಿಸದೆ, ಯೋಜನೆಯನ್ನು ಶಾಶ್ವತವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಆಯಕಟ್ಟಿನ ಹಂತಗಳಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಸೇರಿದಂತೆ ಬಯಲುಸೀಮೆಯ 8 ಜಿಲ್ಲೆಗಳಿಗೆ ಸಮಗ್ರ ನೀರಾವರಿ ಒದಗಿಸುವ ಈ ಯೋಜನೆ ಯಾವುದೇ ಅಡ್ಡಿ ಆತಂಕಗಳು ಎದುರಾದರೂ ಅನುಷ್ಠಾನ ಶತಸಿದ್ಧ ಎಂದು ತಿಳಿಸಿದ್ದಾರೆ.
ಬಲ ಕುಂದಿಲ್ಲ: ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿರಬಹುದು. ಆದರೆ ಮತಗಳಿಕೆ ಪ್ರಮಾಣದಲ್ಲಿ ಮುಂದಿದೆ. ಪಕ್ಷದ ಕೆಲ ಆಂತರಿಕ ವಿಚಾರಗಳೂ ಸೋಲಿಗೆ ಕಾರಣವಾಗಿರಬಹುದು. ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿ ಸುಧಾರಿತ ಪ್ರದರ್ಶನನೀಡಿದೆ ಎಂದಿದ್ದಾರೆ ಮೊಯ್ಲಿ.