ಭೂಚೇತನ ಯೋಜನೆ ಸಮರ್ಪಕವಾಗಿ ಬಳಸಿಕೊಳ್ಳಿ
ಮಾಗಡಿ: ಖುಷ್ಕಿಯಲ್ಲಿ ಅಧಿಕ ಇಳುವರಿ ಪಡೆಯಲು ಭೂಚೇತನ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಚ್. ಕೃಷ್ಣಮೂರ್ತಿ ರೈತರಿಗೆ ಕರೆ ನೀಡಿದರು.
ಅವರು ಮಾಗಡಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಭೂಚೇತನ ಯೋಜನೆಯ ಪ್ರಚಾರ ಸಪ್ತಾಹ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಾದ್ಯಂತ ಮುಂಗಾರು ಮಳೆಯಾಗುತ್ತಿದ್ದು, ರೈತರು ಕೃಷಿ ಬೇಸಾಯದ ಚಟುವಟಿಕೆಯಲ್ಲಿದ್ದಾರೆ. ಮಾಗಡಿ ಮಳೆಯಾಶ್ರಿತ ಪ್ರದೇಶವಾಗಿದ್ದು, ರೈತರು ಖುಷ್ಕಿ ಬೇಸಾಯದಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಶೇ.20 ರಷ್ಟು ಬೆಳೆ ಉತ್ಪಾದಕತೆ ವರ್ಧಿಸುವ ಭೂಚೇತನ ಯೋಜನೆಯಡಿ ಬೇಸಾಯ ಪದ್ಧತಿ ಇರಲಿ. ಇದರಿಂದ ರೈತರು ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬಹುದು. ಭೂಚೇತನ ಎಂಬ ವಿಶಿಷ್ಟ ಯೋಜನೆ ಇದಾಗಿದ್ದು, ಈಗಾಗಲೇ ಮೊದಲ ಹಂತದ ಕಾರ್ಯಕ್ರಮದಲ್ಲಿ ಶೇ.20 ರಷ್ಟು ಫಲಿತಾಂಶ ಲಭಿಸಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಚ್.ಸಿ. ಕೃಷ್ಣಪ್ಪ ಮಾತನಾಡಿ ಸರ್ಕಾರದ ಮಹತ್ವಾಕಾಂಕ್ಷೆಯ ಭೂಚೇತನ ಯೋಜನೆ ರೈತರಿಗೆ ವರದಾನವಾಗಿದೆ. ಸಸ್ಯ ಪೋಷಕಾಂಶಗಳ ಕೊರತೆ ಲಕ್ಷಣಗಳನ್ನು ನೋಡಿ ರೈತರ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣಿನ ಫಲವತ್ತತೆಯ ಆಧಾರದ ಮೇಲೆ ಲಘು ಪೋಷಕಾಂಶವನ್ನು ಶಿಪಾರಸು ಮಾಡಲಾಗುತ್ತಿದೆ. ಅಗತ್ಯ ಸಾವಯುವ ಗೊಬ್ಬರ ಬಳಕೆ ಮಾಡುವುದು ಅಗತ್ಯ, ಖುಷ್ಕಿಯಲ್ಲಿ ಅಧಿಕ ಇಳುವರಿಗಾಗಿ ರೈತರಲ್ಲಿ ಅರಿವು ಮೂಡಿಸಲು ಈಗಾಗಲೇ ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭೂಚೇತನ ಕುರಿತು ಗೋಡೆ ಬರಹ ಬರೆಸಲಾಗಿದೆ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅನುವುಗಾರರನ್ನು ನೇಮಕ ಮಾಡಿದ್ದು, ಈ ಮೂಲಕ ತರಬೇತಿ ನೀಡಲಾಗುತ್ತಿದೆ. ಗುಚ್ಚ ಗ್ರಾಮ ಮಟ್ಟದಲ್ಲಿ ಕೃಷಿ ಪರಿಕರಗಳನ್ನು ದಾಸ್ತಾನು ಮತ್ತು ರಿಯಾಯಿತಿ ದರದಲ್ಲಿ ವಿತರಣೆಗೆ ಅಗತ್ಯ ಕ್ರಮ ವಹಿಸಲಾಗಿದೆ. ಪರ್ಯಾಯ ಬೆಳೆಗಳ ಬಿತ್ತನೆಗೂ ತಳಿಗಳ ಮಾಹಿತಿ, ಬೀಜ ಒದಗಿಸುತ್ತಿದ್ದೇವೆ. ಪಶು ಮೇವು ಅಭಿವೃದ್ಧಿಗೆ ಉತ್ತೇಜನ ಮತ್ತು ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಕೃಷಿ ಅಧಿಕಾರಿಗಳಾದ ಹರಿಶಂಕರ್, ರೂಪಶ್ರೀ, ಎಂ.ಆರ್. ಕೃಷ್ಣಮೂರ್ತಿ, ಕೆಂಪೇಗೌಡ, ದೀಪಕ್, ವೆಂಕಟಪ್ಪ, ಪ್ರಸನ್ನಕುಮಾರ್, ಮಂಜುನಾಥ್, ಪರಮಶಿವಯ್ಯ, ಗೋವಿಂದಪ್ಪ ಇತರರು ಇದ್ದರು.