ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಕ್ರಮ ಮನೆ ಕೆಡವಿದ ಅಧಿಕಾರಿಗಳು

Srinivasa Murthy VN
Updated On : 3 Jun 2014, 12:11 pm

ನೆಲಮಂಗಲ: ತಾಲೂಕಿನ ಸೋಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಡೇಹಳ್ಳಿ ಗ್ರಾಮದ ಸರ್ವೆ ನಂ 61 ಮತ್ತು 66 ರಲ್ಲಿ ಸುಮಾರು 36 ಎಕರೆ ಸರ್ಕಾರಿ ಗೋಮಾಳದ ಜಮೀನಿದ್ದು ಈ ಜಮೀನಿನಲ್ಲಿ ಈಗಾಗಲೇ ಕೆಲವರು ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದು ಉಳಿಕೆ ಜಾಗದಲ್ಲಿ ಈಗ ಇನ್ನೂ ಕೆಲವರು ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ. ಈ ಮನೆಗಳನ್ನು ತಹಸೀಲ್ದಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕೆಡವಿ ಹಾಕಿದ್ದಾರೆ.
ಒಂದು ಎಕರೆಯಲ್ಲಿನ ನಿವೇಶನದಲ್ಲಿ ಈಗಾಗಲೇ ಆಶ್ರಯ ಯೋಜನೆಯಡಿ ನಿವೇಶನವನ್ನು ಕಾನೂನು ರೀತಿ ನೀಡಲಾಗಿದೆ ಇದನ್ನು ಹೊರತುಪಡಿಸಿ ಇಲ್ಲಿ ಬೇರೆ ಯಾರಿಗೂ ನಿವೇಶನ ನೀಡಿಲ್ಲ.  ಆದರೂ ಸರ್ಕಾರದ ಖಾಲಿ ಜಾಗವಾದ 35 ಎಕರೆ ಜಮೀನಿನಲ್ಲಿ ಇನ್ನುಳಿದಿರುವುದು ಕೇವಲ ಹತ್ತು ಎಕರೆ ಜಮೀನು ಮಾತ್ರ. ಇನ್ನು  ಇಪ್ಪತ್ತೈದು ಎಕರೆಯಷ್ಟು ಜಮೀನು ಖಾಸಗಿ ಕಂಪನಿಗಳ ಪಾಲಾಗಿದೆ. ಇದನ್ನು ಕೇಳುವವರಿಲ್ಲ. ಆದರೆ
ಮನೆಯಿಲ್ಲದೆ ಬಯಲಿನಲ್ಲಿರುವ ಬಡವರಾದ ನಾವು ಮನೆ ಕಟ್ಟಿಕೊಳ್ಳಲು ಬಿಡದೇ ಹಾಳು ಮಾಡಿ ಬಿಟ್ಟರು ಎಂದು ಗೋಳಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು.
 ಮೇಲಾಧಿಕಾರಿಗಳು ಖಾಸಗಿ ಕಂಪನಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಮುಂದಾಗದೇ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿರುವುದನ್ನು ಇಲ್ಲಿನ ಯಾವ ಜನಪ್ರತಿನಿಧಿಗಳು ಕೇಳುತ್ತಿಲ್ಲ. ಆದರೆ ಕೈಗಾರಿಕೆಗಳಿಗೆ ಕನಿಷ್ಠ ಒಂದು ಎಚ್ಚರಿಕೆಯ ನೋಟಿಸ್ ಸಹ ನೀಡುತ್ತಿಲ್ಲ ಕಾರಣ ತಿಳಿಯದಾಗಿದೆ ಎಂದು ವೆಂಕಟಶಾಮಯ್ಯ ಆರೋಪಿಸಿದ್ದಾರೆ.
ವಿಪರ್ಯಾಸವೆಂದರೆ ಇಂದು ತಹಸೀಲ್ದಾರ್ ಮತ್ತು ಇತರೆ ಅಧಿಕಾರಿಗಳು ಕೆಡವಿದ ಅಕ್ರಮ ಮನೆಗಳ ಬಗ್ಗೆ ಇಂದೇ ನಾಡ ಕಚೇರಿಯಲ್ಲಿ ಅಕ್ರಮ ಮನೆಗಳನ್ನು ಸಕ್ರಮಗೊಳಿಸಲು ಅರ್ಜಿ ಪಡೆಯುತ್ತಿರುವುದು ಆಶ್ಚರ್ಯ ತಂದಿದೆ. ಈ ರೀತಿಯ ಇಬ್ಬಂದಿಯ ನೀತಿಯನ್ನು ತಹಸೀಲ್ದಾರ್ ಅನುಸರಿಸುತ್ತಿರುವುದು ಕೆಲವು ಅನುಮಾನಗಳಿಗೆ ಕಾರಣವಾಗಿದೆ ಎಂಬುದು ಇಲ್ಲಿಯ ಜನರ ವಾದವಾಗಿದೆ.

ಗಳಲೆ ಬೇನೆ ರೋಗಕ್ಕೆ ಉಚಿತವಾಗಿ ಲಸಿಕೆ
ಮಾಗಡಿ: ಪಶು ಇಲಾಖೆ ಮತ್ತು ಕೆಎಂಎಫ್ ಜಂಟಿಯಾಗಿ ತಾಲೂಕಿನಾದ್ಯಂತ ಗಳಲೆ ಬೇನೆ ರೋಗಕ್ಕೆ ಉಚಿತವಾಗಿ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕಿನಲ್ಲಿ ಸುಮಾರು 77 ಸಾವಿರ ರಾಸುಗಳಿದ್ದು, ಗಳಲೆ ಬೇನೆ ರೋಗ ಕಾಣಿಸಿಕೊಳ್ಳುವ ಸಂಭವವಿದ್ದು, ಈ ರೋಗಕ್ಕೆ ರಾಸುಗಳು ಸಾವನ್ನಪ್ಪುವ ಸಂಭವವಿದೆ. ಪಶು ಇಲಾಖೆ ಮತ್ತು ಕೆಎಂಎಫ್ ಜಂಟಿಯಾಗಿ  ಈಗಾಗಲೇ ಲಸಿಕೆ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. ತಾಲೂಕಿನಲ್ಲಿ  ಕನಿಷ್ಠ 70 ಸಾವಿರ ರಾಸುಗಳಿಗೆ ಲಸಿಕೆ ಹಾಕುವ ಮೂಲಕ ಶೇ.90 ರಷ್ಟು ಗುರಿ ಸಾಧಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು. ತಾಲೂಕಿನಾದ್ಯಂತ ಇರುವ ರೈತರು ತಮ್ಮ ಹಸು, ಎಮ್ಮೆಗಳಿಗೆ ತಪ್ಪದೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement