ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ರಾಮನಗರ: ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2014-15ನೇ ಸಾಲಿಗೆ ಹಿಂದುಳಿದ ವರ್ಗಗಳ ಆರ್ಥಿಕಾಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಪ್ಲಾನ್ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ, ಕಿರುಸಾಲ ಯೋಜನೆ, ಸಾಂಪ್ರದಾಯಿಕ ವೃತ್ತಿದಾರರು ಮತ್ತು ಕುಶಲಕರ್ಮಿಗಳ ಸಾಲ ಯೋಜನೆ, ಕುಂಬಾರಿಕೆ ಅಭಿವೃದ್ಧಿ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ನ್ಯೂ ಸ್ವರ್ಣಿಮ ಮತ್ತು ವಿವಿಧ ಅವಧಿ ಸಾಲ ಯೋಜನೆಗಳಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಹ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಅರ್ಜಿದಾರರು ಹಿಂದುಳಿದ ವರ್ಗದ ಪ್ರವರ್ಗ-1, 2ಎ, 3ಎ, ಮತ್ತು 3ಬಿಗೆ ಸೇರಿರಬೇಕು. ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣರಿಗೆ ರು.40 ಸಾವಿರ ಹಾಗೂ ನಗರ ವಾಸಿಗಳಿಗೆ ರು.55 ಸಾವಿರ ಮೀರಬಾರದು. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಲ್ಲಿ ಗ್ರಾಮೀಣ ಪ್ರದೇಶದವರಿಗೆ ರು.81 ಸಾವಿರ ಹಾಗೂ ನಗರ ಪ್ರದೇಶದವರಿಗೆ ರು.1.03 ಲಕ್ಷಕ್ಕಿಂತ ಕಡಿಮೆ ಇರಬೇಕು. 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಈ ಹಿಂದೆ ನಿಗಮದ ಯಾವುದೇ ಯೋಜನೆಗಳ ಸೌಲಭ್ಯ ಪಡೆದಿರಬಾರದು.ಅರ್ಜಿಯನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜು.19ರೊಳಗೆ ಸಲ್ಲಿಸಬಹುದು ಎಂದು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಕಚೇರಿ ಅಥವಾ ದೂ.080-27275114 ಸಂಪರ್ಕಿಸಬಹುದು.
ಅನಧಿಕೃತ ಅಂಗಡಿಗಳ ತೆರವು: ಮುಖ್ಯಾಧಿಕಾರಿ
ದೇವನಹಳ್ಳಿ: ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಸ್ಥಪಿಸಲಾಗಿರುವ ಎಲ್ಲ ಪೆಟ್ಟಿ ಅಂಗಡಿಗಳು, ತೆಂಗಿನ ಗರಿಗಳನ್ನು ಹಾಕಿ ನಿರ್ಮಿಸಿರುವ ಎಲ್ಲ ಅಂಗಡಿಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಮುಖ್ಯಾಧಿಕಾರಿ ಎಂ.ಆರ್.ಮಂಜುನಾಥ್ ತಿಳಿಸಿದರು. ದೇವನಹಳ್ಳಿಯ ಕೆಲವು ನಾಗರಿಕರು ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರಲ್ಲದೆ ಸುಮಾರು 200 ಕ್ಕೂ ಹೆಚ್ಚು ಅಂಗಡಿಗಳನ್ನು ತೆರವು ಗೊಳಿಸಲಾಗಿದ್ದು ಆ ವ್ಯಾಪಾರಿಗಳ ಜೀವನಕ್ಕೆ ಸದ್ಯಕ್ಕೆ ತೊಂದರೆಯಾಗಿರುವುದು ಸತ್ಯವಾದರೂ ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಅವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿ ಎಂದರು. ಕೆಲವೇ ಮಂದಿ ನೀಡಿದ ದೂರಿಗೆ ನೂರಾರು ಮಂದಿಯ ಅನ್ನಕ್ಕೆ ಕಲ್ಲು ಹಾಕಿದಂತಾಗಿದೆ. ನಮ್ಮ ಮುಂದಿನ ಗತಿ ಏನು, ವಿಷ ತೆಗೆದುಕೊಂಡು ಸಾಯಬೇಕಾ ಎಂದು ಅಧಿಕಾರಿಗಳನ್ನು ಸಣ್ಣ ಪುಟ್ಟ ವ್ಯಾಪಾರಿಗಳು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಇರುವ ತರಕಾರಿಗಳನ್ನು ಮಾರಿಕೊಳ್ಳಲೂ ಅಧಿಕಾರಿಗಳು ಅವಕಾಶ ಕೊಡದೇ ಇರುವುದಕ್ಕೆ ಮಹಿಳಾ ವ್ಯಾಪಾರಿಗಳು ಹಿಡಿ ಶಾಪ ಹಾಕುತ್ತಿರುವುದು ಅವರ ಗಮನಕ್ಕೆ ತರಲಾಯಿತು.
ಕುರಿ ಸಾವು: ಪರಿಹಾರ ಘೋಷಣೆ
ರಾಮನಗರ: ಆಕಸ್ಮಿಕವಾಗಿ ಸಾವನ್ನಪ್ಪಿದ ಪ್ರತಿ ಕುರಿಗೆ ಸರ್ಕಾರವು ರು.5 ಸಾವಿರ ಪರಿಹಾರ ಧನ ಘೋಷಿಸಿದೆ. ಕುರಿಗಾರರು ಪರಿಹಾರ ಧನ ಪಡೆಯಲು ಸತ್ತ ಕುರಿ ಫೋಟೋ, ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆಯ ದೃಢೀಕರಣ ಪತ್ರ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು, ತಹಸೀಲ್ದಾರ್ ಹಾಗೂ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಯಿಂದ ಶಿಫಾರಸು ಪತ್ರದೊಂದಿದೆ ಅರ್ಜಿಯನ್ನು ಕುರಿ ಮತ್ತು ಕುರಿ ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಸಲ್ಲಿಸಿದ್ದಲ್ಲಿ ಪರಿಹಾರ ಧನ ಲಭಿಸಲಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ದೇವರಾಜು ತಿಳಿಸಿದ್ದಾರೆ.
ಯಶಸ್ವಿನಿ ಯೋಜನೆಗೆ ಅರ್ಜಿ
ರಾಮನಗರ: ರೈತರ ಆರೋಗ್ಯ ರಕ್ಷಣೆಗಾಗಿ ರೂಪಿಸಲ್ಪಟ್ಟಿರುವ ಯೋಜನೆ ಯಶಸ್ವಿನಿ ಅಡಿಯಲ್ಲಿ 2014-15ನೇ ಸಾಲಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿವಿಧ ಸಹಕಾರ ಸಂಘದ ಸದಸ್ಯರನ್ನು ಬದಲಾಯಿಸುವ ಹಾಗೂ ನವೀಕರಿಸುವ ಕಾರ್ಯವು ಮಾ.15 ರಿಂದ ಪ್ರಾರಂಭವಾಗಿದೆ. ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳಲ್ಲಿನ ಅರ್ಹ ಸದಸ್ಯರು ರು.250 ಸಂಘಕ್ಕೆ ಪಾವತಿಸಿ ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಸಹಕಾರ ಸಂಘಗಳ ಜಿಲ್ಲಾ ಉಪ ನಿಬಂಧಕ ಕೆ.ಎನ್.ನಂಜುಂಡೇಗೌಡ ಕೋರಿದ್ದಾರೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅರ್ಹ ಸದಸ್ಯರು ರು.50 ಪಾವತಿಸಿ ಯಶಸ್ವಿನಿ ವಿಮಾ ಯೋಜನೆಯಲ್ಲಿ ನೋಂದಾಯಿಸಿಕೊಂಡು ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಸಹಕಾರ ಸಂಘ ಅಥವಾ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ ಅಥವಾ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ದೂ.080-27271256 ಅಥವಾ ಸಹಕಾರ ಸಂಘಗಳ ಉಪ ನಿಬಂಧಕ ಕಚೇರಿ ದೂ.080-27274008 ಸಂಪರ್ಕಿಸಲು ಕೋರಿದೆ.
ಮಾಗಡಿ ಸುತ್ತಮುತ್ತ ಮಳೆ
ಮಾಗಡಿ: ಮಾಗಡಿ ಸುತ್ತಮುತ್ತ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಸೋಮವಾರ ರಾತ್ರಿಯೂ ತಾಲೂಕಿನಲ್ಲಿ ರೋಹಿಣಿ ಮಳೆಯಾಗಿದ್ದು, ರೈತರಲ್ಲಿ ಸಂತಸ ಮೂಡಿದೆ.
'ಪಿಎಸೈ ಧೋರಣೆ ತನಿಖೆಗೆ ಚಿಂತನೆ'
ದೊಡ್ಡಬಳ್ಳಾಪುರ: ನಾಯಕರಂಡಹಳ್ಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸೈ ಶಬರೀಶ್ ಅವರ ಧೋರಣೆಯ ಕುರಿತು ತನಿಖೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ. ಒಂದು ವೇಳೆ ಅಧಿಕಾರಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರಮೇಶ್ ಬಾನೊಟ್ ತಿಳಿಸಿದರು. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ದೂರು ಬಂದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ, ಸೂಕ್ತ ತನಿಖೆಯೂ ಮಾಡದೆ ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಆರೋಪಿಗಳ ಪರ ಕೆಲಸ ಮಾಡಿದ್ದಾರೆ ಎಂಬ ಆರೋಪಗಳ ಹಿನ್ನಲೆಯಲ್ಲಿ ತನಿಖೆ ಅನಿವಾರ್ಯವಾಗಿದೆ ಎಂದು ಅವರು ವಿವರಿಸಿದರು.
ಲಯನ್ಸ್ 196ನೇ ಕಣ್ಣಿನ ಚಿಕಿತ್ಸಾ ಶಿಬಿರ
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೇತೃತ್ವದಲ್ಲಿ 196ನೇ ಕಣ್ಣಿನ ಉಚಿತ ಪರೀಕ್ಷೆ ಮತ್ತು ತಪಾಸಣೆ ಶಿಬಿರ ಲಯನ್ಸ್ ಭವನದಲ್ಲಿ ನಡೆಯಿತು. ರುದ್ರಪ್ಪ ಮತ್ತು ಕುಟುಂಬ ಹಾಗೂ ಪಿಳ್ಳಪ್ಪ ಮತ್ತು ಕುಟುಂಬ ಪ್ರಾಯೋಜಿಸಿದ್ದ ಶಿಬಿರವನ್ನು ಜಿಎಂಟಿ ಸಂಯೋಜಕ ಲಯನ್ ಎಚ್.ಕೆ.ಗಿರಿಧರ್ ಉದ್ಘಾಟಿಸಿದರು. ಅವರು ಮಾತನಾಡಿ, ಜಗತ್ತನ್ನು ನೋಡುವ ಮಹತ್ವದ ದೃಷ್ಟಿ ನೀಡುವ ಲಯನ್ಸ್ ಚಿಂತನೆ ಗಮನಾರ್ಹ. ಅದರಲ್ಲೂ 196 ತಿಂಗಳುಗಳ ಕಾಲ ಸತತವಾಗಿ ನಡೆದುಕೊಂಡು ಬಂದಿರುವ ಶಿಬಿರದ ಯಶಸ್ಸು ಹಾಗೂ ಕಣ್ಣಿನ ಚಿಕಿತ್ಸಾ ವಿಚಾರದಲ್ಲಿ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ನ ಸಾಧನೆ ಗಣನೀಯ ಎಂದರು.ಶಿಬಿರದಲ್ಲಿ ಒಟ್ಟು 72 ಮಂದಿ ರೋಗಿಗಳಿಗೆ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ ನಡೆಸಿ ಐಓಎಲ್ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಚಿತ್ರನಟ ಚಸ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲಯನ್ಸ್ ಅಧ್ಯಕ್ಷ ಆರ್.ವಿ.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಪಶ್ಚಿಮ ಲಯನ್ಸ್ ಕಣ್ಣಾಸ್ಪತ್ರೆ, ಅಕ್ಷಿಜೋಡಣಾ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಲಯನೆಸ್ ಕ್ಲಬ್ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶಿಬಿರ ನಡೆಯಿತು.
ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ನೇಣಿಗೆ ಶರಣು
ಚನ್ನಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಮಂಗಳವಾರ ಪೇಟೆಯಲ್ಲಿ ಸೋಮುವಾರ ಬೆಳಿಗ್ಗೆ ನಡೆದಿದೆ. ಇಲ್ಲಿನ ನಿವಾಸಿ ದಾಕ್ಷಾಯಿಣಿ (24) ಸಾವಿಗೆ ಶರಣಾಗಿರುವ ಮಹಿಳೆ. ಒಂದು ತಿಂಗಳ ಹಿಂದೆ ಈಕೆಯ ಪತಿ ರಾಜೇಂದ್ರ ಸಹ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದರು. ಇದರಿಂದ ಸಾಕಷ್ಟು ಮನ ನೊಂದಿದ್ದ ಈಕೆ ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿ ಕೊಂಡು ಸಾವಿಗೀಡಾಗಿದ್ದು ಈಸಂಬಂಧ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವರ ಪತ್ನಿಯ ಸರ ಕಳವು
ಚನ್ನಪಟ್ಟಣ: ಮಾಜಿ ಸಚಿವರ ಪತ್ನಿಯ ಸರ ಕಳವು ಮಾಡಿರುವ ಘಟನೆ ತಾಲೂಕಿನ ದೊಡ್ಡಮಳೂರು ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮಾಜಿ ಸಚಿವ ಎಂ. ವರದೇಗೌಡರ ಪತ್ನಿ ಸುನಂದಮ್ಮ ತಮ್ಮ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೈಚಳಕ ತೋರಿದ ಕಳ್ಳರು ಅವರ ಕುತ್ತಿಗೆಯಲ್ಲಿದ್ದ 100 ಗ್ರಾಂ . ಚಿನ್ನದ ಸರವನ್ನು ಕಳವು ಮಾಡಿದ್ದಾರೆ. ಈಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಬಾಗಿಲು ಮುರಿದು ಕಳವು
ಚನ್ನಪಟ್ಟಣ : ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಅರಿತ ಕಳ್ಳರು ಮನೆಬಾಗಿಲು ಮುರಿದು 1.82 ಲಕ್ಷ ರು. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿರುವ ಘಟನೆ ಪಟ್ಟಣದ ರಾಜ ಕೆಂಪೇಗೌಡ ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಇಲಿನ ನಿವಾಸಿಗಳಾದ ನಿಂಗಪ್ಪ ಮತ್ತು ಗುಂಡಮ್ಮ ದಂಪತಿಗಳು ಸಂಬಂಧಿಕರ ಸಾವಿಗೆಂದು ತೆರಳಿದ್ದಾಗ ಮನೆಯ ಡೋರ್ ಲಾಕ್ ಒಡೆದು ಮನೆಯಲ್ಲಿದ್ದ 60 ಗ್ರಾಂ. ಚಿನ್ನ ಮತ್ತು 22 ಸಾವಿರ ರೂ.ನಗದನ್ನು ದೋಚಿ ಪರಾರಿಯಾಗಿದ್ದಾರೆ. ಈಸಂಬಂಧ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದರು.
ನಾಲ್ವಡಿ ಒಡೆಯರ್ಗೆ ಭಾರತ ರತ್ನ ಪ್ರಶಸ್ತಿ ನೀಡಿ
ಚನ್ನಪಟ್ಟಣ: ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಮೈಲಿಗಲ್ಲಾದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ತಾಲೂಕಿನ ಕೂಡ್ಲೂರು ಗ್ರಾಮದ ಅರಸು ಸೇವಾ ಮಂಡಲಿ ಆಗ್ರಹಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಂಡಲಿಯ ಪತ್ರಿಕಾ ಕಾರ್ಯದರ್ಶಿ ಶಿವಶಂಕರ ರಾಜೇ ಅರಸು, ಮಹತ್ಮಾಗಾಂಧೀಜಿಯಿಂದ ರಾಜರ್ಷಿ ಎಂದು ಬಿರುದು ಪಡೆದ ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಆರ್ಎಸ್ ನಿರ್ಮಾಣ, ರಾಜ್ಯಕ್ಕೆ ವಿದ್ಯುತ್, ರೈಲ್ವೆ , ಶಿಕ್ಷಣ ಮತ್ತು ಗ್ರಾಮಸ್ವರಾಜ್ಯದಂತಹ ಯೋಜನೆಗಳನ್ನು ಜಾರಿಗೆ ತರುವಲ್ಲಿ ಅವರು ಶ್ರಮಿಸಿರುವ ಮಹನೀಯರಾಗಿದ್ದು ಇವರ ಜನ್ಮದಿನವಾದ ಜೂ. 4ರಂದು ಸರ್ಕಾರ ಇವರಿಗೆ ಮರಣೋತ್ತರ ಭಾರತರತ್ನ ನೀಡಬೇಕೆಂದು ಒತ್ತಾಯಿಸಿದ್ದಾರೆ.