ಹಿಂದೂ ಧರ್ಮ ಭಾವೈಕ್ಯತೆ ಸಂಕೇತ
ಆನೇಕಲ್: ಸನಾತನ ಹಿಂದೂ ಧರ್ಮದ ಸಾರವನ್ನು ಲೋಕಕ್ಕೆ ಅರ್ಪಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ತಲಕಾಡು ಸಂಸ್ಥಾನ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಅವರು ತಾಲೂಕಿನ ಬಿದರಗುಪ್ಪೆಯ ಶ್ರೀ ಕೋಟೆ ಲಕ್ಷ್ಮೀನಾರಾಯಣ ದೇಗುಲ ಜೀರ್ಣೋದ್ಧಾರ, ಅಶ್ವತ್ಥ ವೃಕ್ಷ ಸಂಪ್ರೋಕ್ಷಣೆ, ದತ್ತಾತ್ರೇಯ ಸ್ವಾಮಿ ಸನ್ನಿಧಿಯ ಲೋಕಾರ್ಪಣೆ, ನೂತನ ವಿಮಾನ ಗೋಪುರ ಹಾಗೂ ಧ್ವಜ ಸ್ಥಂಭ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕವನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಜೀರ್ಣೋದ್ಧಾರ ಸಮಿತಿಯ ಮುಖ್ಯಸ್ಥರು ಹಾಗೂ ಚತುರ್ಭಾಷಾ ಪಂಡಿತರಾದ ವೆಂಕಟೇಶ ಮೂರ್ತಿ ಮಾತನಾಡಿ ಹಿಂದೂ ಧರ್ಮದ ಸಾಹಿತ್ಯ ಹೂರಣ ಸಂಸ್ಕೃತ ಭಾಷೆಯಲ್ಲಿದೆ. ಇಂದಿನ ಪೀಳಿಗೆಯ ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಶ್ರೀಮಂತ ಸಂಸ್ಕೃತ ಭಾಷೆಯನ್ನು ಕಲಿಸುವ ಮೂಲಕ ಮತ್ತೆ ಹಿಂದೂ ಸಂಸ್ಕೃತಿ ಸಂಪ್ರದಾಯವನ್ನು ಉಚ್ಚ್ರಾಯ ಸ್ಥಿತಿಗೆ ಕೊಂಡೊಯ್ಯುವ ಜವಾಬ್ದಾರಿ ಮೆರೆಯಬೇಕೆಂದು ತಿಳಿಸಿ ಕೆಲ ಸಂಸ್ಕತ ಶ್ಲೋಕಗಳ ಸುಲಭ ಅರ್ಥ ಮತ್ತು ಅನುಷ್ಠಾನದ ಬಗ್ಗೆ ವಿವರಿಸಿದರು.
ಆಗಮ ಪಂಡಿತ್ ನಂಜುಂಡ ದೀಕ್ಷಿತರು ಪ್ರತಿಷ್ಠಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ ಇದ್ದು ಸುತ್ತಮುತ್ತಲ ಗ್ರಾಮದ ಸಹಸ್ರಾರು ಭಕ್ತಾದಿಗಳು ಭಾಗವಹಿಸಿ ಕೃತಾರ್ಥರಾದರು.