ಬಿಜೆಪಿ ಅಭ್ಯರ್ಥಿ ಗೆಲವು ನಿಶ್ಚಿತ
ಮಾಗಡಿ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಎಂ.ನೀಲಯ್ಯ ಗೆಲವು ನಿಶ್ಚಿತ ಎಂದು ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಅಭ್ಯರ್ಥಿ ಪರ ಏರ್ಪಡಿಸಿದ್ದ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕರ ವೃತ್ತಿ ಪವಿತ್ರವಾದುದು. ಇಂತಹ ಕ್ಷೇತ್ರ ಪ್ರತಿನಿಧಿಸುವ ವ್ಯಕ್ತಿಯೂ ಪರಿಶುದ್ಧವಾಗಿರಬೇಕು. ನಕಲಿ ಮತದಾರರನ್ನು ಸೃಷ್ಟಿಸಿಕೊಂಡು ಮತ ಹಾಕಿಸಿಕೊಳ್ಳುತ್ತಿರುವ ಪುಟ್ಟಣ್ಣ ಅವರು ಶಿಕ್ಷಕರ ಪಾವಿತ್ರ್ಯತೆಗೆ ದಕ್ಕೆ ತಂದೊಡ್ಡುತ್ತಿದ್ದಾರೆ ಎಂದು ದೂರಿದರು.
ಎದುರಾಳಿ ಸೋಲಿಸಿ: ಬಿಜೆಪಿ ಜಿಲ್ಲಾಧ್ಯಕ್ಷ ಬಿ.ನಾಗರಾಜು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಅನ್ಯಾಯವಾಗುತ್ತಿದ್ದರೂ ಹಿಂದಿನ ಎಂಎಲ್ಸಿ ಪುಟ್ಟಣ್ಣ ಇಲ್ಲಿಯಯವರೆಗೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಂತಹ ವ್ಯಕ್ತಿಯನ್ನು ಗೆಲ್ಲಿಸುವುದು ಬೇಡ ಎಂದು ಮನವಿ ಮಾಡಿದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಮುನಿರಾಜುಗೌಡ, ಬಿಜೆಪಿ ಅಭ್ಯರ್ಥಿ ಎಂ.ನೀಲಯ್ಯ ಅವರಿಗೆ ಮೊದಲ ಪ್ರಾಶಸ್ತ್ಯ ನೀಡುವಂತೆ ಮನವಿ ಮಾಡಿದರು. ಬಿಜೆಪಿ ಯುವ ಮುಖಂಡ ಎಂ.ಟಿ.ಶಿವಣ್ಣ, ನಿಜಗುಣ ಶಿವಯೋಗಿ, ನಾರಾಯಣಸ್ವಾಮಿ, ಸರಸ್ವತಿ ವಿದ್ಯಾಮಂದಿರದ ಮುಖ್ಯಶಿಕ್ಷಕ ಡಿ.ದೇವರಾಜು, ಶಿಕ್ಷಕರಾದ ಸಿದ್ದೇಶ್, ಪಂಚಾಕ್ಷರಿ, ಅರಸನಾಳ್, ಶಿವಕುಮಾರ್, ಚನ್ನೇಗೌಡ, ಷಣ್ಮುಖ, ಮುದ್ದವೀರಪ್ಪ, ಶಂಕರ್, ರಾಜು, ಮೂರ್ತಿ, ರುದ್ರೇಶ್ ಇತರರು ಇದ್ದರು.