ಮೃಗಾಲಯಕ್ಕೆ ಮರಿಯಾನೆ
ಕೊಳ್ಳೇಗಾಲ: ತಾಯಿಯಿಂದ ಬೇರ್ಪಟ್ಟ ಒಂದೂವರೆ ವರ್ಷದ ಮರಿಯಾನೆಯನ್ನು ಕಳೆದ 8 ದಿನಗಳಿಂದ ಆರೈಕೆ ಮಾಡಿದ ಅರಣ್ಯ ಇಲಾಖಾಧಿಕಾರಿಗಳು ಪುಟ್ಟ ಆನೆ ಮರಿಯಾಗಿದ್ದರಿಂದ ಹೆಚ್ಚಿನ ಆರೈಕೆಗಾಗಿ ಮೈಸೂರು ಮೃಗಾಲಯದ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಿದ್ದಾರೆ.
ಇತ್ತೀಚೆಗೆ ಪಾಲಾರ್ ನದಿಯಲ್ಲಿ ನೀರು ಕುಡಿಯಲು ಬಂದ ತಾಯಿ ಆನೆಯಿಂದ ಮರಿಯಾನೆ ಬೇರ್ಪಟ್ಟಿತ್ತು. ಐದಾರು ಗಂಟೆಗಳ ಕಾಲ ಮರಿ ಆನೆಯ ರೋದನ ಕೇಳಿ ಅರಣ್ಯ ಇಲಾಖೆ ಸಿಬ್ಬಂದಿ ತಾಯಿ ಆನೆ ಬರಬಹುದು ಎಂದು ಕಾದರು. ಆದರೂ ತಾಯಿ ಆನೆ ಇತ್ತ ಸುಳಿಯದ ಹಿನ್ನೆಲೆ ಆ ಮರಿ ಆನೆ ತಂದು ಲಾಲನೆ ಪಾಲನೆ ಮಾಡಿದ್ದಾರೆ. 8 ದಿನಗಳ ಆರೈಕೆ ಬಳಿಕ ಪುಟ್ಟ ಮರಿಯನ್ನು ಕಾಡಿಗೆ ಬಿಡಲಾಗದು ಎಂದು ಅರಿತು ಮೈಸೂರು ಮೃಗಾಲಯಕ್ಕೆ ರವಾನಿಸಿದ್ದಾರೆ. ಮೈಸೂರು ಮೃಗಾಲಯಕ್ಕೆ ರವಾನೆಯಾದ ಆನೆ ಮರಿ ಆರೋಗ್ಯವಾಗಿದೆ. ಬುಧವಾರ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡಿದ್ದೆನೆ. ಸುಮಾರು ಒಂದು ತಿಂಗಳ ಪುಟ್ಟ ಆನೆ ಮರಿ ಇದಾಗಿದೆ ಎಂದು 'ಕನ್ನಡಪ್ರಭ'ಕ್ಕೆ ಮಹದೇಶ್ವರ ವನ್ಯಧಾಮದ ವಲಯ ಅರಣ್ಯಾಧಿಕಾರಿ ಹನುಮಂತಯ್ಯ ತಿಳಿಸಿದರು.
ಜಿಪಂ ಹಗರಣಕ್ಕೆ ಮರುಜೀವ?
ಬೆಳಗಾವಿ: ಮೈಸೂರು ಮಿನರಲ್ಸ್ನಿಂದ ಸರ್ಕಾರಕ್ಕೆ ಉಂಟಾದ ನಷ್ಟ ಮತ್ತು ಉತ್ತರ ಕನ್ನಡ ಜಿಲ್ಲೆಯ ಜಿಪಂ ಕಚೇರಿಯಲ್ಲಿ ನಡೆದ ಅವ್ಯವಹಾರಕ್ಕೆ ಸಂಭದಿಸಿದಂತೆ 8 ಐಎಎಸ್ ಅಧಿಕಾರಿಗಳ ವಿರುದ್ಧದ ಪ್ರಕರಣ ಮರು ಪರಿಶೀಲಿಸಿ, ಅಗತ್ಯ ಬಿದ್ದರೆ ಕ್ರಮ ಜರುಗಿಸುವಂತೆ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ, ಮಾಜಿ ಸಚಿವ ತನ್ವೀರ ಸೇಠ್ ಹೇಳಿದ್ದಾರೆ.
ಬುಧವಾರ ನಗರದ ಸುವರ್ಣ ವಿಧಾನಸೌಧದಲ್ಲಿ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿ ಪ್ರಥಮ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೈಸೂರು ಮಿನರಲ್ಸ್ನಿಂದ ವಿವಿಧ ಕಂಪನಿಗಳಿಗೆ ಗುತ್ತಿಗೆ ನೀಡಿರುವುದರಿಂದ ಸರ್ಕಾರಕ್ಕೆ ಒಟ್ಟು ರು. 682 ಕೋಟಿ ನಷ್ಟವಾಗಿದೆ. ಈ ಪ್ರಕರಣದಲ್ಲಿ 7 ಐಎಎಸ್ ಅಧಿಕಾರಿಗಳ ಮೇಲೆ ಆರೋಪವಿತ್ತು. ಲೋಕಾಯುಕ್ತದಲ್ಲಿ ಇಂದಿಗೂ ಪ್ರಕರಣದ ತನಿಖೆ ನಡೆಯುತ್ತಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗ ನಾಗಲಾಂಬಿಕಾ ದೇವಿ ಅವರು ಹಣ ಮತ್ತು ಅಧಿಕಾರದ ದುರುಪಯೋಗ ಮಾಡಿಕೊಂಡ ಆರೋಪವಿತ್ತು. ಅಗತ್ಯಬಿದ್ದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲು ನಿರ್ಧರಿಸಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಯು.ಬಿ. ಬಣಕಾರ, ವಿಜಯಾನಂದ ಕಾಶಪ್ಪನ್ನವರ, ವಿಧಾನಸಭೆಯ ಅಪರ ಕಾರ್ಯದರ್ಶಿ ಗುರುರಾಜ ಇದ್ದರು.