ಲೈಂಗಿಕ ದೌರ್ಜನ್ಯ: ಬಿಜೆಪಿ ಪ್ರತಿಭಟನೆ
ರಾಮನಗರ: ದೆವ್ವ ಬಿಡಿಸುವ ನೆಪದಲ್ಲಿ ಮುಸ್ಲಿಂ ಮಾಂತ್ರಿಕನೊಬ್ಬ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಪೊಲೀಸರು ಈ ಪ್ರಕರಣವನ್ನು ಲೈಂಗಿಕ ದೌರ್ಜನ್ಯವೆಂದು ತಿರುಚಿ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟಿಸಿದರು. ನಗರದ ಕಂದಾಯ ಭವನದ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು.
ಬಾಲಕಿ ಮೇಲೆ ಎರಡು ತಿಂಗಳ ಹಿಂದೆಯೇ ಅತ್ಯಾಚಾರ ನಡೆದಿದೆ. ಇದೀಗ ಪ್ರಕರಣವನ್ನು ಲೈಂಗಿಕ ದೌರ್ಜನ್ಯವಷ್ಟೇ ಎಂದು ಪೊಲೀಸರು ತಿರುಚಿದ್ದಾರೆ. ನಿಜವಾದ ಆರೋಪಿಯನ್ನು ರಕ್ಷಿಸಿ, ಬೇರೆ ಯಾರನ್ನೋ ಬಂಧಿಸಿ ಪ್ರಕರಣವನ್ನು ಹಳ್ಳ ಹಿಡಿಸಿದ್ದಾರೆ ಎಂದು ದೂರಿದರು. ಗೃಹ ಖಾತೆ ಜವಾಬ್ದಾರಿ ನಿಭಾಯಿಸುವಲ್ಲಿ ಜಾರ್ಜ್ ಅಸಮರ್ಥರಾಗಿದ್ದಾರೆ ಎಂದು ಆರೋಪಿಸಿದರು. ಆಕೆ ಎದುರು ನಿಜವಾದ ಆರೋಪಿಯನ್ನು ನಿಲ್ಲಿಸಿ, ಗುರ್ತಿಸಲು ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿಸ್ಥರನ್ನು ಶಿಕ್ಷೆಗೆ ಗುರಿಪಡಿಸುವವರೆಗೆ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರವಿಕುಮಾರಗೌಡ, ಶಿವಮಾದು, ರುದ್ರದೇವರು, ಪದ್ಮನಾಭ, ಗುಲಾಬ್‌ಜಾನ್, ಚಂದನ್ ಮೋರೆ, ವಿ.ರಾಜು, ರಾಮಾಂಜನೇಯ, ರಾಮಣ್ಣ, ಮಂಜು ಮತ್ತಿತರರಿದ್ದರು.