ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾಗರಾಜ್ ಶಂಕು
ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಅಗಸರಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎನ್.ನಾಗರಾಜ್ ಚಾಲನೆ ನೀಡಿದ್ದಾರೆ.ನಂತರ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನ ಅಗಸರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಬಯಲು ಸೀಮೆ ಯೋಜನೆ ಹಾಗೂ ಶಾಸಕರ ನಿಧಿಯಿಂದ ಸಿಗುವ ಅನುಧಾನವನ್ನು ಬಳಿಸಿ ಕೆಲಸ ಮಾಡಲಾಗುವುದು. ಬಯಲು ಸೀಮೆಯೋಜನೆಯಲ್ಲಿ ರು.3 ಲಕ್ಷ ಹಾಗೂ ಶಾಸಕರ ನಿಧಿಯಿಂದ ರು.5 ಲಕ್ಷ ಸೇರಿ ಒಟ್ಟು 8 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ದೂರಿನ ಹಿನ್ನೆಲೆಯಲ್ಲಿ ಇದರ ಪರಿಹಾರಕ್ಕೆ ಅಗತ್ಯವಾಗಿರುವ ಕೊಳವೆ ಬಾವಿಗಳನ್ನು ಕೊರೆಯಿಸಲು ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಾಗಿರುವ ಯೋಜನೆಗಳನ್ನು ತಂದು ಪ್ರಗತಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ, ತಾಪಂ ಸದಸ್ಯೆ ಫರಾನ್, ಮುಖಂಡರಾದ ರಾಮಣ್ಣ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
ಕ್ರಿಕೆಟ್ ಜಗಳ: ಯುವಕನ ಕೊಲೆಯಲ್ಲಿ ಅಂತ್ಯ
ಆನೇಕಲ್ಲು: ಕಳೆದ 4 ತಿಂಗಳ ಹಿಂದೆ ಕ್ರಿಕೆಟ್ ಆಡುವಾಗ ನಡೆದ ಜಗಳವನ್ನೇ ಮನಸ್ಸಿನಲ್ಲಿಟ್ಟುಕೊಂಡು ಯುವಕನೊಬ್ಬನನ್ನು ಗೆಳೆಯರೇ ಕೊಂದ ದಾರುಣ ಘಟನೆ ಸರ್ಜಾಪುರ ಠಾಣಾ ವ್ಯಾಪ್ತಿಯ ಗೋಣಿಗಟ್ಟಪುರದಲ್ಲಿ ನಡೆದಿದೆ.ಕೂಗೂರು ಗ್ರಾಮದ ವಾಸಿ ಮಂಜುನಾಥ್ (20) ಕೊಲೆಯಾದವ. ಗುರುವಾರ ರಾತ್ರಿ ಗೆಳೆಯ ಸಂತೋಶ್ ಜೊತೆ ಬೈಕಿನಲ್ಲಿ ಬರುತ್ತಿದ್ದಾಗ ಗೋಣಿಗಟ್ಟಪುರ ಹಂಪ್ ಬಳಿ ಅಡ್ಡಗಟ್ಟಿದ 15 ರಿಂದ 20 ಜನರ ಗುಂಪೊಂದು ಚಾಕುವಿನಿಂದ ಎದೆ, ಹೊಟ್ಟೆ ಹಾಗೂ ಇತರ ಭಾಗಗಳಿಗಿ ತಿವಿದು ಕೊಲೆ ಮಾಡಿದ್ದಾರೆ. ಜತೆಗಿದ್ದ ಸಂತೋಷ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಪ್ರಕರಣ ದಾಖಲಿಸಿಕೊಂಡಿರುವ ಸರ್ಜಾಪುರ ಪೊಲೀಸರು 5 ಜನರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.ಮಂಜುನಾಥನ ಪೋಷಕರು ಜೊತೆಯಲ್ಲಿದ್ದ ಸಂತೋಷ್‌ನನ್ನೂ ಅನುಮಾನಿಸಿದ್ದು ಕಳೆದ 2 ದಿನಗಳಿಂದ ಈತ ಬೆಂಬಿಡದೇ ಬೈಕನಲ್ಲಿ ಬರುವಂತೆ ಪ್ರಚೋದನೆ ಮಾಡುತ್ತಿದ್ದ ಎಂಬ ದೂರಿನ ಮೇರೆಗೆ ವಿಚಾರಣೆಗೊಳಪಡಿಸಲಾಗಿದೆ ಎಂದಿದ್ದಾರೆ.
ಬೆಳಗುಂಬ ಗ್ರಾಮದ ಪಂಚಮುಖಿ ಮಹಾ ಗಣಪತಿ ಪ್ರತಿಷ್ಠಾಪನೆ ಇಂದು
ಮಾಗಡಿ: ತಾಲೂಕಿನ ಕಸಬಾ ಹೋಬಳಿ ಬೆಳಗುಂಬ ಗ್ರಾಮದಲ್ಲಿ ಜೂ.14 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಪಂಚಮುಖಿ ಮಹಾ ಗಣಪತಿ, ಮುತ್ತರಾಯಸ್ವಾಮಿ, ಬಸವೇಶ್ವರಸ್ವಾಮಿ ದೇವರ ಸ್ಥಿರಬಿಂಬ ಪ್ರತಿಷ್ಠಾಪನೆ,ಚಂಡಿಕಾ ಹೋಮ ಮತ್ತು ಆಂಜನೇಯಸ್ವಾಮಿ, ಮಾರಮ್ಮ (ಚೌಡೇಶ್ವರಿ ದೇವಿ), ಅಶ್ವತ್ಥನಾರಾಯಣ, ಪಟ್ಟಾಲದಮ್ಮ ದೇವಿ ದೇವಾಲಯದ ಜೀಣೋದ್ಧಾರ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ. ಆದಿಚುಂಚನಗಿರಿ ಕ್ಷೇತ್ರದ ಮಠಾಧೀಶ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗಸ್ವಾಮಿಜೀ, ಕಂಚಗಲ್ ಬಂಡೇಮಠದ ಬಸವಲಿಂಗಸ್ವಾಮೀಜಿ ಸಮ್ಮುಖದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಡಿ.ಕೆ. ಸುರೇಶ್ ಕಾರ್ಯಕ್ರಮ ಉದ್ಘಾಟಿಸದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡ ಪಂಚಮುಖಿ ಗಣಪತಿ ದೇವಾಲಯ ಉದ್ಘಾಟಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಬಿಬಿಎಂಪಿ ಸದಸ್ಯ ಎಲ್. ಶ್ರೀನಿವಾಸ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕ ಜಗದೀಶ್ ಕುಮಾರ್ ಭಾಗವಹಿಸಲಿದ್ದಾರೆ. ಮಾಜಿ ಸಚಿವ ಎಚ್.ಎಂ. ರೇವಣ್ಣ ಮುತ್ತರಾಯಸ್ವಾಮಿ ದೇವಾಲಯದ ಗೋಪುರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಮಾಜ ಸೇವಕ ಕೆ. ಬಾಗೇಗೌಡ ಬಸವಣ್ಣ ದೇವರ ದೇವಾಲಯ ಉದ್ಘಾಟಿಸಲಿದ್ದು, ಮುತ್ತರಾಯಸ್ವಾಮಿ ದೇವರ ದೇವಾಲಯವನ್ನು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಸದಸ್ಯ ಎ.ಮಂಜು ಬಸವಣ್ಣ ದೇವಾಲಯದ ಗೋಪುರ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಎಂ. ಕೃಷ್ಣಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಸೇರಿದಂತೆ ಸುತ್ತ-ಮುತ್ತಲ ಗ್ರಾಮಸ್ಥರು ಭಾಗವಹಿಸಲಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ ನಾಳೆ
ಮಾಗಡಿ : ತಾಲೂಕಿನ ಕಸಬಾ ಹೋಬಳಿ ಮದಲರಾಯನಪಾಳ್ಯದಲ್ಲಿ ಆದಿಶಕ್ತಿ ಗ್ರಾಮದೇವತೆ ದೇವಿಯ ನೂತನ ಮಹಾದ್ವಾರ ಮತ್ತು ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಜೂ.15 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.ಪಟ್ಟನಾಯಕನಹಳ್ಳಿ ಕ್ಷೇತ್ರದ ಮಠಾಧೀಶ ನಂಜಾವಧೂತ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎನ್. ಅಶೋಕ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ.ಮುದ್ದುರಾಜ ಯಾದವ್, ಎಂ.ಕೆ.ಧನಂಜಯ, ಹಂಸಕುಮಾರಿ, ವಿಜಯಕುಮಾರ್, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿಪಾಳ್ಯದ ಕೃಷ್ಣಮೂರ್ತಿ, ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಮೋಹನ್‌ಕುಮಾರ್ ಸೇರಿದಂತೆ ಅನೇಕ ಗಣ್ಯರು ಮತ್ತು ಭಕ್ತರು ಹಾಗೂ ಸುತ್ತುಮುತ್ತಲ ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದು ಮದಲರಾಯನಪಾಳ್ಯದ ಶ್ರೀನಿವಾಸ್ ತಿಳಿಸಿದ್ದಾರೆ.