ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ: ಪ್ರಕರಣ ದಾಖಲು
ಚನ್ನಪಟ್ಟಣ: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವ ಎರಡು ಪ್ರತ್ಯೇಕ ಪ್ರಕರಣಗಳು ತಾಲೂಕಿನ ಪುರ ಮತ್ತು ಎಂ.ಕೆ.ದೊಡ್ಡಿ ಠಾಣೆಯಲ್ಲಿ ದಾಖಲಾಗಿವೆ.
ಬಾಲಕಿಯರ ನಾಪತ್ತೆ ಪ್ರಕರಣದ ಬೆನ್ನು ಹತ್ತಿ ಹೋದ ಪೊಲೀಸರಿಗೆ ಅತ್ಯಾಚಾರ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಎರಡೂ ಪ್ರಕರಣದಲ್ಲೂ ಬಾಲಕಿಯರನ್ನು ಪ್ರೀತಿಸಿ ಕರದುಕೊಂಡು ಹೋಗಿರುವ ಯುವಕರು ಅವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದು ಎರಡೂ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ದಾಖಲಿಸಲಾಗಿದೆ.
ಚನ್ನಪಟ್ಟಣದ ಕೋಟೆಯ 17 ವರ್ಷ ವಯಸ್ಸಿನ ಯುವತಿ ಒಂದು ವಾರದ ಹಿಂದೆ ನಾಪತ್ತೆಯಾಗಿರುವುದಾಗಿ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಬಾಲಕಿಯನ್ನು ಕೋಟೆಯ ನಿವಾಸಿಯಾದ ಮಧು ಎಂಬಾತ ಕರೆದುಕೊಂಡು ಹೋಗಿರುವ ಮಾಹಿತಿ ದೊರೆತು ಬಾಲಕಿ ಕರೆತಂದ ಪೊಲೀಸರು ವಿಚಾರಣೆ ನಡೆಸಲಾಗಿ ಈಕೆಯ ಮೇಲೆ ಅತ್ಯಾಚಾರ ನಡೆದಿರುವ ಸಂಗತಿ ತಿಳಿದು ಬಂದಿದೆ.
ಮಧು ಎಂಬುವನ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು, ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
ಎಂ.ಕೆ.ದೊಡ್ಡಿ ಠಾಣೆ ವರದಿ: ಟ್ರ್ಯಾಕ್ಟರ್ ಚಾಲಕ 13 ವರ್ಷದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ನಡೆಸಿರುವ ಘಟನೆ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದಿದೆ. ಈಸಂಬಂಧ ಯಾದಗಿರಿ ಮೂಲದ ಟ್ರ್ಯಾಕ್ಟರ್ ಚಾಲಕ ನಿಂಗಪ್ಪ ಎಂಬುವನ ವಿರುದ್ಧ ಎಂ.ಕೆ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಯಾದಗಿರಿಯ ನಿಂಗಪ್ಪ ಗ್ರಾಮದ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಆಕೆಯನ್ನು ಬಿಜಾಪುರಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. ತನಿಖೆ ನಡೆಸಿದ ಪೊಲೀಸರು ಬಾಲಕಿ ಮತ್ತು ಆರೋಪಿ ನಿಂಗಪ್ಪನನ್ನು ಕರೆತಂದು ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬಾಲಕಿಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.