ನ್ಯಾಯವಾದಿಗಳ ಪಾತ್ರ ಮಹತ್ವದ್ದು
ಕ.ಪ್ರ.ವಾರ್ತೆ, ರಾಮನಗರ, ಜೂ.13
ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ವಕೀಲರ ಪಾತ್ರ ಮಹತ್ವವಾಗಿದ್ದು, ನ್ಯಾಯ ಒದಗಿಸುವ ನ್ಯಾಯಾಲಯಗಳ ಕಾರ್ಯಕ್ಕೆ ನೆರವು ನೀಡಬೇಕಿದೆ. ಸಂವಿಧಾನ ಹಾಗೂ ಕಾನೂನು ತಿದ್ದುಪಡಿಗಳ ನಿರಂತರ ಕಲಿಕೆ, ಹಾಗೂ ಬಳಕೆಯಿಂದಷ್ಟೆ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ನ ನ್ಯಾ. ವಿ.ಗೋಪಾಲಗೌಡ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ವಕೀಲರ ಸಂಘವು ಭೂ ಸ್ವಾದೀನ ಹಾಗೂ ಮೋಟಾರ್ ವಾಹನಗಳ ಕಾಯ್ದೆಯಡಿ ಪರಿಹಾರ ಕೊಡಿಸುವ ಸಂಬಂಧ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು ಸೇರಿದಂತೆ ವಕೀಲರು ನಿರಂತರ ಕಾನೂನು ಅಧ್ಯಯನ ನಡೆಸಬೇಕು ಎಂದರು.
ಒಬ್ಬ ನ್ಯಾಯಾಧೀಶ, ವಕೀಲ ತಾನು ಅನುಭವಿಯಾಗಿದ್ದು ನನಗೆ ಕಾನೂನಿನ ಎಲ್ಲಾ ಕಾಯಿದೆಗಳು ತಿಳಿದಿವೆ ಎಂದು ಕಲಿಕೆಯನ್ನು ನಿಲ್ಲಿಸಿದ್ದಲ್ಲಿ ಅಂದೇ ಅವನ ಕಾನೂನು ಅರ್ಥೈಸುವಿಕೆ ಮುಗಿದಂತೆಯೆ. ನಿರಂತರ ಕಲಿಕೆ ಇಲ್ಲದೆ ವಾದಿಸಿದಲ್ಲಿ ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳ ಮೇಲೆ ಗಂಭೀರ ಅಡ್ಡಪರಿಣಾಮಗಳು ಉಂಟಾಗುವುದು. ಸಮಾಜದ ಮೇಲೂ ಸಮಾಜದ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುವುದು ಎಂದು ಹೇಳಿದರು.
ಮಹತ್ವದ ಪಾತ್ರ: ವಕೀಲ ವೃತ್ತಿಯು ಶ್ರೇಷ್ಠವಾದುದಾಗಿದೆ. ಅದನ್ನು ಅರ್ಥ ಮಾಡಿಕೊಂಡು ನ್ಯಾಯ ಒದಗಿಸಬೇಕಿದೆ. ಭಾರತೀಯ ಸಂವಿಧಾನ ಹಾಗೂ ನ್ಯಾಯಾಂಗವು ಪ್ರಪಂಚದಲ್ಲಿಯೇ ಶ್ರೇಷ್ಠತೆ ಮೆರೆದಿದ್ದು ಸುಪ್ರೀಂ ಕೋರ್ಟ್ ಕಾನೂನು ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಂವಿಧಾನವು ದೇಶದ ಆಡಳಿತದ ಬೈಬಲ್ ಆಗಿದೆ ಎಂದು ಅವರು ತಿಳಿಸಿದರು.
ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗ ಸಂವಿಧಾನದ ಮೂರು ಆಧಾರಸ್ಥಂಭಗಳಾಗಿವೆ. ಆದರೆ ಇವೆಲ್ಲಕ್ಕೂ ಪ್ರಮುಖವಾದುದು ಜನರು. ನ್ಯಾಯಾಂಗದ ಮೇಲೆ ದೇಶದ ಜನರಲ್ಲಿ ಅಪರಿಮಿತವಾದ ನಂಬಿಕೆ ಇದ್ದು ಈ ನಂಬಿಕೆಗೆ ಆಘಾತವಾದಲ್ಲಿ ಅಂದೇ ಪ್ರಜಾಪ್ರಭುತ್ವ ಕೊನೆಗೊಳ್ಳುವುದು. ಇದನ್ನು ಅರಿತು ನ್ಯಾಯಾಧೀಶರು ವಕೀಲರು ಕೆಲಸ ಮಾಡಬೇಕಿದೆ ಎಂದು ನ್ಯಾ. ಗೋಪಾಲಗೌಡ ತಿಳಿಸಿದರು.
ನ್ಯಾಯ ನೀಡುವ ಪ್ರತಿಯೊಬ್ಬ ನ್ಯಾಯಾಧೀಶರು ನ್ಯಾಯಾಂಗಾಧಿಕಾರಿಗೆ ತರಬೇತಿಯ ಅವಶ್ಯಕತೆಯಿದ್ದು ನಾವು ಏನನ್ನೂ ತಿಳಿದಿದ್ದೇವೋ ಅದು ಅಲ್ಪ. ಕಲಿಯಬೇಕಿರುವುದು ಅಗಾಧವಾಗಿದೆ. ಪ್ರಕರಣಗಳ ಶೀಘ್ರ ವಿಲೇವಾರಿ ಅಗತ್ಯ. ಆದರೆ, ಅದರಿಂದ ಯಾರಿಗೂ ಅನ್ಯಾಯವಾಗಬಾರದು. ಕಾನೂನಿನ ಜತೆಗೆ ಮಾನವೀಯ ಮೌಲ್ಯವನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು.
ಉತ್ತಮ ವಾದ ಮಂಡಿಸುವುದು ಅಗತ್ಯ: ನ್ಯಾಯಾಧೀಶರು ವಕೀಲರಿಂದಲೂ ಕಲಿಯುವಂತದ್ದು ಇರುತ್ತದೆ. ಒಬ್ಬ ವಕೀಲ ಉತ್ತಮವಾಗಿ ವಾದ ಮಂಡಿಸಿದರಷ್ಟೇ ಉತ್ತಮ ತೀರ್ಪು ಹೊರಬರಲು ಸಾಧ್ಯವಿರುತ್ತದೆ. ಆದ್ದರಿಂದ ವಕೀಲರನ್ನು ನಿರ್ಲಕ್ಷಿಸಬಾರದು ಎಂದು ಕಿವಿ ಮಾತು ಹೇಳಿದರು. ಪ್ರಕರಣಗಳನ್ನು ಸಾಮಾಜಿಕ, ಆರ್ಥಿಕ ದೃಷ್ಟಿಯಿಂದಲೂ ಪರಿಗಣಿಸಿ, ನ್ಯಾಯ ಒದಗಿಸಲು ಶ್ರಮಿಸಬೇಕು. ವಕೀಲರು ಕೇವಲ ವಾದವನ್ನು ಮಾಡುವುದಷ್ಟೇ ಮಾಡದೇ ನ್ಯಾಯಾಲಯಗಳಿಗೆ ಕಕ್ಷಿದಾರರ ಪರವಾಗಿ ಹೋರಾಡಬೇಕಿದೆ. ಆ ರೀತಿ ಮಾಡದಿದ್ದಲ್ಲಿ ಕಕ್ಷಿದಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಸಂವಿಧಾನದ ಮೂಲ ಉದ್ದೇಶವಾದ ನ್ಯಾಯ ಒದಗಿಸುವ ಉದ್ದೇಶಕ್ಕೆ ಧಕ್ಕೆ ತಂದಂತೆ ಆಗುತ್ತದೆ ಎಂದರು.
ಪ್ರತಿಯೊಂದು ಪ್ರಕರಣ ಹಾಗೂ ವಾಸ್ತವಾಂಶ ಭಿನ್ನಭಿನ್ನವಾಗಿದ್ದು ಎಲ್ಲಾ ಪ್ರಕರಣಗಳನ್ನು ಒಂದೇ ರೀತಿ ಪರಿಗಣಿಸಬಾರದು. ಕಕ್ಷಿದಾರರು ರೈತ, ವಿಧವೆ, ಗೃಹಿಣಿ, ವಿದ್ಯಾರ್ಥಿ ಎಂದು ಅವರಿಗೆ ಪರಿಹಾರ ಕೋರುವಾಗಲೇ ಕಡಿಮೆ ಕೋರುವುದು ವಿಪರ್ಯಾಸವಾಗಿದೆ. ಕನಿಷ್ಠ ಕೂಲಿಯನ್ನು ಪರಿಗಣಿಸಿದರೂ ಒಬ್ಬ ವ್ಯಕ್ತಿಯೂ ಜೀವಿತಾವಧಿಯಲ್ಲಿ ಗಳಿಸಬಹುದಾದ ಆದಾಯವನ್ನು ಪರಿಗಣಿಸಿ ನ್ಯಾಯ ಕೊಡಿಸಬೇಕು ಎಂದು ನ್ಯಾ. ಗೋಪಾಲಗೌಡ ತಿಳಿಸಿದರು.
ಹೈಕೋರ್ಟ್ನ ನ್ಯಾಯಾಧೀಶ ಹುಲುವಾಡಿ ಜಿ.ರಮೇಶ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ, ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ಎಸ್.ಹೊಸಗೌಡರ, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕುಮಾರ್, ಕಾರ್ಯದರ್ಶಿ ಮಹೇಶ್, ಖಜಾಂಚಿ ಚಂದ್ರಶೇಖರ್, ಉಪಾಧ್ಯಕ್ಷ ಚಿಕ್ಕಪ್ಪಾಜಿ ಭಾಗವಹಿಸಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪೊಲೀಸರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಗೌರವ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಬಸವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ತಹಸೀಲ್ದಾರ್ ಮಂಜಪ್ಪ ಸ್ವಾಗತಿಸಿದರು.