ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮತ್ತೆರಡು ಕಡೆ ಚಿಕೂನ್‌ಗುನ್ಯ ಗುನ್ನ

Srinivasa Murthy VN
Updated On : 14 Jun 2014, 12:20 pm

-ಮತ್ತೀಕೆರೆ ಜಯರಾಮ್
ರಾಮನಗರ: ಇನ್ನೆರಡು ಗ್ರಾಮಗಳನ್ನು ಚಿಕೂನ್‌ಗುನ್ಯ ಆವರಿಸಿದೆ. ಅಬಾಲವೃದ್ಧರಾದಿ ರೋಗದಿಂದ ಬಳಲುತ್ತಿರುವ ಉಭಯ ಗ್ರಾಮಗಳ ಬಹುಪಾಲು ಮಂದಿ ಕಂಗಾಲಾಗಿದ್ದಾರೆ. ಹೀಗೆ, ಚಿಕೂನ್‌ಗುನ್ಯ ಹಾವಳಿಗೆ ಗುರಿಯಾಗಿರುವುದು ಚನ್ನಪಟ್ಟಣ ತಾಲೂಕಿನ ನೆಲಮಾಕನಹಳ್ಳಿ ಮತ್ತು ಕಾಡಂಕನಹಳ್ಳಿ. ಅಲ್ಲಿ ಮನೆಗೆ ಒಬ್ಬಿಬ್ಬರಾದರೂ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಎಡತಾಕುವ ಸ್ಥಿತಿ ನಿರ್ಮಾಣವಾಗಿದೆ.
ರಾಮನಗರ ಜಿಲ್ಲೆಯಲ್ಲಿ ಕಳೆದೆರಡು ವರ್ಷದಿಂದ ಡೆಂಘೀ, ಚಿಕೂನ್‌ಗುನ್ಯ ಹಾವಳಿ ತೀವ್ರವಾಗಿದೆ. ಈ ಬಾರಿ ಮುಂಗಾರು ಪ್ರಾರಂಭದಲ್ಲೇ ಚಿಕೂನ್‌ಗುನ್ಯ ಸಹಿತ ಸಾಂಕ್ರಾಮಿಕ ರೋಗಗಳ ಭೀತಿ ಕಾಡಲಾರಂಭಿಸಿದೆ.ಕೈ, ಕಾಲಿನ ಸಂಧುಗಳೆಲ್ಲ ಬಿಗಿ ಹಿಡಿದಂತಾಗಿರುವ ಜತೆಗೆ ವಿಪರೀತ ನೋವಿನಿಂದ ರೋಗಿಗಳು ಯಾತನೆ ಅನುಭವಿಸುತ್ತಿದ್ದಾರೆ. ಕುಳಿತರೆ ನಿಲ್ಲಲಾಗದೆ, ನಿಂತರೆ ತಿರುಗಾಡಲಾಗದೆ ಬಹುತೇಕ ರೋಗ ಪೀಡಿತರು ಯಾತನೆ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಚಿಕೂನ್‌ಗುನ್ಯ ವ್ಯಾಪಿಸಿರುವ ಕಾಡಂಕನಹಳ್ಳಿ ಮತ್ತು ನೆಲಮಾಕನಹಳ್ಳಿ ಹತ್ತಿರವಿರುವ ಗ್ರಾಮಸ್ಥರು ಕೂಡ ಆತಂಕಗೊಂಡಿದ್ದಾರೆ.
ನಿವಾರಣೆಗೆ ಹೆಣಗಾಟ: ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ನೆಲಮಾಕನಹಳ್ಳಿಯಲ್ಲಿ 5 ಮತ್ತು ಕಾಡಂಕನಹಳ್ಳಿಯಲ್ಲಿ 45 ಮಂದಿಗೆ ಚಿಕೂನ್‌ಗುನ್ಯ ತಗುಲಿದೆ. ಆದರೆ, ವಾಸ್ತವದಲ್ಲಿ ಉಭಯ ಗ್ರಾಮಗಳಲ್ಲೂ ನೂರಾರು ಮಂದಿ ಈ ರೋಗದಿಂದ ನರಳಾಡುತ್ತಿದ್ದಾರೆ. ಈ ರೋಗಕ್ಕೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಚನ್ನಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಹೀಗಾಗಿ ತಾವು ಬೆಂಗಳೂರು ಮತ್ತಿತರೆ ಕಡೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.ಇದನ್ನು ಗಮನಿಸಿದರೆ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ತಮ್ಮ ಆಸ್ಪತ್ರೆಗಳಲ್ಲಷ್ಟೇ ಔಷಧೋಪಚಾರ ಪಡೆದವರದ್ದಾಗಿದೆ. ಹೊರಗಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಇನ್ನೂ ನರಳಾಡುತ್ತಿರುವವರ ಲೆಕ್ಕ ಅವರಲ್ಲಿ ಇಲ್ಲ. ನ್ಯುಮೋನಿಯಾದಿಂದ ಸಾವು: ನೆಲಮಾಕನಹಳ್ಳಿ ಗ್ರಾಮದಲ್ಲಿ 3 ದಿನದ ಹಿಂದಷ್ಟೇ 75 ವಯಸ್ಸಿನ ವೃದ್ಧೆಯೊಬ್ಬರು ಸಾವನ್ನಪ್ಪಿದ್ದು, ಇದು ಚಿಕೂನ್‌ಗುನ್ಯದಿಂದಲೇ ಸಂಭವಿಸಿದ ಸಾವಿರಬೇಕು ಎಂದು ಗ್ರಾಮಸ್ಥರು ಆತಂಕಕ್ಕೆ ಈಡಾಗಿದ್ದಾರೆ. ಆದರೆ, ವೃದ್ಧೆ ಸಾವಿಗೆ ನ್ಯುಮೋನಿಯಾ ಕಾರಣವೆಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಉಭಯ ಗ್ರಾಮಗಳಲ್ಲಿ ಚಿಕೂನ್‌ಗುನ್ಯ ತಗುಲಿದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರೋಗ ಹರಡುವ ಸೊಳ್ಳೆಗಳ ಹಾವಳಿ ತಪ್ಪಿಸಲು ಗ್ರಾಪಂ ಕ್ರಮ ಕೈಗೊಂಡಿಲ್ಲ, ರೋಗ ಹತೋಟಿಗೆ ಆರೋಗ್ಯ ಇಲಾಖೆಗೂ ಕಾಳಜಿ ಇಲ್ಲವೆನ್ನುವುದು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.

ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಅಗತ್ಯ
ದೊಡ್ಡಬಳ್ಳಾಪುರ: ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಅತ್ಯಂತ ಆತಂಕಕಾರಿಯಾಗಿವೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ದಲಿತ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವೇ ತಲೆ ತಗ್ಗಿಸುವ ವಿಚಾರ ಎಂದು ಪ್ರಜಾ ವಿಮೋಚನಾ ಚಳವಳಿ (ಸಮತಾವಾದ) ಮಹಿಳಾ ಘಟಕ ಕಿಡಿ ಕಾರಿದೆ.ಪಿವಿಸಿ(ಎಸ್) ಮಹಿಳಾ ಘಟಕದ ನೇತೃತ್ವದಲ್ಲಿ ಇಲ್ಲಿನ ಕೊಂಗಾಡಿಯಪ್ಪ ಕೇಂದ್ರ ಬಸ್‌ನಿಲ್ದಾಣದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಉತ್ತರ ಪ್ರದೇಶದ ಬಂದೋರ್ ಗ್ರಾಮದಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಕೃತ್ಯ ಅಮಾನವೀಯ. ಇಂತಹ ಪರಿಸ್ಥಿತಿ ಮತ್ತು ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿದ್ದರೂ ಉತ್ತರ ಪ್ರದೇಶ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಆ ರಾಜ್ಯದ ಕೆಲ ಸಚಿವರು ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡುವ ಮೂಲಕ ಮಹಿಳೆಯರಿಗೆ ಮತ್ತು ದಲಿತರಿಗೆ ಅಪಮಾನ ಮಾಡುತ್ತಿದ್ದಾರೆ. ಇಂತಹ ಪರಮನೀಚ ಕೃತ್ಯಗಳ ವಿರುದ್ಧ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಘಟನೆಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಸಂಪೂರ್ಣ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಆ ರಾಜ್ಯದಲ್ಲಿ ಕೂಡಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.ದಲಿತ ಹೆಣ್ಣು ಮಕ್ಕಳು, ಬಡ ಮಹಿಳಾ ಕಾರ್ಮಿಕರನ್ನು ಭೋಗದ ವಸ್ತುಗಳಂತೆ ಬಳಸಿಕೊಳ್ಳುತ್ತಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆರೋಪಿಗಳನ್ನು ಬಂಧಿಸಿ ಗಲ್ಲುಶಿಕ್ಷೆ ವಿಧಿಸಬೇಕು. ಪ್ರಕರಣದಲ್ಲಿ ಆರೋಪಿಗಳ ಪರ ಸಹಕರಿಸುತ್ತಿರುವವರನ್ನು ಗಡೀಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದರು.ಪ್ರಜಾ ವಿಮೋಚನಾ ಚಳವಳಿ ರಾಜ್ಯ ಕಾರ್ಯದರ್ಶಿ ಮುನಿಆಂಜಿನಪ್ಪ, ಬೆಂ.ಗ್ರಾ.ಜಿಲ್ಲಾ ಅಧ್ಯಕ್ಷ ಮುನಿಕೃಷ್ಣಪ್ಪ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಧು ಪ್ರಕಾಶ್, ಉಪಾಧ್ಯಕ್ಷೆ ಶ್ಯಾಮಲ ಜಗದೀಶ್, ನೀಲಮ್ಮ, ಲಕ್ಷ್ಮೀ, ಸುಜಾತ, ಚೆನ್ನಮರಿಯಪ್ಪ, ರಾಜಣ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ನ್ಯುಮೋನಿಯಾ ಕಾರಣ
ಕಾಡಂಕನಹಳ್ಳಿಯಲ್ಲಿ 45 ಮಂದಿಗೆ ಮತ್ತು ನೆಲಮಾಕನಹಳ್ಳಿಯಲ್ಲಿ 5 ಮಂದಿಗೆ ಚಿಕೂನ್‌ಗುನ್ಯ ಪತ್ತೆಯಾಗಿದೆ. ನೆಲಮಾಕನಹಳ್ಳಿಯ ವೃದ್ಧೆ ಸಾವಿಗೆ ನ್ಯುಮೋನಿಯಾ ಕಾರಣವೇ ಹೊರತು ಚಿಕೂನ್‌ಗುನ್ಯ ಅಲ್ಲ.
-ಡಾ.ರಾಜು, ವೈದ್ಯಾಧಿಕಾರಿ, ಚನ್ನಪಟ್ಟಣ.

ಗ್ರಾಮಕ್ಕೆ ಭೇಟಿ ನೀಡಿಲ್ಲ
ನೆಲಮಾಕನಹಳ್ಳಿಯಲ್ಲಿ ಚಿಕೂನ್‌ಗುನ್ಯ ತಿಂಗಳಿಂದಲೂ ಕಾಡುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಇದುವರೆಗೆ ಪರಿಶೀಲನೆ ನಡೆಸಿಲ್ಲ.
-ಯಶೋಧ, ನೆಲಮಾಕನಹಳ್ಳಿ

ತಕ್ಷಣ ಗಮನ ಹರಿಸಿ...
ನೆಲಮಾಕನಹಳ್ಳಿಯಲ್ಲಿ ಚಿಕೂನ್‌ಗುನ್ಯ ಹಾವಳಿ ಹೆಚ್ಚುತ್ತಿದ್ದು, ಗ್ರಾಮಸ್ಥರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ತಾಲೂಕು ಆಡಳಿತ ತಕ್ಷಣ ಈ ಬಗ್ಗೆ ಗಮನ ಹರಿಸಬೇಕು.
-ನಾಗರಾಜು, ನೆಲಮಾಕನಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement