ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವಾಂಗ ಸಂಘದಿಂದ ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ

Srinivasa Murthy VN
Updated On : 16 Jun 2014, 12:24 pm

ಆನೇಕಲ್ಲು: ಆಂಧ್ರ ದೇವಾಂಗ ಸಂಘವು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಾದ್ಯಂತ ತನ್ನ ಸದಸ್ಯರನ್ನು ಹೊಂದಿದ್ದು ಸಮಾಜ ಬಂಧುಗಳ ಏಳಿಗೆಗಾಗಿ ಅವಿರತ ಶ್ರಮಿಸುತ್ತಿರುವುದಾಗಿ ಆನೇಕಲ್ ತಾಲೂಕು ನಿರ್ದೇಶಕ ಜಿ. ನಂಜುಂಡಪ್ಪ ತಿಳಿಸಿದ್ದಾರೆ.
ಅವರು ಆನೇಕಲ್ಲಿನ ಸೋಷಿಯಲ್  ಕ್ಲಬ್ಬಿನಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ತಾಲೂಕಿನಲ್ಲಿ ನೇಕಾರಿಕೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳಿವೆ. ಅನಿಯಮಿತ ವಿದ್ಯುತ್ ಪೂರೈಕೆ, ಮಾರುಕಟ್ಟೆಯಲ್ಲಿ ಅಸ್ಥಿರತೆ, ಚೈನಾ ರೇಷ್ಮೆ ಆಮದು ಸಮಸ್ಯೆ, ಕೌಶಲ್ಯ ಹೊಂದಿರುವ ಕಾರ್ಮಿಕರ ಕೊರತೆಯಿಂದಾಗಿ ಉದ್ಯಮದಲ್ಲಿ ಲಾಭಾಂಶ ಕಡಿಮೆಯಾಗಿದೆ.
ವಿದ್ಯುತ್ ಸಮಸ್ಯೆ ಬಗೆಹರಿಸಲು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ರಾಮಲಿಂಗಾರೆಡ್ಡಿಯವರನ್ನು ಸ್ಥಳೀಯ ಶಾಸಕ ಬಿ. ಶಿವಣ್ಣ ಅವರ ಜೊತೆ ಭೇಟಿ ಮಾಡಿ ನಿರಂತರ ವಿದ್ಯುತ್ ಪೂರೈಕೆಗಾಗಿ ಮನವಿ ಮಾಡಲಾಗಿದೆ.   ಗುಣ ಮಟ್ಟದ ಸೀರೆಗಳ ತಯಾರಿಕೆಯಿಂದ ಮಾತ್ರ ರಫ್ತು ಉದ್ಯಮದಲ್ಲಿ ಚೇತರಿಕೆ ಕಂಡು ಲಾಭಾಂಶ ಕಾಣಬಹುದಾಗಿದ್ದು ನೇಕಾರ ಬಂಧುಗಳು ಹೊಸತನವನ್ನು ಉತ್ಪಾದನಾ ವಿಭಾಗದಲ್ಲಿ ಅಳವಡಿಸಬೇಕಿದೆ ಎಂದರು.
ಸಮಾಜ ಬಂಧುಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಹಾಗೆಯೇ ತಮ್ಮ ಆರೋಗ್ಯವನ್ನು ಜೋಪಾನ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲು ಯೋಜನೆ ಇದ್ದು ಯಶಸ್ವಿನಿ ಆರೋಗ್ಯ ವಿಮೆಯಡಿ ನೋಂದಣಿಗೆ ಹೋರಾಟ ಮಾಡಲಾಗುವುದು ಎಂದರು.
ಸತತ 5ನೇ ಬಾರಿಗೆ ಆನೇಕಲ್ ತಾಲೂಕು ನಿರ್ದೇಶಕರಾಗಿ ಆಯ್ಕೆಯಾದ ಜಿ. ನಂಜುಂಡಪ್ಪರವರ ಸೇವೆಯನ್ನು  ನೇಕಾರ ಬಂಧುಗಳಾದ ನರಸಿಂಹಯ್ಯ, ಮುನಿಸ್ವಾಮಣ್ಣ, ಹನುಮಂತಪ್ಪ, ರಾಮದಾಸ್, ತಾಲೂಕು ಕಸಾಪ ಅಧ್ಯಕ್ಷ ಹನುಮದಾಸ್, ನಗರ್ತ ಸಂಘದ ಮಾಜಿ ಅಧ್ಯಕ್ಷ ನಂಜುಂಡಪ್ಪ, ಶ್ರೀನಿವಾಸ್ ಅವರು ಪ್ರಶಂಸೆ ಮಾಡಿದರು.

ಬೆಳೆ ವಿಮಾ ಅನುಷ್ಠಾನಕ್ಕೆ ನಿರ್ಧಾರ
ರಾಮನಗರ: 2014-15ನೇ ಸಾಲಿಗೆ ರಾಷ್ಟ್ರೀಯ ಬೆಳೆ ವಿಮಾ ಕಾರ್ಯಕ್ರಮದಡಿ 2014ರ ಮುಂಗಾರು ಹಂಗಾಮಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದ್ದು, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯಾದ ಬಾಳೆ ಬೆಳೆಯನ್ನು ವಿಮಾ ವ್ಯಾಪ್ತಿಗೆ ಒಳಪಡಿಸಿದೆ. ಬೆಳೆ ಸಾಲ ಪಡೆದಿರುವ ಎಲ್ಲಾ ರೈತರು ಕಡ್ಡಾಯವಾಗಿ ವಿಮಾ ಯೋಜನೆಗೊಳಪಡಿಸುವುದು ಹಾಗೂ ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯು ಐಚ್ಛಿಕವಾಗಿರುತ್ತದೆ. 1 ಹೆಕ್ಟೇರ್ ಜಮೀನಿಗೆ ಗರಿಷ್ಠ 1 ಲಕ್ಷ ವಿಮೆ ಸೌಲಭ್ಯವಿದೆ. ರೈತರು ಪ್ರೀಮಿಯಂ ತುಂಬಬೇಕಿದ್ದು, ಸರ್ಕಾರವು ಶೇ.50ರಷ್ಟು ಸಹಾಯ ಧನ ನೀಡಲಿದೆ. ಬೆಳೆ ಸಾಲ ಪಡೆದ ರೈತರ ವರ್ಗಕ್ಕೆ 1 ಲಕ್ಷ ವಿಮಾ ಮೊತ್ತವಿದ್ದು, 12 ಸಾವಿರ ಪ್ರೀಮಿಯಂ ಪಾವತಿಸಬೇಕಿದೆ. ಈ ಪೈಕಿ 6 ಸಾವಿರವನ್ನು ಸರ್ಕಾರ ಭರಿಸಲಿದೆ. ಇತರೆ ರೈತರಿಗೆ ವಿಮಾ ಮೊತ್ತವು ಕನಿಷ್ಠ 50 ಸಾವಿರದಿಂದ ಗರಿಷ್ಠ 1 ಲಕ್ಷದವರೆಗಿದ್ದು, ಶೇ.50ರಷ್ಟು ಪ್ರೀಮಿಯಂ ಹಣವನ್ನು ಸರ್ಕಾರ ಭರಿಸಲಿದೆ. ಪ್ರೀಮಿಯಂ ಪಾವತಿಸಲು ಜೂ.30 ಕಡೆಯ ದಿನವಾಗಿದೆ.ಪ್ರೀಮಿಯಂ ಮೊತ್ತವನ್ನು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ., ಆಕ್ಸಿಸ್ ಬ್ಯಾಂಕ್ ಅಕೌಂಟ್ ನಂಬರ್ 00901020000870 ಪೇಯಬಲ್ ಅಟ್ ಬೆಂಗಳೂರು ಎಂದು ಡಿ.ಡಿ. ಪಡೆದು ರೈತರು ತಮ್ಮ ಖಾತೆಯಿರುವ ಬ್ಯಾಂಕ್‌ಗಳಲ್ಲಿ ಜೂ.30ರೊಳಗೆ ಪಾವತಿಸತಕ್ಕದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement