ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಿಕ್ಷಕರ ಸೇವಾ ಕೈ ಹೊತ್ತಗೆ ಬಿಡುಗಡೆ

Srinivasa Murthy VN
Updated On : 16 Jun 2014, 12:24 pm

ಆನೇಕಲ್ಲು: ಶಿಕ್ಷಕರ ಸಂಘದ ಪದಾಧಿಕಾರಿಗಳು  ಶಿಕ್ಷಕರ ನ್ಯಾಯಸಮ್ಮತವಾದ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್. ಶೇಖರಪ್ಪ ಕರೆ ನೀಡಿದ್ದಾರೆ.ಅವರು ತಾಲೂಕಿನ ಮುಗಳೂರಿನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಆನೇಕಲ್ ಶಾಖೆ ವತಿಯಿಂದ ಹೊರತರಲಾದ ಶಿಕ್ಷಕರ ಸೇವಾ ಕೈಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿ ಸೇವಾ ಕೈ ಹೊತ್ತಿಗೆಯು ಶಿಕ್ಷಕರಿಗೆ ವಿವಿಧ ಮಾಹಿತಿಗಳನ್ನು ದಾಖಲಿಸಲು ಉಪಯುಕ್ತವಾಗಿದೆ. ವೇತನದ ವಿವಿಧ ಶ್ರೇಣಿ, ತುಟ್ಟಿ ಭತ್ಯೆ, ರಜೆ ಸೇರಿದಂತೆ ಅಮೂಲ್ಯ ವೈಯುಕ್ತಿಕ ಮಾಹಿತಿಗಳನ್ನು ದಾಖಲಿಸಬಹುದು ಎಂದು ತಿಳಿಸಿದರು. ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಗೋವಿಂದ ಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ಸೊಣ್ಣಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಕೆ. ಶಿವ್ವಣ್ಣ ಇದ್ದರು.

'ಪೌರಾಣಿಕ ಪಾತ್ರ ಜೀವನಕ್ಕೆ ಪೂರಕ'
ರಾಮನಗರ: ಪೌರಾಣಿಕ ನಾಟಕಗಳಲ್ಲಿ ಬರುವ ಪ್ರತಿಯೊಂದು ಪಾತ್ರ ಹಾಗೂ ಸನ್ನಿವೇಶಗಳು ಮಾನವನ ಜೀವನಕ್ಕೆ ಪೂರಕವಾಗಿವೆ ಎಂದು ಪಿ.ಎಲ್.ಡಿ.ಬ್ಯಾಂಕ್‌ನ ನಿರ್ದೇಶಕ ನಂಜಪ್ಪ ಹೇಳಿದರು.ತಾಲೂಕಿನ ಕಸಬಾ ಹೋಬಳಿಯ ದೊಡ್ಡ ಮಣ್ಣುಗುಡ್ಡೆದೊಡ್ಡಿ ಗ್ರಾಮದಲ್ಲಿ ನಡೆದ ಕೊಲ್ಲಾಪುರದಮ್ಮ, ದೊಡ್ಡಮ್ಮ ಹಾಗೂ ಚೌಡೇಶ್ವರಿ ಹಬ್ಬ ಮತ್ತು ಕರಗ ಮಹೋತ್ಸವದ ಅಂಗವಾಗಿ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಸ್ಥಳಿಯ ಗ್ರಾ.ಪಂ ಸದಸ್ಯ ಆರ್.ಅನಂತು, ಮಾಜಿ ಸದಸ್ಯ ವೆಂಕಟಸ್ವಾಮಿ, ಗುತ್ತಿಗೆದಾರರಾದ ಸೊಲ್ಲಾಪುರದಯ್ಯ, ಮುನಿವೆಂಕಟಪ್ಪ, ಸೋಮಶೇಖರ್, ಮತ್ತಿತರರು ಭಾಗವಹಿಸಿದ್ದರು.

ಪುಸ್ತಕ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ರಾಮನಗರ: ಕನ್ನಡ ಪುಸ್ತಕ ಪ್ರಾಧಿಕಾರದಿಂದ 2013ನೇ ಸಾಲಿಗೆ ಯುವ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ರಚಿಸಿರುವ ಚೊಚ್ಚಲ ಕೃತಿಗಳಿಗೆ (ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ ಪ್ರಬಂಧ) ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಿದೆ. ಕೃತಿಯಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ, ನಿರ್ದಿಷ್ಟ ಸಂಗತಿ, ರಾಷ್ಟ್ರೀಯ ನಾಯಕರ ಕುರಿತು ನೇರ ಅಥವಾ ಪರೋಕ್ಷವಾಗಿ ಮನ ನೋಯಿಸುವಂತ ಅಥವಾ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವಂತಹ ಪ್ರಸ್ತಾಪ ಇರಬಾರದು. ಅರ್ಜಿದಾರರು 18 ರಿಂದ 35 ವರ್ಷದೊಳಗಿರಬೇಕು. ವಯಸ್ಸಿನ ದಾಖಲಾತಿ ಬಗ್ಗೆ ಅಧಿಕೃತ ಜನ್ಮ ದಾಖಲಾತಿ ಪ್ರಮಾಣ ಪತ್ರದೊಂದಿಗೆ, ಇದುವರೆಗೂ ಎಲ್ಲಿಯೂ ಚೊಚ್ಚಲ ಕೃತಿ ಪ್ರಕಟವಾಗದೇ ಇರುವ ಬಗ್ಗೆ ಸ್ವಯಂ ದೃಢೀಕರಣ ಪತ್ರ, ತಾವು ರಚಿಸಿರುವ ಚೊಚ್ಚಲ ಕೃತಿಯನ್ನು ಬೆರಳಚ್ಚು, ಡಿಟಿಪಿ ಮಾಡಿಸಿ, ತಮ್ಮ ಸ್ವವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜೂ.30ರ ಒಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು 560002 ಇಲ್ಲಿಗೆ ಕಳುಹಿಸಿಕೊಡಬೇಕಿದೆ.. ಮಾಹಿತಿಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು, ದೂ: 080-22484516, 22017704.

ದೇವನಹಳ್ಳಿ ಚೌಡೇಶ್ವರಿ ಮಂಡಲ ಪೂಜೆ
ದೇವನಹಳ್ಳಿ: ಇಲ್ಲಿನ ತಾಲೂಕು ಕಚೇರಿ ರಸ್ತೆಯಲ್ಲಿ ಕಳೆದ ಮೇ 5 ರ ಅಕ್ಷಯ ತೃತೀಯ ದಿನ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಶಕ್ತಿದೇವತೆ ಚೌಡೇಶ್ವರಿ ಸ್ಥಿರ ಬಿಂಬ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮ  ನಡೆಯಿತು. ಇದರ ಅಂಗವಾಗಿ ಜೂ. 19-20 ರಂದು ಮಂಡಲ ಪೂಜಾ ಮಹೋತ್ಸವ ಆಯೋಜಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.ಜೂ.19 ರಂದು ಸಂಜೆ ಶ್ರೀ ಚೌಡೇಶ್ವರಿ ತಾಯಿ ಉತ್ಸವ ಮೂರ್ತಿಯ ಹೂವಿನ ಅಲಂಕಾರದ ಪಲ್ಲಕ್ಕಿಯಲ್ಲಿ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಲಿದೆ.  ಜೂ.20 ರಂದು ದೇವಾಲಯದಲ್ಲಿ ಮಹಾಗಣಪತಿ ಮತ್ತು ಚಂಡಿಕಾಹೋಮ ನಂತರ ಪೂರ್ಣಾಹುತಿ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ದೇವಾಲಯ ಕಾರ್ಯದರ್ಶಿ ಪಿ.ಗಂಗಾಧರ್ ತಿಳಿಸಿದರು. ಸಂಜೆ ತಿರುಮಲ ತಿರುಪತಿ ದೇವಾಲಯ ಆಸ್ಥಾನ ಗಾಯಕರಾದ ಬಿ.ರಘುನಾಥ್ ತಂಡದವರಿಂದ ಅನ್ನಮಯ್ಯ ಸಂಕೀರ್ತನೆ ಸಹ ಆಯೋಜಿಸಲಾಗಿದೆ ಎಂದು ತಿಳಿಸಿದರು.

870 ವಾಹನ ಸವಾರರು ಚಾಲಕರ ವಿರುದ್ಧ ಪ್ರಕರಣ
ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿದ 870 ವಾಹನ ಸವಾರರು, ಚಾಲಕರ ವಿರುದ್ಧ ಪ್ರಕರಣ ದಾಖಲಿಸಿರುವ ನಗರ ಸಂಚಾರ ಪೊಲೀಸರು ಚಾಲನಾ ಪರವಾನಗಿ (ಡಿ.ಎಲ್) ಅಮಾನತು ಮಾಡಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಶನಿವಾರ ರಾತ್ರಿ 9 ರಿಂದ 2 ಗಂಟೆ ನಡುವೆ ನಗರದ 106 ಸ್ಥಳಗಳಲ್ಲಿ 12,078 ವಾಹನಗಳ ತಪಾಸಣೆ ನಡೆಸಲಾಗಿದೆ. ಈ ಪೈಕಿ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 81 ಪ್ರಕರಣಗಳು ದಾಖಲಾಗಿವೆ. 10 ಲಾರಿ, 42 ಆಟೋ, 135 ಕಾರು, 657 ದ್ವಿಚಕ್ರ ವಾಹನಗಳು, 8 ಮ್ಯಾಕ್ಸಿ ಕ್ಯಾಬ್ ಮತ್ತು 18 ಟೆಂಪೋ ಸೇರಿವೆ.

ಪ್ರತ್ಯೇಕ ಪ್ರಕರಣ: ಇಬ್ಬರು ಮಹಿಳೆಯರ ಆತ್ಮಹತ್ಯೆ
ಬೆಂಗಳೂರು:  ಪ್ರತ್ಯೇಕ ಪ್ರಕರಣಗಳಲ್ಲಿ ನಿವೃತ್ತ ನ್ಯಾಯಾಧೀಶರ ಮಗಳು ಸೇರಿ ಇಬ್ಬರು ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿವೃತ್ತ ನ್ಯಾಯಾಧೀಶ ದಿ. ಎಂ.ವಿ.ಪಾಟೀಲ್ ಮಗಳು ವಿಜಯಲಕ್ಷ್ಮೀ (48) ಎಂಬುವರು ಆರ್.ಟಿ.ನಗರದ ನ್ಯಾಯಾಧೀಶರ ಕಾಲೊನಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 20 ವರ್ಷ ಹಿಂದೆ ಮದುವೆಯಾಗಿದ್ದ ವಿಜಯಲಕ್ಷ್ಮೀ ಅವರಿಗೆ ಮಕ್ಕಳಿರಲಿಲ್ಲ. ಅಲ್ಲದೇ ಪತಿಯಿಂದ ವಿಚ್ಛೇದನ ಪಡೆದಿದ್ದರು. ತಂದೆ 6 ತಿಂಗಳ ಹಿಂದೆ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ತಾಯಿಯೊಂದಿಗೆ ವಾಸವಿದ್ದರು. ಕೆಲ ತಿಂಗಳ ಹಿಂದೆ ಕಿಡ್ನಿ ವೈಫಲ್ಯವಾಗಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ಅವರು ಡಯಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಮತ್ತೆ ಕಿಡ್ನಿ ವೈಫಲ್ಯವಾಗಿದ್ದ ಹಿನ್ನೆಲೆಯಲ್ಲಿ ಬೇಸರಗೊಂಡು ಶನಿವಾರ ರಾತ್ರಿ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಬೆಳಗ್ಗೆ ತಾಯಿ ಕಾಫಿ ಕೊಡಲು ಕೊಠಡಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement