ಕಾವೇರಿ ಬರಿದು ರೈತರಿಗೆ ಆತಂಕ
ನಾಪೋಕ್ಲು: ಕಳೆದ ವರ್ಷ ಕೊಡಗಿನಲ್ಲಿ ಜನವರಿಯಿಂದ ಜೂ.15ರ ವರೆಗೆ 21 ಇಂಚು ಮಳೆಯಾಗಿದ್ದರೆ, ಈ ಬಾರಿ ಮಳೆಯ ಪ್ರಮಾಣ 23 ಇಂಚು. ಆದರೆ, ಕಳೆದ ಬಾರಿ ಜೂನ್ ತಿಂಗಳಲ್ಲಿಯೇ ಸುಮಾರು 15 ಇಂಚು ಮಳೆಯಾಗಿದ್ದು, ಜೀವನದಿ ಕಾವೇರಿ ಒಡಲು ತುಂಬಿ ಹರಿದಿತ್ತು.
ಈ ವರ್ಷ ಜೂನ್‌ನಲ್ಲಿ ಕೇವಲ 1 ಇಂಚು ಮಳೆಯಾಗಿದ್ದು, ಕಾವೇರಿ ಒಡಲು ಇನ್ನೂ ಬರಿದಾಗಿದೆ. ಕೊಡಗಿನಾದ್ಯಂತ ಇನ್ನೂ ಮುಂಗಾರು ಸೂಚನೆ ಕಾಣದಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಹವಮಾನಾ ಇಲಾಖೆ ಅಭಿಪ್ರಾಯದಂತೆ ಜೂ. 5ರಂದು ಕೊಡಗಿಗೆ ಮುಂಗಾರು ಪ್ರವೇಶ ಆಗಬೇಕಿತ್ತು. ಈಗಾಗಲೇ ಕೊಡಗಿನಲ್ಲಿ ಕಾಫಿ ಗಿಡಗಳು ಕಾಯಿ ಬಿಟ್ಟಿದ್ದು, ಅದರಂತೆ ಕರಿಮೆಣಸಿನ ಬಳ್ಳಿಗಳು ಸಹ ಕಾಯಿ ಬಿಡುವ ಸಂದರ್ಭವಾಗಿದೆ. ಮಳೆ ಕೈಕೊಟ್ಟರೆ ಈ ಬಾರಿಯೂ ಕರಿಮೆಣಸು ಫಸಲು ಕೈಕೊಡುವ ಸಾಧ್ಯತೆಯಿದೆ. ಅದರಂತೆ ಕಾಫಿ ಬೆಳೆಗಾರರು ಸಹ ಸಂಕಷ್ಟಕ್ಕೆ ಒಳಗಾಗಬೇಕಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕೊಡಗನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.