ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು
ಕನ್ನಡಪ್ರಭ ವಾರ್ತೆ, ಕನಕಪುರ, ಜೂನ್ 16
ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ಕನಕಪುರ ತಾಲೂಕಿನ ತಮಿಳುನಾಡು ಗಡಿ ಗ್ರಾಮವಾದ ಹುಣಸನಹಳ್ಳಿ ಸಮೀಪದ ಗೊಲ್ಲರದೊಡ್ಡಿ ಬಳಿ ನಡೆದಿದೆ.
ಮೃತರಾದ ನತದೃಷ್ಟರನ್ನು ಮುರುಗನ್ (32), ಚಲುವಪ ್ಪ (55), ವೀರಮಣಿ (37) ಹಾಗೂ ಸೇಠ್ (30) ಎಂದು ಗುರುತಿಸಲಾಗಿದೆ. ಇವರೆಲ್ಲರೂ ತಮಿಳುನಾಡಿನ ಅಂಚೆಟ್ಟಿ ಹೋಬಳಿಯ ಉರುಗ್ಯಾ,
ತಗ್ಗಟ್ಟಿ, ಗೊರಕಂಪಟ್ಟಿ ಹಾಗೂ ವತ್ತಾಲಪುರಂ ಗ್ರಾಮದವರೆಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಯಲ್ಲಿ ಹುಣಸನಹಳ್ಳಿಯಿಂದ ತಮಿಳುನಾಡಿನ ಗಡಿಭಾಗವಾದ ಗೊಲ್ಲರದೊಡ್ಡಿ ಬಳಿ ಮುರುಗನ್ ಹಾಗೂ ಚಲುವಪ್ಪ ಟ್ರ್ಯಾಕ್ಟರ್‌ಗಾಗಿ ಪೆಟ್ರೋಲ್ ತರಲು ದ್ವಿಚಕ್ರ ವಾಹನದಲ್ಲಿ
ತೆರಳುತ್ತಿದ್ದರು. ಎದುರುಗಡೆಯಿಂದ ಮಾಗಡಿಗೆ ಕೆಲಸಕ್ಕಾಗಿ ತೆರಳಿದ್ದ ವೀರಮಣಿ ಹಾಗೂ ಸೇಠ್ ಅವರು ಮರಳುತ್ತಿದ್ದಾಗ ದಾರಿಯಲ್ಲಿ ಅಪಘಾತ ಸಂಭವಿಸಿ ನಾಲ್ಕು ಮಂದಿಯೂ ಸಾವನ್ನಪ್ಪಿದ್ದಾರೆ.
ಅಪಘಾತದ ರಭಸಕ್ಕೆ ನಾಲ್ಕೂಜನರ ಕೈಕಾಲುಗಳು ತುಂಡರಿಸಿದ್ದು ದೃಶ್ಯ ಭಯಾನಕವಾಗಿತ್ತು. ಸ್ಥಳ
ಪರಿಶೀಲನೆ ನಡೆಸಿದ ಪೊಲೀಸರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಎಲ್ಲರೂ ಮದ್ಯಪಾನ ಮಾಡಿದ್ದರು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆರಕ್ಷಕ ವೃತ್ತ ನಿರೀಕ್ಷಕ ಸಿದ್ದೇಗೌಡ, ಕೋಡಿಹಳ್ಳಿ ಉಪನಿರೀಕ್ಷಕ ಮಹದೇವಸ್ವಾಮಿ ಹಾಗೂ ಸಿಬ್ಬಂದಿ ಆಗಮಿಸಿ ಶವವನ್ನು ಕನಕಪುರದ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಗಳಿಗೆ ಒಪ್ಪಿಸಿದ್ದಾರೆ.
ವಿಪ ಮಾಜಿ ಸದಸ್ಯ ಎಸ್.ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯದೇವ್, ಪುರಸಭಾಧ್ಯಕ್ಷ ರಾಮಚಂದ್ರ, ಮಾಜಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಶಂಭುಲಿಂಗಶೆಟ್ಟಿ, ರಾಜೇಂದ್ರ ಮೊದಲಾದ ಮುಖಂಡರು ಮೃತರ ನಿವಾಸಗಳಿಗೆ ತೆರಳಿ ಸಾಂತ್ವನ ಹೇಳಿದ್ದಾರೆ.